ತುಮಕೂರು: ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ 2683 ಮತಗಟ್ಟೆಗಳಲ್ಲಿ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸಲು ಚುನಾವಣಾ ಆಯೋಗದ ಸೂಚನೆ ಮೇರೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ.
ನಾಳೆ ಜಿಲ್ಲೆಯ 2683 ಮತಗಟ್ಟೆಗಳಲ್ಲಿ ನಡೆಯುವ ಮತದಾನ ಕಾರ್ಯಕ್ಕೆ 11,644 ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜಿಸಲಾಗಿದ್ದು, ಈ ಅಧಿಕಾರಿಗಳು ಮತ್ತು ಸಿಬ್ಬಂದಿ ಜಿಲ್ಲಾ ಕೇಂದ್ರ ತುಮಕೂರು ಸೇರಿದಂತೆ 10 ತಾಲ್ಲೂಕು ಕೇಂದ್ರಗಳಿಂದಲೂ 11 ವಿಧಾನಸಭಾ ಕ್ಷೇತ್ರಗಳಿಗೆ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್ ಪಡೆದು ಬಸ್ ಗಳಲ್ಲಿ ನಿಯೋಜನೆಗೊಂಡಿರುವ ಮತಗಟ್ಟೆಗಳಿಗೆ ತೆರಳಿದರು.
ಚಿಕ್ಕನಾಯಕನ ಹಳ್ಳಿ ಕ್ಷೇತ್ರದ 262 ಮತಗಟ್ಟೆಗಳಿಗೆ 1152 ಅಧಿಕಾರಿಗಳು ಮತ್ತು ಸಿಬ್ಬಂದಿ, ತಿಪಟೂರು ಕ್ಷೇತ್ರದ 233 ಮತಗಟ್ಟೆಗಳಿಗೆ 1024 ಅಧಿಕಾರಿಗಳು, ತುರುವೇಕೆರೆ ಕ್ಷೇತ್ರದ 229 ಮತಗಟ್ಟೆಗಳಿಗೆ 1008 ಅಧಿಕಾರಿಗಳು, ಕುಣಿಗಲ್ ಕ್ಷೇತ್ರದ 264 ಮತಗಟ್ಟೆಗಳಿಗೆ 1160 ಅಧಿಕಾರಿಗಳು, ತುಮಕೂರು ನಗರ ಕ್ಷೇತ್ರದ 254 ಮತಗಟ್ಟೆಗಳಿಗೆ 1116 ಅಧಿಕಾರಿಗಳು ಮತ್ತು ಸಿಬ್ಬಂದಿ, ತುಮಕೂರು ಗ್ರಾಮಾಂತರ ಕ್ಷೇತ್ರದ 226 ಮತಗಟ್ಟೆಗಳಿಗೆ 996 ಅಧಿಕಾರಿಗಳು ಮತ್ತು ಸಿಬ್ಬಂದಿ, ಕೊರಟಗೆರೆ ಕ್ಷೇತ್ರದ 242 ಮತಗಟ್ಟೆಗಳಿಗೆ 904 ಅಧಿಕಾರಿಗಳು, ಗುಬ್ಬಿ ಕ್ಷೇತ್ರದ 212 ಮತಗಟ್ಟೆಗಳಿಗೆ 932 ಸಿಬ್ಬಂದಿ, ಶಿರಾ ಕ್ಷೇತ್ರದ 267 ಮತಗಟ್ಟೆಗಳಿಗೆ 1176 ಅಧಿಕಾರಿಗಳು, ಪಾವಗಡ ಕ್ಷೇತ್ರದ 246 ಮತಗಟ್ಟೆಗಳಿಗೆ 1084 ಅಧಿಕಾರಿಗಳು ಹಾಗೂ ಮಧುಗಿರಿ ಕ್ಷೇತ್ರದ 248 ಮತಗಟ್ಟೆಗಳಿಗೆ 1092 ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಲಾಗಿದೆ.
