ಟಿ.ಬಿ.ಜಯಚಂದ್ರ ಜಯಭೇರಿ- ಶಿರಾದಲ್ಲಿ ವಿಜಯೋತ್ಸವ

131

Get real time updates directly on you device, subscribe now.


ಶಿರಾ: 2023 ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು ಶಿರಾ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಟಿ.ಬಿ.ಜಯಚಂದ್ರ ತಮ್ಮ ಸಮೀಪದ ಜೆಡಿಎಸ್ ಪಕ್ಷದ ಅಭ್ಯರ್ಥಿ ಆರ್.ಉಗ್ರೇಶ್ ಅವರಿಗಿಂತ 29,250 ಮತ ಹೆಚ್ಚು ಪಡೆದು ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕ್ಷೇತ್ರದ 267 ಮತಗಟ್ಟೆಗಳಲ್ಲಿ 1,86,468 ಮತದಾರರು ಮತಯಂತ್ರಗಳ ಮೂಲಕ ಮತ ಚಲಾಯಿಸಿದ್ದು, ಇದಕ್ಕೂ ಮುನ್ನ 4,238 ಮತದಾರರು ಅಂಚೆ ಮತ ಪತ್ರಗಳ ಮೂಲಕ ಮತ ಚಲಾಯಿಸಿದ್ದರು. ಒಟ್ಟಾರೆ 1,90,706 ಜನ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು, ಇದರ ಪೈಕಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಮತ ಯಂತ್ರದ ಮೂಲಕ 84,293 ಮತಗಳನ್ನು ಮತ್ತು 1791 ಅಂಚೆ ಮತಗಳನ್ನು ಪಡೆದು ಒಟ್ಟಾರೆ 86084 ಮತ ಗಳಿಸಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮತ ಎಣಿಕೆ ಮೊದಲನೇ ರೌಂಡ್ ನಲ್ಲೆ ಮುನ್ನಡೆ ಗಳಿಸಿದ ಜಯಚಂದ್ರ ಕೊನೆಯ ರೌಂಡ್ವರೆಗೂ ಅದನ್ನು ಕಾಪಾಡಿಕೊಂಡು ಬರುವಲ್ಲಿ ಯಶಸ್ವಿಯಾದರು, ಪಕ್ಷದ ಅಭ್ಯರ್ಥಿಯ ಗೆಲುವು ನಿಶ್ಚಯವಾಗುತ್ತಿದ್ದಂತೆ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಕಾಂಗ್ರೆಸ್ ಗೆ ಪೈಪೋಟಿ ನೀಡಿದ ಜೆಡಿಎಸ್ ಅಭ್ಯರ್ಥಿ ಆರ್.ಉಗ್ರೇಶ್ ಒಟ್ಟಾರೆ 56,834 ಮತ ಪಡೆದರೆ, ಬಿಜೆಪಿಯ ಅಭ್ಯರ್ಥಿ ಸಿ.ಎಂ. ರಾಜೇಶ್ ಗೌಡ ಒಟ್ಟಾರೆ 42,329 ಮತ ಪಡೆದು ನಂತರದ ಸ್ಥಾನದಲ್ಲಿದ್ದಾರೆ. ಕಣದಲ್ಲಿದ್ದ 15 ಅಭ್ಯರ್ಥಿಗಳ ಪೈಕಿ ಮೊದಲ ಮೂರು ಸ್ಥಾನ ಹೊರತುಪಡಿಸಿ ಉಳಿದವರೆಲ್ಲ ಠೇವಣಿ ಕಳೆದುಕೊಂಡಿದ್ದಾರೆ.
ಚಲಾವಣೆಯಾದ ಒಟ್ಟು ಮತಗಳ ಪೈಕಿ 45.14% ರಷ್ಟು ಮತಗಳನ್ನು ಕಾಂಗ್ರೆಸ್ ಅಭ್ಯರ್ಥಿ ಗಳಿಸಿದ್ದರೆ, ಜೆಡಿಎಸ್ನ ಅಭ್ಯರ್ಥಿ 29.9 ರಷ್ಟು ಮತ್ತು ಬಿಜೆಪಿ ಅಭ್ಯರ್ಥಿ 22.2 ರಷ್ಟು ಮತ ಗಳಿಸಿದ್ದಾರೆ.

