ಮತ ಎಣಿಕೆ ಕಾರ್ಯಕ್ಕೆ ಸಕಲ ಸಿದ್ಧತೆ

ಇಂದು ಹೊರ ಬೀಳಲಿದೆ ಭವಿಷ್ಯ- ಅಭ್ಯರ್ಥಿಗಳ ಎದೆಯಲ್ಲಿ ಢವಢವ

97

Get real time updates directly on you device, subscribe now.


ತುಮಕೂರು: ಜಿಲ್ಲೆಯಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಮೇ 13 ರಂದು ಮತ ಎಣಿಕಾ ಕಾರ್ಯ ನಡೆಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ತುಮಕೂರು ವಿಶ್ವ ವಿದ್ಯಾಲಯದ ಕಾಲೇಜಿನ ಕೊಠಡಿಗಳನ್ನು ಮತ ಎಣಿಕೆ ಕಾರ್ಯಕ್ಕೆ ಸಿದ್ಧಗೊಳಿಸಲಾಗಿದೆ. ಬಿ.ಹೆಚ್.ರಸ್ತೆಯ ತುಮಕೂರು ವಿಶ್ವ ವಿದ್ಯಾಲಯ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿ.ಹೆಚ್.ರಸ್ತೆಯ ಇಕ್ಕೆಲಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ.

ಅಭ್ಯರ್ಥಿಗಳ ಭವಿಷ್ಯ ಇಂದು ಹೊರ ಬೀಳಲಿದ್ದು, ಅಭ್ಯರ್ಥಿಗಳ ಎದೆಯಲ್ಲಿ ಢವಢವ ಶುರುವಾಗಿದೆ. ಇದಲ್ಲದೆ ತಮ್ಮ ನೆಚ್ಚಿನ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಕಾರ್ಯಕರ್ತರು ಬೆಟ್ಟಿಂಗ್ ಕೂಡ ಕಟ್ಟುತ್ತಿದ್ದಾರೆ.
ಒಟ್ಟು 198 ಸುತ್ತಿನಲ್ಲಿ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಸಲಾಗುವುದು. ಜಿಲ್ಲೆಯ ಮಧುಗಿರಿ, ಪಾವಗಡ, ಕೊರಟಗೆರೆ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳ ಮತ ಎಣಿಕಾ ಕಾರ್ಯವನ್ನು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ ಕ್ಷೇತ್ರಗಳ ಮತ ಎಣಿಕೆಯನ್ನು ವಿಶ್ವವಿದ್ಯಾನಿಲಯದ ಕಲಾ ಕಾಲೇಜು ಹಾಗೂ ಕುಣಿಗಲ್, ತುಮಕೂರು ನಗರ, ತುಮಕೂರು ಗ್ರಾಮಾಂತರ, ಗುಬ್ಬಿ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯನ್ನು ವಿಶ್ವ ವಿದ್ಯಾಲಯದ ವಿಜ್ಞಾನ ಕಾಲೇಜಿನಲ್ಲಿ ಬೆಳಗ್ಗೆ 8 ಗಂಟೆಯಿಂದ ನಡೆಸಲಾಗುವುದು.

ಮತ ಎಣಿಕೆಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೂ ತಲಾ 14 ರಂತೆ ಒಟ್ಟು 154 ಇವಿಎಂ ಟೇಬಲ್ಗಳನ್ನು ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್ ಗೂ ಅಗತ್ಯ ಸಾಮಗ್ರಿಗಳಾದ ಪೆನ್ನು, ಪೆನ್ಸಿಲ್, ಕಟರ್ಗಳನ್ನು ಒದಗಿಸಲಾಗುವುದು.
ಗುಬ್ಬಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯನ್ನು 16, ತಿಪಟೂರು, ತುರುವೇಕೆರೆ ಹಾಗೂ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯನ್ನು 17, ಕೊರಟಗೆರೆ, ಪಾವಗಡ ಹಾಗೂ ಮಧುಗಿರಿ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯನ್ನು 18, ಚಿಕ್ಕನಾಯಕನಹಳ್ಳಿ, ಕುಣಿಗಲ್ ಹಾಗೂ ತುಮಕೂರು ನಗರ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯನ್ನು 19, ಶಿರಾ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯನ್ನು 20 ಸೇರಿದಂತೆ ಒಟ್ಟು 198 ಸುತ್ತಿನಲ್ಲಿ ಮತಗಳ ಎಣಿಕೆ ನಡೆಸಲಾಗುವುದು.

