ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಕಿಂಗ್

ತುಮಕೂರು ನಗರ, ಗ್ರಾಮಾಂತರದಲ್ಲಿ ಅರಳಿದ ಕಮಲ- ತುರುವೇಕೆರೆ, ಚಿ.ನಾ.ಹಳ್ಳಿಯಲ್ಲಿ ಜೆಡಿಎಸ್ ಕಹಳೆ

169

Get real time updates directly on you device, subscribe now.

ತುಮಕೂರು: ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 7 ಸ್ಥಾನ ಗೆಲ್ಲುವ ಮೂಲಕ ಪ್ರಾಬಲ್ಯ ಮರೆದರೆ, ಜೆಡಿಎಸ್ 2 ಸ್ಥಾನ ಗೆದಿದೆ. ಇನ್ನು ಬಿಜೆಪಿ ಕೂಡ ಎರಡು ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದೆ.
ಶಿರಾ, ಕೊರಟಗೆರೆ, ಮಧುಗಿರಿ, ಪಾವಗಡ, ತಿಪಟೂರು, ಕುಣಿಗಲ್, ಗುಬ್ಬಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಜಯಭೇರಿ ಬಾರಿಸಿದ್ದಾರೆ. ಚಿಕ್ಕನಾಯಕನಹಳ್ಳಿ, ತುರುವೇಕೆರೆಯಲ್ಲಿ ಜೆಡಿಎಸ್ ಜಯ ಗಳಿಸಿದ್ದು, ತುಮಕೂರು ನಗರ ಹಾಗೂ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಮಲ ಅರಳಿದೆ. ಅಭ್ಯರ್ಥಿಗಳು ಗಳಿಸಿದ ಮತಗಳ ವಿವರ ಇಲ್ಲಿದೆ.


ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರ
ಜನತಾ ದಳ ಜಾತ್ಯಾತೀತ ಪಕ್ಷದ ಸಿ.ಬಿ. ಸುರೇಶ್ ಬಾಬು-71,036 ಮತ ಪಡದು ಜಯಗಳಿಸಿದರೆ, ಬಿಜೆಪಿಯ ಜೆ.ಸಿ.ಮಾಧುಸ್ವಾಮಿ- 60,994 ಮತ ಗಳಿಸಿ ಉತ್ತಮ ಪೈಪೋಟಿ ನೀಡಿದರು. ಇನ್ನು ಕಾಂಗ್ರೆಸ್ ಪಕ್ಷದ ಕೆ.ಎಸ್.ಕಿರಣ್ ಕುಮಾರ್ 50,996 ಪಡೆದು ಮಾಧುಸ್ವಾಮಿ ಸೋಲಿಗೆ ಕಾರಣರಾದರು.


ತಿಪಟೂರು ವಿಧಾನಸಭಾ ಕ್ಷೇತ್ರ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕೆ. ಷಡಕ್ಷರಿ 71,999 ಮತ ಪಡೆದು ವಿಜಯಶಾಲಿಯಾದರೆ, ಭಾರತೀಯ ಜನತಾ ಪಕ್ಷದ ಬಿ.ಸಿ.ನಾಗೇಶ್- 54,347 ಮತ, ಜನತಾದಳ ಪಕ್ಷದ ಕೆ.ಟಿ.ಶಾಂತಕುಮಾರ್-26,014 ಪಡೆದು ಸೋಲಿನ ಸುಳಿಗೆ ಸಿಲುಕಿದ್ದಾರೆ.


ತುರುವೇಕೆರೆ ವಿಧಾನಸಭಾ ಕ್ಷೇತ್ರ
ಜನತಾದಳ ಪಕ್ಷದ ಎಂ.ಟಿ.ಕೃಷ್ಣಪ್ಪ- 68,163 ಮತ ಪಡದು ಗೆಲುವು ಸಾಧಿಸಿದರೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಬೆಮೆಲ್ ಕಾಂತರಾಜ್ 30,536 ಮತ, ಭಾರತೀಯ ಜನತಾ ಪಕ್ಷದ ಮಸಾಲ ಜಯರಾಮ್- 58,240 ಮತ ಪಡೆದು ಜೆಡಿಎಸ್ ಅಭ್ಯರ್ಥಿಗೆ ಉತ್ತಮ ಪೈಪೋಟಿ ನೀಡಿದ್ದಾರೆ.


