ತುರುವೇಕೆರೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಕಾಲಿಕ ಚಿಕಿತ್ಸೆ ದೊರಕದೆ ಬಡ ಮಹಿಳೆಯೊಬ್ಬರು ಆಸ್ಪತ್ರೆ ಆವರಣದಲ್ಲಿ ಕೊನೆಯುಸಿರೆಳೆದ ಘಟನೆ ನಡೆದಿದೆ.
ಚಿಕಿತ್ಸೆಯಿಂದ ವಂಚಿತಳಾಗಿ ಕೊನೆಯುಸಿರೆಳೆದ ಮಹಿಳೆ ನಿರ್ಮಲಾ (40) ತುರುವೇಕೆರೆ ಪಟ್ಟಣದ ಮಡಿವಾಳರ ಬೀದಿ ನಿವಾಸಿಯಾಗಿದ್ದಾರೆ. ಗುರುವಾರ ರಾತ್ರಿ 11 ರ ಸುಮಾರಿನಲ್ಲಿ ನಿರ್ಮಲಾ ಅವರಿಗೆ ತೀವ್ರ ಎದೆ ನೋವು ಕಾಣಿಸಿಕೊಂಡಿದೆ. ಗಾಬರಿಗೊಂಡ ಪತಿ ಗಂಗಾಧರ್ ಮಕ್ಕಳ ನೆರವಿನೊಂದಿಗೆ ಪಟ್ಟಣದ ಆಸ್ಪತ್ರೆಗೆ ಚಿಕಿತ್ಸೆಗೆಂದು ಪತ್ನಿಯನ್ನು ಕರೆ ತಂದಿದ್ದಾರೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯ ಕರ್ತವ್ಯ ಪಾಲನೆ ಮಾಡಬೇಕಾದ ಡಾ.ಮುರುಳಿ ಅವರು ಆಸ್ಪತ್ರೆಯಲ್ಲಿರದ ಕಾರಣ ಮಹಿಳೆಗೆ ತುರ್ತು ಚಿಕಿತ್ಸೆ ಅಲಭ್ಯವಾದದೆ ಚಿಕಿತ್ಸೆ ತಡವಾದ ಹಿನ್ನಲೆಯಲ್ಲಿ ನಿರ್ಮಲಾ ಆಸ್ಪತ್ರೆಯ ಆವರಣದಲ್ಲಿಯೇ ಮೃತಪಟ್ಟಿದ್ದಾರೆ. ವೈದ್ಯರ ಕರ್ತವ್ಯ ನಿರ್ಲಕ್ಷತೆಯಿಂದ ಮಹಿಳೆಯೊಬ್ಬರು ಸಾವು ಸಂಭವಿಸಿರುವ ಬಗ್ಗೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಮೃತ ನಿರ್ಮಲಾ ಪತಿ ಗಂಗಾಧರ್ ಈ ಬಗ್ಗೆ ಪ್ರತಿಕ್ರಿಯಿಸಿ ಗುರುವಾರ ರಾತ್ರಿ ಎದೆನೋವಿನಿಂದ ಬಳುತ್ತಿದ್ದ ನನ್ನ ಪತ್ನಿ ನಿರ್ಮಲಾಳನ್ನು ಚಿಕಿತ್ಸೆಗೆಂದು ಸರಕಾರಿ ಆಸ್ಪತ್ರೆಗೆ ಕರೆ ತಂದೆವು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ವೈದ್ಯರೇ ಇರಲಿಲ್ಲ. ಕೇಳಿದರೆ ಮನೆಗೆ ಹೋಗಿದ್ದಾರೆಂಬ ಉತ್ತರ ಸಿಬ್ಬಂದಿ ನೀಡಿದರು. ನನ್ನ ಪತ್ನಿಗೆ ಸಕಾಲದಲ್ಲಿ ಚಿಕಿತ್ಸೆ ದೊರಕದೆ ಆಸ್ಪತ್ರೆಯಲ್ಲಿ ಮೃತಪಟ್ಟರು. ನನ್ನ ಪತ್ನಿಯ ಸಾವಿಗೆ ವೈದ್ಯರ ಕರ್ತವ್ಯ ನಿರ್ಲಕ್ಷ್ಯವೇ ಕಾರಣ. ನನ್ನ ಪತ್ನಿಯ ಜೀವದ ಜೊತೆ ಚೆಲ್ಲಾಟವಾಡಿದ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ರಾಜ್ಯ ಮಾಹಿತಿ ಹಕ್ಕು ಹಾಗೂ ಸಾಮಾಜಿಕ ಹೋರಾಟಗಾರ ವೇದಿಕೆಯ ತಾಲೂಕು ಅಧ್ಯಕ್ಷ ರುದ್ರೇಶ್ ಮಾತನಾಡಿ, ಕರ್ತವ್ಯ ನಿರತ ವೈದ್ಯ ಡಾ.ಮುರುಳಿಧರ ಅವರ ಕರ್ತವ್ಯ ನಿರ್ಲಕ್ಷ್ಯದಿಂದ ಬಡ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಸಾರ್ವಜನಿಕ ಆಸ್ಪತ್ರೆಗೆ ಕೂಗಳತೆ ದೂರದಲ್ಲಿ ತಮ್ಮದೆ ಒಡೆತನದ ಆಸ್ಪತ್ರೆಯನ್ನು ಡಾ.ಮುರುಳಿ ಹೊಂದಿದ್ದಾರೆ. ಸರಕಾರಿ ಆಸ್ಪತ್ರೆಗೆ ಬರುವ ರೋಗಿಗಳನ್ನು ತಮ್ಮ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ಸರಕಾರಿ ಆಸ್ಪತ್ರೆಯನ್ನು ಡಾ.ಮುರುಳಿ ಪಾಲಿಗೆ ಪಿಕಪ್ ಪಾಯಿಂಟ್ ಆಗಿದೆ. ಮಹಿಳೆಯೊಬ್ಬರ ಸಾವಿಗೆ ಕಾರಣರಾದ ವೈದ್ಯರ ವಿರುದ್ಧ ಆಡಳಿತ ವೈದ್ಯಾಧಿಕಾರಿಗೆ ದೂರು ನೀಡಿದ್ದೇವೆ. ಸದರಿ ವೈದ್ಯರ ವಿರುದ್ಧ ಮೇಲಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.
ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಹರಿಪ್ರಸಾದ್ ಮಾತನಾಡಿ, ಕಳೆದ ಗುರುವಾರ ರಾತ್ರಿ ನಮ್ಮ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದ ಮಹಿಳೆಯೊಬ್ಬರು ಆಸ್ಪತ್ರೆಯ ಆವರಣದಲ್ಲಿ ಸಾವನ್ನಪ್ಪಿದ್ದು, ಇವರ ಸಾವಿಗೆ ವೈದ್ಯ ಡಾ.ಮುರುಳಿ ಕಾರಣರೆಂದು ಆರೋಪಿಸಿ ಸಾಮಾಜಿಕ ಹೋರಾಟಗಾರರು ಹಾಗೂ ಸಾರ್ವಜನಿಕರು ದೂರು ನೀಡಿದ್ದಾರೆ. ಅಗತ್ಯ ಕ್ರಮಕ್ಕಾಗಿ ಮೇಲಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದರು.
Comments are closed.