ಮತ ಎಣಿಕೆಯನ್ನು ಸಂಬಂಧಿಸಿದ ವಿಧಾನಸಭಾ ಕ್ಷೇತ್ರಗಳ ವೀಕ್ಷಕರ ಸಮ್ಮುಖದಲ್ಲಿ ನಡೆಸಲಾಗುವುದು. ಎಣಿಕೆಯು 4 ವಿಭಾಗಗಳಲ್ಲಿ ಪ್ರತ್ಯೇಕವಾಗಿ ನಡೆಸಲಾಗುವುದು, ಅಂಚೆ ಮತ ಪತ್ರ, ಇಟಿಪಿಬಿಎಸ್ ಮತ, ಕಂಟ್ರೋಲ್ ಯೂನಿಟ್ ಮತ ಹಾಗೂ ವಿವಿ ಪ್ಯಾಟ್ ನಲ್ಲಿ ದಾಖಲಾದ ಮತಗಳನ್ನು ಎಣಿಕೆ ಮಾಡಲಾಗುವುದು. ಒಟ್ಟು 651 ಅಧಿಕಾರಿ, ಸಿಬ್ಬಂದಿ ಹಾಗೂ ಮೈಕ್ರೋ ಅಬ್ಸರ್ವರ್ ಗಳನ್ನು ನಿಯೋಜಿಸಲಾಗಿದ್ದು, ಎಣಿಕಾ ಕಾರ್ಯಕ್ಕೆ ನಿಯೋಜಿಸಿದವರಿಗೆ ಈಗಾಗಲೇ ತರಬೇತಿ ನೀಡಲಾಗಿದೆ.

ಸುಗಮವಾಗಿ ಮತ ಎಣಿಕೆ ನಡೆಸುವ ನಿಟ್ಟಿನಲ್ಲಿ ಮತ ಎಣಿಕಾ ಕೇಂದ್ರಕ್ಕೆ ಬಿಗಿ ಭದ್ರತೆಯನ್ನು ಒದಗಿಸಲು 5 ಮಂದಿ ಡಿವೈ.ಎಸ್ ಪಿ, 17 ಮಂದಿ ಪೊಲೀಸ್ ಇನ್ಸ್ ಪೆಕ್ಟರ್, 33 ಮಂದಿ ಸಬ್ ಇನ್ಸ್ ಪೆಕ್ಟರ್, 55 ಮಂದಿ ಸಹಾಯಕ ಸಬ್ ಇನ್ಸ್ ಪೆಕ್ಟರ್, 285 ಮಂದಿ ಪೊಲೀಸ್ ಸಿಬ್ಬಂದಿ, 18 ಮಂದಿ ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ ಶಸ್ತ್ರ ಸಜ್ಜಿತ ಕೇಂದ್ರೀಯ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

ಮತ ಎಣಿಕಾ ಕಾರ್ಯಕ್ಕೆ ಉಮೇದುವಾರರು ತಮ್ಮ ಎಣಿಕಾ ಏಜೆಂಟರನ್ನು ನೇಮಕ ಮಾಡಲು ಅವಕಾಶವಿದ್ದು, ನೇಮಕ ಮಾಡುವ ಅಧಿಕೃತ ಏಜೆಂಟರು ಕಡ್ಡಾಯವಾಗಿ ಸಂಬಂಧಿಸಿದ ಚುನಾವಣಾಧಿಕಾರಿಗಳಿಂದ ಗುರುತಿನ ಚೀಟಿ ಪಡೆದುಕೊಳ್ಳತಕ್ಕದ್ದು, ಮತ ಎಣಿಕಾ ಕೇಂದ್ರಗಳಿಗೆ ಅಧಿಕೃತ ಗುರುತಿನ ಚೀಟಿ ಹೊಂದಿರುವ ಮತ ಎಣಿಕೆ ಸಿಬ್ಬಂದಿ, ಉಮೇದುವಾರರ ಚುನಾವಣಾ ಏಜೆಂಟ್ ಹಾಗೂ ಮತ ಎಣಿಕಾ ಏಜೆಂಟರುಗಳನ್ನು ಹೊರತುಪಡಿಸಿ ಅನ್ಯರಿಗೆ ಪ್ರವೇಶವಿರುವುದಿಲ್ಲ. ಎಣಿಕಾ ಕೇಂದ್ರದೊಳಗೆ ಮೊಬೈಲ್, ಆಯುಧ, ಬೆಂಕಿಪೊಟ್ಟಣ, ಸಿಗರೇಟು, ಬೀಡಾ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳನ್ನು ಒಯ್ಯಲು ಅವಕಾಶವಿಲ್ಲ.

ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ವೀಕ್ಷಿಸಲು ವಿಧಾನಸಭಾ ಕ್ಷೇತ್ರವಾರು ತಲಾ ಒಬ್ಬರಂತೆ 11 ವೀಕ್ಷಕರನ್ನು ನೇಮಿಸಲಾಗಿದ್ದು, ಅವರ ವೀಕ್ಷಣೆಯಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಚಿ.ನಾ.ಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಡಾ.ಸಿ.ಎನ್.ಮಹೇಶ್ವರನ್ (7373003211), ತಿಪಟೂರು- ದಯಾನಂದ್ ಪ್ರಸಾದ್ (9711825726), ತುರುವೇಕೆರೆ- ಕುಮಾರ್ ಪ್ರಶಾಂತ್ (9454501790), ಕುಣಿಗಲ್- ವೀರೇಂದರ್ ಸಿಂಗ್ ಸೆಹ್ರಾವತ್ (9050006227), ತುಮಕೂರು ನಗರ- ಪಂಕಜ್ ಕುಮಾರ್ (9136330551), ತುಮಕೂರು ಗ್ರಾಮಾಂತರ- ಕುಮಾರ್ ರಾಜೀವ್ ರಂಜನ್ (9419080222), ಕೊರಟಗೆರೆ- ಜಿ.ಮಹೇಶ್ವರ ರಾವ್ (9440214412), ಗುಬ್ಬಿ- ಸಂಜೀವ್ ಸಿಂಗ್ (7376787656), ಶಿರಾ- ನೈಕ್ಯಗೋಹೇನ್ (7300286047), ಪಾವಗಡ- ಮಾಧವ್ ನಾಮ್ ದಿಯೋ ಕುಸೇಕರ್ (9833796292), ಮಧುಗಿರಿ ಕ್ಷೇತ್ರಕ್ಕೆ ಭರತ್ ಬಸ್ತೇವಾಡ್ (9082670035) ಅವರನ್ನು ನೇಮಿಸಲಾಗಿದೆ.

ಮತ ಎಣಿಕಾ ಕಾರ್ಯವು ಮೇ 13ರ ಬೆಳಗ್ಗೆ ಪ್ರಾರಂಭವಾಗಲಿದ್ದು, ಉಮೇದುವಾರರು ಮತ್ತು ಮತ ಎಣಿಕಾ ಏಜೆಂಟರು ಮತ ಎಣಿಕಾ ಕಾರ್ಯ ಪ್ರಾರಂಭವಾಗುವ ಕನಿಷ್ಟ 1 ಗಂಟೆ ಮೊದಲು ಎಣಿಕಾ ಕೇಂದ್ರದಲ್ಲಿ ಹಾಜರಿರಬೇಕು.

ಭಾರತ ಚುನಾವಣಾ ಆಯೋಗದ ನಿಯಮದಂತೆ ಅಂಚೆ ಮತಪತ್ರಗಳ ಎಣಿಕೆ ಮೊದಲು ಪ್ರಾರಂಭಿಸಿ ನಂತರ ವಿದ್ಯುನ್ಮಾನ ಮತ ಯಂತ್ರಗಳ ಮತ ಎಣಿಕೆ ನಡೆಸಲಾಗುವುದು. ಪಾರದರ್ಶಕ ಹಾಗೂ ನ್ಯಾಯಸಮ್ಮತವಾಗಿ ಮತ ಎಣಿಕೆ ನಡೆಸುವ ದೃಷ್ಟಿಯಿಂದ ಎಣಿಕೆ ಕೇಂದ್ರದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಕೇಂದ್ರೀಯ ರಕ್ಷಣಾ ಪಡೆ ಹಾಗೂ ರಾಜ್ಯ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.

Get real time updates directly on you device, subscribe now.

Comments are closed.

error: Content is protected !!