ಕುಣಿಗಲ್ ವಿಧಾನಸಭಾ ಕ್ಷೇತ್ರ
ಕಾಂಗ್ರೆಸ್ ಪಕ್ಷದ ಡಾ.ರಂಗನಾಥ್.ಹೆಚ್.ಡಿ. 74,724 ಮತ ಪಡೆದು ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರೆ, ಭಾರತೀಯ ಜನತಾ ಪಕ್ಷದ ಡಿ.ಕೃಷ್ಣಕುಮಾರ್ ಅವರು 48,151 ಮತ ಪಡೆದು 2ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಯಿತು. ಇನ್ನು ಜನತಾದಳ ಪಕ್ಷದ ಡಾ.ರವಿ ನಾಗರಾಜಯ್ಯ 46,974 5 ಮತ ಪಡೆದು ಸೋಲುವಂತಾಯಿತು.


ತುಮಕೂರು ನಗರ ವಿಧಾನಸಭಾ ಕ್ಷೇತ್ರ
ಭಾರತೀಯ ಜನತಾ ಪಕ್ಷದ ಜಿ.ಬಿ.ಜ್ಯೋತಿಗಣೇಶ್ 59,165 ಮತ ಪಡೆದು ಎರಡನೇ ಬಾರಿ ಎಂಎಲ್ಎ ಆದರೆ, ಜನತಾದಳ ಪಕ್ಷದ ಎನ್.ಗೋವಿಂದರಾಜು 55,967 ಮತ ಪಡೆದು ಮೂರನೇ ಬಾರಿಯೂ ಸೋಲುವಂತಾಯಿತು. ಇನ್ನು ಕಾಂಗ್ರೆಸ್ ಪಕ್ಷದ ಇಕ್ಬಾಲ್ ಅಹ್ಮದ್ 46,900 ಮತ ಪಡೆದು ಮೊದಲ ಪ್ರಯತ್ನದಲ್ಲೇ ಉತ್ತಮ ಸಾಧನೆ ಮಾಡಿದ ಖುಷಿಗೆ ಒಳಗಾದರು.


ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ
ಇನ್ನು ಜಿದ್ದಾಜಿದ್ದಿನ ಕಣವಾಗಿದ್ದ ಗ್ರಾಮಾಂತರ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಬಿ.ಸುರೇಶ್ ಗೌಡ 89,191 ಮತ ಪಡೆದು ಜಯಬೇರಿ ಬಾರಿಸಿದರೆ ಜನತಾದಳ ಪಕ್ಷದ ಡಿ.ಸಿ.ಗೌರಿಶಂಕರ್ 84,597 ಮತ ಪಡೆದು ಸೋಲುವಂತಾಯಿತು. ಕಾಂಗ್ರೆಸ್ ಪಕ್ಷದ ಜಿ.ಎಚ್.ಷಣ್ಮುಖಪ್ಪ 4066 ಮತ ಪಡೆದು ಠೇವಣಿ ಕಳೆದುಕೊಂಡರು, ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳ ತೀವ್ರ ಪೈಪೋಟಿ ನಡೆಸಿದರಾದರು ಅಂತಿಮವಾಗಿ ಬಿಜೆಪಿಗೆ ಜಯ ದೊರೆತಿದೆ.