ಭರ್ಜರಿ ರೋಡ್ ಶೋ
ಗೆಲುವು ಸಾಧಿಸಿದ ನಂತರ ವಿಜೇತ ಅಭ್ಯರ್ಥಿ ಟಿ.ಬಿ.ಜಯಚಂದ್ರ ಶಿರಾ ನಗರದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ತುಮಕೂರಿನಿಂದ ಶಿರಾಕ್ಕೆ ಬರುತ್ತಾ ಮಾರ್ಗದುದ್ದಕ್ಕೂ ಅಭಿಮಾನಿಗಳು ಮತ್ತು ಕಾಂಗ್ರೆಸ್ ಮುಖಂಡರು ಜಯಚಂದ್ರ ಅವರಿಗೆ ಹೂವಿನ ಹಾರ ಹಾಕಿ ಗೌರವಿಸಿದರು. ಮಿನಿ ವಿಧಾನಸೌಧದಿಂದ ನಗರಕ್ಕೆ ಬರುವ ಮಾರ್ಗದಲ್ಲೇ ಕಾದಿದ್ದ ಅಭಿಮಾನಿಗಳು ಜಯಚಂದ್ರ ಅವರನ್ನು ವಿಶೇಷವಾಗಿ ಗೌರವಿಸಿದರು. ಇಲ್ಲಿನ ಪ್ರವಾಸಿ ಮಂದಿರ ವೃತ್ತದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ದರ್ಗಾ ಸರ್ಕಲ್ ವರೆಗೆ ಭರ್ಜರಿ ರೋಡ್ ಶೋ ಆಯೋಜಿಸಲಾಗಿತ್ತು, ಈ ವೇಳೆ ಕೆಲವರು ಪಟಾಕಿ ಸಿಡಿಸಿ ಸಂಭ್ರಮಿಸಿದರೆ ಮತ್ತೆ ಕೆಲವರು ಡಿಜೆ ಹಾಡಿಗೆ ಡ್ಯಾನ್ಸ್ ಮಾಡಿ ಸಂಭ್ರಮಿಸಿದರು.

7ನೇ ಬಾರಿಗೆ ಶಾಸಕರಾಗಿ ಆಯ್ಕೆ
ಟಿ.ಬಿ.ಜಯಚಂದ್ರ ಅವರು 2013ರ ಚುನಾವಣೆಯಲ್ಲಿ 74,089 ಮತಗಳೊಂದಿಗೆ ಶಿರಾದಿಂದ ಗೆದ್ದು ಕಾನೂನು ಸಚಿವರಾಗಿ, ಸಣ್ಣ ನಿರಾವರಿ ಸಚಿವರಾಗಿ, ಉನ್ನತ ಶಿಕ್ಷಣ ಸಚಿವರಾಗಿ, ಮುಜರಾಯಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದು, ಹಿರಿಯ ರಾಜಕಾರಣಿಯಾಗಿ ರಾಜಕೀಯ ಅನುಭವ ಹೊಂದಿರುವ ವ್ಯಕ್ತಿಯಾಗಿದ್ದು, ಕಾಂಗ್ರೆಸ್ ಪಕ್ಷದ ಸಂಘಟನೆಗಳಲ್ಲಿ ತಾಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ವಿವಿಧ ಕೆಲಸ ಮಾಡಿದ್ದಾರೆ. ಟಿ.ಬಿ.ಜಯಚಂದ್ರ ಅವರು ಮೊದಲ ಬಾರಿ ಕರ್ನಾಟಕ ಶಾಸಕಾಂಗ ಸಭೆಗೆ 1978ರಲ್ಲಿ ಆಯ್ಕೆಯಾದ್ದು ಶಿರಾ ಕ್ಷೇತ್ರದಿಂದ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗುತ್ತಿದ್ದಾರೆ. ಒಟ್ಟು 7ನೇ ಬಾರಿಗೆ ಕರ್ನಾಟಕ ವಿಧಾನ ಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

Get real time updates directly on you device, subscribe now.

Comments are closed.

error: Content is protected !!