ತುಮಕೂರು: ಜಿಲ್ಲೆಯ ಹನ್ನೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಸುಗಮವಾಗಿ ನಡೆದಿದ್ದು, ಮತದಾರ ಅಭ್ಯರ್ಥಿಗಳ ಭವಿಷ್ಯ ಬರೆದಿದ್ದಾನೆ. ಶನಿವಾರ ಮತ ಎಣಿಕೆ ನಂತರ ಅಭ್ಯರ್ಥಿ ಗಳ ಹಣೆಬರಹ ಹೊರ ಬೀಳಲಿದೆ. ಈಗಾಗಲೇ ಅಭ್ಯರ್ಥಿ ಗಳ ಎದೆಯಲ್ಲಿ ಢವಢವ ಶುರು ವಾಗಿದ್ದು, ನಮ್ಮ ಫಲಿತಾಂಶ ಏನಾಗಲಿದೆಯೋ ಎಂಬ ಆತಂಕವೂ ಶುರುವಾಗಿದೆ.
ಅಭ್ಯರ್ಥಿ ಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದ್ದು, ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತ ಯಂತ್ರಗಳನ್ನು (ಇವಿಎಂ) ಸ್ಟ್ರಾಂಗ್ ರೂಮ್ನಲ್ಲಿ ಇಡಲಾಗಿದ್ದು, ಅರೆಸೇನಾ ಪಡೆ (ಬಿಎಸ್ಎಫ್), ಜಿಲ್ಲಾ ಸಶಸ್ತ್ರ ಪಡೆ ಹಾಗೂ ಜಿಲ್ಲಾ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.
ತುಮಕೂರು ನಗರ ಕ್ಷೇತ್ರ: ತುಮಕೂರು ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾಗಿ ಶಾಸಕ ಜ್ಯೋತಿಗಣೇಶ್, ಕಾಂಗ್ರೆಸ್ ಅಭ್ಯರ್ಥಿಯಾಗಿ ಇಕ್ಬಾಲ್ ಅಹಮದ್, ಜೆಡಿಎಸ್ ಅಭ್ಯರ್ಥಿಯಾಗಿ ಗೋವಿಂದ ರಾಜು, ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಸಚಿವ ಸೊಗಡು ಶಿವಣ್ಣ ಸ್ಪರ್ಧೆ ಮಾಡಿದ್ದು ಮತದಾರರು ಯಾರಿಗೆ ಮತ ಮುದ್ರೆ ಒತ್ತಿದ್ದಾರೆ ಎಂಬ ಕುತೂಹಲವಿದೆ.
ತುಮಕೂರು ಗ್ರಾಮಾಂತರ ಕ್ಷೇತ್ರ: ಇಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಶಾಸಕ ಗೌರಿಶಂಕರ್, ಬಿಜೆಪಿಯಿಂದ ಮಾಜಿ ಶಾಸಕ ಸುರೇಶ್ ಗೌಡ, ಕಾಂಗ್ರೆಸ್ ಹುರಿಯಾಳಾಗಿ ಹೊಸ ಮುಖ ಷಣ್ಮುಖಪ್ಪ ಸ್ಪರ್ಧೆ ಮಾಡಿದ್ದು, ಜೆಡಿಎಸ್, ಬಿಜೆಪಿ ಅಭ್ಯರ್ಥಿ ಗಳ ಮಧ್ಯೆ ನೇರ ಕದನ ನಡೆದಿದ್ದು, ಅಂತಿಮವಾಗಿ ಗೆಲುವು ಯಾರಿಗೆ ಎಂಬ ಕತೂಹಲ ಮನೆ ಮಾಡಿದೆ.
ಕುಣಿಗಲ್ ಕ್ಷೇತ್ರ: ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಗಿ ಶಾಸಕ ಡಾ.ರಂಗನಾಥ್, ಜೆಡಿಎಸ್ ನಿಂದ ಡಾ.ರವಿ, ಬಿಜೆಪಿ ಅಭ್ಯರ್ಥಿಯಾಗಿ ಡಿ.ಕೃಷ್ಣಕುಮಾರ್ ಕಣದಲ್ಲಿ ಮದದಾರರು ಯಾರ ಪರ ಒಲವು ತೋರಿರಬಹುದು ಎಂಬ ಕುತೂಹಲವಿದೆ.
ತುರುವೇಕೆರೆ ಕ್ಷೇತ್ರ: ಇಲ್ಲಿ ಬಿಜೆಪಿಯಿಂದ ಶಾಸಕ ಮಸಾಲ ಜಯರಾಂ, ಜೆಡಿಎಸ್ ನಿಂದ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ, ಕಾಂಗ್ರೆಸ್ ನಿಂದ ಮಾಜಿ ಎಂಎಲ್ಸಿ ಬೆಮೆಲ್ ಕಾಂತರಾಜು ಸ್ಪರ್ಧೆ ಮಾಡಿದ್ದು, ಮತದಾರರು ಯಾರಿಗೆ ಗೆಲುವು ನೀಡಿದ್ದಾರೋ ಗೊತ್ತಿಲ್ಲ.
ತಿಪಟೂರು ಕ್ಷೇತ್ರ: ಇಲ್ಲಿ ಬಿಜೆಪಿಯಿಂದ ಸಚಿವ ಬಿ.ಸಿ.ನಾಗೇಶ್, ಕಾಂಗ್ರೆಸ್ ನಿಂದ ಮಾಜಿ ಶಾಸಕ ಕೆ.ಷಡಕ್ಷರಿ, ಜೆಡಿಎಸ್ನಿಂದ ಸಮಾಜ ಸೇವಕ ಶಾಂತಕುಮಾರ್ ಸ್ಪರ್ಧೆ ಮಾಡಿದ್ದು, ಈ ಮೂವರ ಸೆಣಸಾಟದಲ್ಲಿ ಯಾರು ಗೆದ್ದು ಬೀಗುವರೋ..?
