ಶಿರಾ: ಪ್ರಸ್ತುತ ವರ್ಷ ಎಸ್ಎಸ್ಎಲ್ ಸಿ ಮತ್ತು ಪಿಯು ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳ ಸಾಧನೆ ಪ್ರೋತ್ಸಾಹಿಸಲು ಅತಿ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡುವ ಮೂಲಕ ಪ್ರತಿಭಾ ಪುರಸ್ಕಾರ ನೀಡಲು ನಮ್ಮ ಸಂಸ್ಥೆ ತೀರ್ಮಾನಿಸಿದೆ ಎಂದು ಜೆಮ್ಸ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಚಿದಾನಂದ ಎಂ.ಗೌಡ ನುಡಿದರು.
ನಗರದ ಸೇವಾ ಸದನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವ್ಯಕ್ತಿಯ ಹಾಗೂ ಊರಿನ ಅಭಿವೃದ್ಧಿಗೆ ಶಿಕ್ಷಣವೊಂದೇ ಸೂಕ್ತವಾದ ಮಾರ್ಗ ಎಂದು ನಂಬಿರುವ ನಾನು ಕಳೆದ 22 ವರ್ಷಗಳ ಹಿಂದೆ ಶಿರಾದಲ್ಲಿ ಜೆಮ್ಸ್ ಟ್ರಸ್ಟ್ ಸ್ಥಾಪಿಸಿ ಅದರ ಮೂಲಕ ವಿದ್ಯಾ ಸಂಸ್ಥೆ ಸ್ಥಾಪಿಸಿ ಭವಿಷ್ಯದ ನಾಗರಿಕರಿಗೆ ವಿದ್ಯೆ ನೀಡುವ ಕೆಲಸ ಮಾಡುತ್ತಿದ್ದೇನೆ. ಇಲ್ಲಿವರೆಗೆ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಚಿತ ಶಿಕ್ಷಣ ಪಡೆಯುವ ಮೂಲಕ ಭವಿಷ್ಯ ರೂಪಿಸಿಕೊಂಡಿದ್ದಾರೆ. ಇದಕ್ಕಾಗಿ 20 ಕೋಟಿಗೂ ಹೆಚ್ಚು ಹಣ ವಿನಿಯೋಗವಾಗಿದೆ ಎಂದರು.
ಪ್ರಸ್ತುತ ವರ್ಷ ಜೆಮ್ಸ್ ಎಜುಕೇಷನ್ ಟ್ರಸ್ಟ್ ವತಿಯಿಂದ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ.95ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ತಲಾ 3 ಸಾವಿರ ರೂ ಮತ್ತು ಶೇ.90 ರಿಂದ 95ರ ವರೆಗೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ತಲಾ 2 ಸಾವಿರ ಮತ್ತು ಶೇ.85 ರಿಂದ 90 ಅಂಕ ಪಡೆದ ವಿದ್ಯಾರ್ಥಿಗಳಿಗೆ ತಲಾ ಒಂದು ಸಾವಿರ ರೂ. ವಿದ್ಯಾರ್ಥಿ ವೇತನ ನೀಡಲು ಉದ್ದೇಶಿಸಿದ್ದು, ಇದಕ್ಕೆ ಸಂಬಂಧಿಸಿದ ಅರ್ಜಿಯನ್ನು ಶುಕ್ರವಾರದಿಂದ ಬುಕ್ಕಾಪಟ್ಟಣ ರಸ್ತೆಯ ಸೇವಾ ಸದನದಲ್ಲಿ ನೀಡಲಾಗುವುದು.
ಅರ್ಹ ವಿದ್ಯಾರ್ಥಿಗಳು ಅರ್ಜಿ ಜೊತೆಯಲ್ಲಿ ಶಾಲೆಯಿಂದ ಪಡೆದ ದೃಢೀಕೃತ ಅಂಕಪಟ್ಟಿ ಲಗತ್ತಿಸಿ ಇದೇ ತಿಂಗಳ 20ನೆ ತಾರೀಖಿನೊಳಗೆ ಇಲ್ಲಿಯೇ ಸಲ್ಲಿಸಬೇಕಿದೆ. ಹೆಚ್ಚಿನ ವಿವರಗಳಿಗೆ ಮೊ.9964800281 ನ್ನು ಸಂಪರ್ಕಿಸಬೇಕೆಂದು ತಿಳಿಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ಹೆಚ್ಚು ಅಂಕ ಪಡೆದ ತಾಲ್ಲೂಕಿನ 100 ಜನ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ಪಿಯು ಶಿಕ್ಷಣ ನೀಡಲು ಯೋಜನೆ ರೂಪಿಸಿದ್ದು, ತಾಲ್ಲೂಕಿನ ವಿವಿಧ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕ ಇತರೆ ವಿದ್ಯಾರ್ಜನೆಗೆ ಬೇಕಾಗುವ ಪರಿಕರ ನೀಡಲು ಸುಮಾರು 2 ಕೋಟಿ ಹಣ ವಿನಿಯೋಗಿಸುತ್ತಿರುವುದಾಗಿ ವಿವರಿಸಿದರು.
Comments are closed.