ತುಮಕೂರು ನಗರ ಕ್ಷೇತ್ರದ ಮತಗಟ್ಟೆಗಳಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ಮಸ್ಟರಿಂಗ್ ಕೇಂದ್ರದಿಂದ ಅಧಿಕಾರಿಗಳು ಮತ್ತು ಸಿಬ್ಬಂದಿ ಮತಯಂತ್ರಗಳೊಂದಿಗೆ ತೆರಳಿದರು. ತುಮಕೂರು ಗ್ರಾಮಾಂತರ ಕ್ಷೇತ್ರದ ಮತಗಟ್ಟೆಗಳಿಗೆ ಸರ್ವೋದಯ ಪ್ರಥಮ ದರ್ಜೆ ಕಾಲೇಜು ಮಸ್ಟರಿಂಗ್ ಕೇಂದ್ರದಿಂದ, ಚಿಕ್ಕನಾಯಕನ ಹಳ್ಳಿ ಕ್ಷೇತ್ರದ ಮತಗಟ್ಟೆಗಳಿಗೆ ಚಿ.ನಾ.ಹಳ್ಳಿಯ ಸರ್ಕಾರಿ ಸ್ವತಂತ್ರ ಪ.ಪೂ. ಕಾಲೇಜು ಮಸ್ಟರಿಂಗ್ ಕೇಂದ್ರದಿಂದ, ತಿಪಟೂರು ಕ್ಷೇತ್ರದ ಮತಗಟ್ಟೆಗಳಿಗೆ ತಿಪಟೂರಿನ ಸರ್ಕಾರಿ ಬಾಲಕರ ಪ.ಪೂ. ಕಾಲೇಜು, ತುರುವೇಕೆರೆಯ ಮತಗಟ್ಟೆಗಳಿಗೆ ತುರುವೇಕೆರೆ ಸರ್ಕಾರಿ ಪ.ಪೂ. ಕಾಲೇಜು, ಕುಣಿಗಲ್ ಮತಗಟ್ಟೆಗಳಿಗೆ ಸರ್ಕಾರಿ ಮಹಾತ್ಮಗಾಂಧಿ ಪ.ಪೂ. ಕಾಲೇಜು, ಗುಬ್ಬಿ ಮತಗಟ್ಟೆಗಳಿಗೆ ಮಾರನಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೊರಟಗೆರೆಯ ಸರ್ಕಾರಿ ಪ.ಪೂ. ಕಾಲೇಜು, ಶಿರಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಾವಗಡ ಸರ್ಕಾರಿ ಪ.ಪೂ. ಕಾಲೇಜು ಹಾಗೂ ಮಧುಗಿರಿ ಕ್ಷೇತ್ರಕ್ಕೆ ಮಧುಗಿರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಸ್ಟರಿಂಗ್ ಕೇಂದ್ರಗಳಿಂದ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಬಸ್ ಗಳಲ್ಲಿ ನಿಯೋಜನೆಗೊಂಡಿರುವ ಮತಗಟ್ಟೆಗಳಿಗೆ ಕರೆದೊಯ್ಯಲಾಯಿತು.
2683 ಮತಗಟ್ಟೆಗಳಿಗೆ 362 ಬಸ್ ಗಳು, 106 ಜೀಪ್ ಬುಲೇರೋ, ಮಿನಿಬಸ್ ಸೇರಿದಂತೆ ಒಟ್ಟು 564 ವಾಹನ ಬಳಸಿಕೊಳ್ಳಲಾಗಿದ್ದು, 2683 ಮತಗಟ್ಟೆಗಳ ಪೈಕಿ 510 ಕ್ರಿಟಿಕಲ್ ಮತಗಟ್ಟೆ ಹಾಗೂ 1363 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಅಳವಡಿಸಲಾಗಿದೆ.
2683 ಮತಗಟ್ಟೆಗಳಿಗೆ 3225 ಕಂಟ್ರೋಲ್ ಯೂನಿಟ್ ಹಾಗೂ 3225 ಬ್ಯಾಲೆಟ್ ಯೂನಿಟ್ ಗಳನ್ನು ಶೇ. 120 ರಷ್ಟು ಹಂಚಿಕೆ ಮಾಡಲಾಗಿದೆ.
ಮತದಾರರು ಮತದಾರರ ಗುರುತಿನ ಚೀಟಿ ತೋರಿಸಿ ಮತ ಚಲಾಯಿಸಬಹುದಾಗಿದೆ. ಒಂದು ವೇಳೆ ಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್ ಪೋರ್ಟ್, ಭಾವಚಿತ್ರ ಇರುವ ಬ್ಯಾಂಕ್ ಪಾಸ್ ಪುಸ್ತಕ, ಪಾನ್ ಕಾರ್ಡ್, ನರೇಗಾ ಉದ್ಯೋಗ ಗುರುತಿನ ಚೀಟಿ ಸೇರಿದಂತೆ ವಿವಿಧ 13 ಗುರುತಿನ ಚೀಟಿ ಬಳಸಿ ಮತದಾನ ಮಾಡಲು ಅವಕಾಶ ಇದೆ.
3 ಸಾವಿರ ಪೊಲೀಸರ ನಿಯೋಜನೆ
ಜಿಲ್ಲೆಯಲ್ಲಿ ನಾಳೆ ನಡೆಯಲಿರುವ ಮತದಾನದ ವೇಳೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಬಂದೋ ಬಸ್ತ್ ಕಾರ್ಯಕ್ಕಾಗಿ 3 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ
Comments are closed.