ತುಮಕೂರು: ಹುಟ್ಟಿನಿಂದ ಸಾವಿನ ವರೆಗೂ ಮನುಷ್ಯನಿಗೆ ಉಂಟಾಗುವ ಪ್ರತಿ ಆರೋಗ್ಯ ಸಮಸ್ಯೆಯಲ್ಲೂ ವೈದ್ಯರ ಚಿಕಿತ್ಸೆಯ ಆಧಾರವಾಗಿ ಪೋಷಣೆ ಮಾಡುವವರು ದಾದಿಯರಾಗಿದ್ದು, ಎರಡನೇ ತಾಯಿಯಂತೆ ಸಲಹುವ ಎಲ್ಲಾ ಮಹಿಳೆ ಹಾಗೂ ಪುರುಷ ನರ್ಸ್ಗಳು ಮಾನವತೆಯ ಪ್ರತೀಕವಾದವರು ಎಂದು ಸಿದ್ಧಗಂಗಾ ಮೆಡಿಕಲ್ ಕಾಲೇಜು ಪ್ರಾಚಾರ್ಯರಾದ ಡಾ.ಶಾಲಿನಿ ತಿಳಿಸಿದರು.
ಸಿದ್ಧಗಂಗಾ ಆಸ್ಪತ್ರೆಯಲ್ಲಿ ಮಲಬಾರ್ ಗೋಲ್ಡ್ ಸಹಯೋಗದಲ್ಲಿ ನಡೆದ ಅಂತಾರಾಷ್ಟ್ರೀಯ ದಾದಿಯರ ದಿನ ಉದ್ಘಾಟಿಸಿ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಮನುಕುಲವನ್ನೇ ಸಾವಿನ ದವಡೆಯಿಂದ ಕಾಪಾಡಿದವರು ದಾದಿಯರು, ಸಾವು ಬದುಕಿನ ನಡುವೆ ತಾವು ಹೋರಾಡುತ್ತಾ ರೋಗಿಗಳ ಜೀವ ಉಳಿಸಿದ ಅವರ ತ್ಯಾಗ, ವಾತ್ಸಲ್ಯ ಹಾಗೂ ಕರ್ತವ್ಯ ಪ್ರಜ್ಞೆ ಮಾದರಿಯಾದದ್ದು ಎಂದರು.
ಅಭಿನಂದನೆ ಸ್ವೀಕರಿಸಿದ ಸಿದ್ಧಗಂಗಾ ಆಸ್ಪತ್ರೆ ನರ್ಸಿಂಗ್ ವಿಭಾಗದ ಮುಖ್ಯಸ್ಥ ನಾಗಣ್ಣ ಮಾತನಾಡಿ, ಯಾವುದೇ ಒಂದು ಆಸ್ಪತ್ರೆಯ ಬೆನ್ನುಲುಬು ಎಂದರೆ ಅದು ನರ್ಸಿಂಗ್ ವಿಭಾಗ, ಭಾರತೀಯ ನರ್ಸ್ ಗಳ ಸೇವೆಗೆ ಕೇವಲ ಭಾರತದಷ್ಟೀ ಅಲ್ಲದೆ ವಿದೇಶದಲ್ಲಿಯೂ ಬಹಳಷ್ಟು ಗೌರವಿದೆ. ಔದ್ಯೋಗಿಕ ಬದುಕಿನ ಜೊತೆಗೆ ಸೇವಾ ಮೌಲ್ಯ ಹೊಂದುವ ಉದ್ಯೋಗವೆಂದರೆ ಅದು ನರ್ಸಿಂಗ್ ವಿಭಾಗದ್ದಾಗಿದೆ ಎಂದರು.
ಸಿದ್ಧಗಂಗಾ ಆಸ್ಪತ್ರೆ ಸಿಇಓ ಡಾ.ಸಂಜೀವ್ ಕುಮಾರ್, ಮಲಬಾರ್ ಗೋಲ್ಡ್ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ಪ್ರೇಮ್ ಹಾಗೂ ಆಸ್ಪತ್ರೆ ಸಿಬ್ಬಂದಿ ಹಾಜರಿದ್ದರು.
Comments are closed.