ಶಿರಾ: 2023ರ ಶಿರಾ ಕ್ಷೇತ್ರದ ವಿಧಾನಸಭಾ ಚುನಾವಣೆಗೆ ಸಂಪೂರ್ಣ ಸಿದ್ಧತೆ ನಡೆದಿದ್ದು 267 ಮತಗಟ್ಟೆಗಳಲ್ಲಿ ಮತದಾರರು 15 ಅಭ್ಯರ್ಥಿಗಳ ಹಣೆಬರಹ ಬರೆಯಲಿದ್ದಾರೆ. ಮಂಗಳವಾರ ಇಲ್ಲಿನ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಡೆದ ಮಸ್ಟರಿಂಗ್ ಕಾರ್ಯಕ್ರಮದಲ್ಲಿ ಮತಗಟ್ಟೆ ಅಧಿಕಾರಿಗಳು ಮತದಾನಕ್ಕೆ ಬೇಕಾಗುವ ಯಂತ್ರೋಪಕರಣ ಪಡೆದು ನಿಗದಿತ ವಾಹನಗಳ ಮೂಲಕ ತಮ್ಮ ತಮ್ಮ ಮತಗಟ್ಟೆಗಳ ಕಡೆಗೆ ನಡೆದರು.
ಮತಗಟ್ಟೆಗಳ ಪೈಕಿ ನಗರ ಪ್ರದೇಶದಲ್ಲಿ 44 ಮತ್ತು ಗ್ರಾಮೀಣ ಪ್ರದೇಶದಲ್ಲಿ 223 ಮತಗಟ್ಟೆ ಸ್ಥಾಪಿಸಲಾಗಿದ್ದು, ಇವುಗಳಲ್ಲಿ 66 ಸೂಕ್ಷ್ಮ ಮತ್ತು 2 ಮತಗಟ್ಟೆಗಳು ವಲ್ನರೇಬಲ್ ಎಂದು ಗುರುತಿಸಲಾಗಿದೆ. ಮಹಿಳೆಯರಿಗಾಗಿ 5 ಸಖಿ ಮತಗಟ್ಟೆ ಸ್ಥಾಪಿಸಲಾಗಿದ್ದು, ಅಂಗವಿಕಲರಿಗಾಗಿ ಒಂದು ಮತಗಟ್ಟೆ, ಯುವಕರ ಹೆಸರಿನಲ್ಲಿ ಒಂದು ಮತಗಟ್ಟೆ ಸ್ಥಾಪಿಸಲಾಗಿದೆ. ಪ್ರತಿ ಮತಗಟ್ಟೆಗೆ ಒಬ್ಬ ಮತಗಟ್ಟೆ ಅಧಿಕಾರಿ, ಇಬ್ಬರು ಸಹಾಯಕ ಮತಗಟ್ಟೆ ಅಧಿಕಾರಿಗಳು ಮತ್ತು ಸ್ಥಳೀಯವಾಗಿ ಒಬ್ಬ ಡಿ ಗ್ರೂಪ್ ನೌಕರರನ್ನು ನೇಮಿಸಲಾಗಿದೆ. ವಿವಿಧ ಹಂತಗಳ ಮತಗಟ್ಟೆ ಅಧಿಕಾರಿಗಳಾಗಿ 1068 ಸಿಬ್ಬಂದಿ ಮತ್ತು ಹೆಚ್ಚುವರಿಯಾಗಿ 10% ಮೀಸಲು ಅಧಿಕಾರಿಗಳಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಯಾವುದೇ ವ್ಯತ್ಯಾಸಗಳಾದಲ್ಲಿ ಮೀಸಲು ಅಧಿಕಾರಿಗಳನ್ನು ಬಳಸಿಕೊಳ್ಳಲಾಗುವುದು.
ಮತಗಟ್ಟೆಗಳ ಭದ್ರತೆಗಾಗಿ ಅಗತ್ಯಕ್ಕೆ ತಕ್ಕಂತೆ ಭದ್ರತಾ ಸಿಬ್ಬಂದಿ ನೇಮಿಸಲಾಗುವುದು, ಇದಕ್ಕಾಗಿ ಪೊಲೀಸ್ ಮತ್ತು ಸಿಆರ್ ಪಿಎಫ್ ತುಕಡಿಗಳು ಸೇರಿದಂತೆ 1175 ಜನ ಸಿಬ್ಬಂದಿ ಲಭ್ಯವಿದ್ದು, ಸಾಮಾನ್ಯ ಮತಗಟ್ಟೆಯಲ್ಲಿ ಕನಿಷ್ಠ ಒಬ್ಬರು ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗುವುದು. ಇವರನ್ನು ನಿಗದಿತ ಸಮಯದೊಳಗೆ ಮತಗಟ್ಟೆಗೆ ತಲುಪಿಸಲು 41 ವಾಹನಗಳ ವ್ಯವಸ್ಥೆ ಮಾಡಿಕೊಂಡಿದೆ. ಬುಧವಾರ ಮತದಾನ ನಡೆದ ನಂತರ ಇದೇ ವಾಹನಗಳು ಸಿಬ್ಬಂದಿಯನ್ನು ವಾಪಸ್ ಕರೆ ತರಲಿದ್ದು, ಡಿ ಮಸ್ಟರಿಂಗ್ ನಡೆಯಲಿದೆ ಎಂದು ಚುನಾವಣಾ ಅಧಿಕಾರಿ ನಿಶ್ಚಯ್ ವಿವರ ನೀಡಿದರು.
25 ಮಂದಿ ನಾಪತ್ತೆ
ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ವಿವಿಧ ಹಂತದ ಮತಗಟ್ಟೆ ಅಧಿಕಾರಿಗಳ ಪೈಕಿ ಮಸ್ಟರಿಂಗ್ ವೇಳೆ 25 ಮಂದಿ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ನಿಗದಿತ ಸಮಯದಲ್ಲಿ ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಿದ್ದ 25 ಅಧಿಕಾರಿಗಳು ಕೊನೆ ಹಂತದ ತಯಾರಿ ವೇಳೆ ಗೈರಾಗಿರುವುದು ಕಂಡು ಬಂದಿದ್ದು, ಅವರನ್ನು ಫೋನ್ ಮೂಲಕ ಸಂಪರ್ಕಿಸಲು ಯತ್ನಿಸಲಾಗುತ್ತಿದೆ. ಒಂದು ವೇಳೆ ಅವರು ನಿಗದಿತ ಸಮಯದೊಳಗೆ ಲಭ್ಯರಾಗದಿದ್ದಲ್ಲಿ ಮೀಸಲು ಅಧಿಕಾರಿಗಳನ್ನು ಬಳಸಿಕೊಂಡು ಚುನಾವಣೆ ನಡೆಸಲಾಗುವುದು. ಗೈರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಮಸ್ಟರಿಂಗ್ ಸಮಯದಲ್ಲಿ ಪ್ರಕ್ರಿಯೆ ವೀಕ್ಷಣಾಧಿಕಾರಿಯಾಗಿ ಆಗಮಿಸಿದ್ದ ಸಿಇಒ ವಿದ್ಯಾಕುಮಾರಿ ಮಾಧ್ಯಮಗಳೊಂದಿಗೆ ಮಾತನಾಡಿ, ಅಧಿಕಾರಿಗಳು ಗೈರಾಗಿರುವ ವಿಚಾರವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅವರ ಮಾರ್ಗದರ್ಶನದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
Comments are closed.