ಚಿಕ್ಕನಾಯಕನ ಹಳ್ಳಿ ಕ್ಷೇತ್ರ: ಇಲ್ಲಿ ಬಿಜೆಪಿ ಅಭ್ಯರ್ಥಿ ಯಾಗಿ ಸಚಿವ ಜೆ.ಸಿ.ಮಾಧುಸ್ವಾಮಿ, ಜೆಡಿಎಸ್ನಿಂದ ಸಿ.ಬಿ.ಸುರೇಶ್ ಬಾಬು, ಕಾಂಗ್ರೆಸ್ ಅಭ್ಯರ್ಥಿ ಯಾಗಿ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಸ್ಪರ್ಧೆ ಮಾಡಿದ್ದು, ಮೂವರಲ್ಲಿ ಯಾರು ವಿಜಯ ಮಾಲೆ ತೊಡಲಿದ್ದಾರೆ ತಿಳಿಯದು.
ಗುಬ್ಬಿ ಕ್ಷೇತ್ರ: ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಎಸ್.ಆರ್.ಶ್ರೀನಿವಾಸ್, ಬಿಜೆಪಿಯಿಂದ ದಿಲೀಪ್ ಕುಮಾರ್, ಜೆಡಿಎಸ್ನಿಂದ ನಾಗರಾಜು ಸ್ಪರ್ಧಿಸಿದ್ದು ಮತದಾರ ಯಾರ ಮೇಲೆ ನಂಬಿಕೆ ಇಟ್ಟು ಗೆಲುವಿನ ದಾರಿ ತೋರಿಸಿದ್ದಾನೋ ಗೊತ್ತಿಲ್ಲ.
ಕೊರಟಗೆರೆ ಕ್ಷೇತ್ರ: ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಮುಖ್ಯ ಡಿಸಿಎಂ ಡಾ.ಜಿ.ಪರಮೇಶ್ವರ್, ಜೆಡಿಎಸ್ನಿಂದ ಸುಧಾಕರ್ ಲಾಲ್, ಬಿಜೆಪಿಯಿಂದ ಹೊಸ ಮುಖ ಅನಿಲ್ ಕುಮಾರ್ ಸ್ಪರ್ಧೆ ಮಾಡಿದ್ದು, ಮೂವರ ಕದನದಲ್ಲಿ ಗೆಲುವಿನ ಸಂಭ್ರಮ ಪಡೋರು ಯಾರು ಎಂಬುದೇ ಕುತೂಹಲ.
ಮಧುಗಿರಿ ಕ್ಷೇತ್ರ: ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಶಾಸಕ ಕೆ.ಎನ್.ರಾಜಣ್ಣ, ಜೆಡಿಎಸ್ನಿಂದ ಎಂ.ವಿ.ವೀರಭದ್ರಯ್ಯ, ಬಿಜೆಪಿಯಿಂದ ಎಲ್.ಸಿ.ನಾಗರಾಜ್ ಸ್ಪರ್ಧೆ ಮಾಡಿದ್ದು ಮೂವರಲ್ಲಿ ಯಾರು ಗೆಲುವಿನ ನಗೆ ಬೀರುವರೋ?
ಪಾವಗಡ ಕ್ಷೇತ್ರ: ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ವೆಂಕಟೇಶ್, ಜೆಡಿಎಸ್ನಿಂದ ಮಾಜಿ ಶಾಸಕ ತಿಮ್ಮರಾಯಪ್ಪ, ಬಿಜೆಪಿಯಿಂದ ಕೃಷ್ಣಾ ನಾಯ್ಕ ಸ್ಪರ್ಧೆ ಮಾಡಿದ್ದು ಯಾರು ವಿನ್ ಆಗ್ತಾರೆ ಎಂಬ ಕುತೂಹಲವಿದೆ.
ಶಿರಾ ಕ್ಷೇತ್ರ: ಇಲ್ಲಿ ಬಿಜೆಪಿಯಿಂದ ಶಾಸಕ ರಾಜೇಶ್ ಗೌಡ, ಕಾಂಗ್ರೆಸ್ ನಿಂದ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಜೆಡಿಎಸ್ ಅಭ್ಯರ್ಥಿಯಾಗಿ ಉಗ್ರೇಶ್ ಸ್ಪರ್ಧೆ ಮಾಡಿದ್ದು, ಮತದಾರರು ಯಾರನ್ನು ಗೆಲುವಿನ ಮೆಟ್ಟಿಲು ಹತ್ತಿಸಿದ್ದಾರೋ ಗೊತ್ತಿಲ್ಲ.
ಒಟ್ಟಾರೆ ಮತದಾನ ಮುಗಿದು ಮತದಾರರು ನೀಡಿರುವ ತೀರ್ಪು ಶನಿವಾರ ಹೊರ ಬೀಳಲಿದೆ, ಯಾರು ಗೆದ್ದು ಬೀಗುವರು, ಯಾರು ಸೋತು ಮನೆ ಸೇರುವರು ಎಂಬುದನ್ನು ತಿಳಿಯಲು ಒಂದು ದಿನವಷ್ಟೇ ಬಾಕಿ ಉಳಿದಿದೆ.
Comments are closed.