ಕೊರಟಗೆರೆ ವಿಧಾನಸಭಾ ಕ್ಷೇತ್ರ
ಕಾಂಗ್ರೆಸ್ ಪಕ್ಷದ ಡಾ.ಜಿ.ಪರಮೇಶ್ವರ 79,099 ಮತ ಪಡೆಯುವ ಮೂಲಕ ವಿಜಯಪತಾಕೆ ಹಾರಿಸಿದರು. ಜನತಾದಳ ಪಕ್ಷದ ಪಿ.ಆರ್.ಸುಧಾಕರ್ ಲಾಲ್ 64,752 ಮತ ಪಡೆದು 2ನೇ ಸ್ಥಾನದಲ್ಲಿ ಉಳಿದರೆ, ಪರಮೇಶ್ವರ್ ಅವರನ್ನು ಸೋಲಿಸಲೆಂದೇ ಸ್ಪರ್ಧೆ ಮಾಡಿದ್ದ ಭಾರತೀಯ ಜನತಾ ಪಕ್ಷದ ಬಿ.ಹೆಚ್. ಅನಿಲ್ ಕುಮಾರ್ ಕೇವಲ 24,091 ಮತ ಪಡೆಯಲಷ್ಟೇ ಸಾಧ್ಯವಾಯಿತು.


ಗುಬ್ಬಿ ವಿಧಾನಸಭಾ ಕ್ಷೇತ್ರ
ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದ ಎಸ್.ಆರ್.ಶ್ರೀನಿವಾಸ್ 60,520 ಮತ ಪಡೆದು ಗೆದ್ದು ಬೀಗಿದರೆ, ಭಾರತೀಯ ಜನತಾ ಪಕ್ಷದ ಎಸ್.ಡಿ.ದಿಲೀಪ್ ಕುಮಾರ್ ಅವರು 51,979 ಮತ ಪಡೆದರು. ಜೆಡಿಎಸ್ ಪಕ್ಷದ ನಾಗರಾಜು.ಬಿ.ಎಸ್ 43,046 ಮತ ಪಡೆದು ಮೂರನೇ ಸ್ಥಾನಕ್ಕೆ ಇಳಿದರು.


ಶಿರಾ ವಿಧಾನಸಭಾ ಕ್ಷೇತ್ರ
ಕಾಂಗ್ರೆಸ್ ಪಕ್ಷದ ಟಿ.ಬಿ.ಜಯಚಂದ್ರ 86,084 ಮಡೆದು ಗೆದ್ದು ಸಂಭ್ರಮಿಸಿದರೆ, ಜನತಾದಳ ಪಕ್ಷದ ಟಿಕೆಟ್ ಪಡೆದು ಸ್ಪರ್ಧೆ ಮಾಡಿದ್ದ ಆರ್.ಉಗ್ರೇಶ್ 56,834 ಮತ ಪಡೆದು 2ನೇ ಸ್ಥಾನ ಪಡೆದರೆ, ಶಾಸಕರಾಗಿದ್ದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಸಿ.ಎಂ.ರಾಜೇಶ್ ಗೌಡ 42,329 ಮತ ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.


ಪಾವಗಡ ವಿಧಾನಸಭಾ ಕ್ಷೇತ್ರ
ಕಾಂಗ್ರೆಸ್ ಪಕ್ಷದ ಹೆಚ್.ವಿ.ವೆಂಕಟೇಶ್ 83,062 ಜಯಭೇರಿ ಬಾರಿಸಿದರೆ, ಜನತಾದಳ ಪಕ್ಷದ ಕೆ.ಎಂ.ತಿಮ್ಮರಾಯಪ್ಪ 72,181 ಮತ ಪಡೆದು ಉತ್ತಮ ಪೈಪೋಟಿ ನೀಡಿದ್ದಾರೆ. ಭಾರತೀಯ ಜನತಾ ಪಕ್ಷದ ಕೃಷ್ಣನಾಯಕ್ ಕೇವಲ 7,206 ಮತ ಪಡೆಯಲಷ್ಟೇ ಶಕ್ತರಾದರು.


ಮಧುಗಿರಿ ವಿಧಾನಸಭಾ ಕ್ಷೇತ್ರ
ಕಾಂಗ್ರೆಸ್ ಪಕ್ಷದ ಕ್ಯಾತ್ಸಂದ್ರ ಎನ್.ರಾಜಣ್ಣ ಅವರು 91,166 ಮತ ಪಡೆಯುವ ಮೂಲಕ ಗೆದ್ದು ಬೀಗಿದ್ದಾರೆ. ಜನತಾದಳ ಪಕ್ಷದ ಎಂ.ವಿ.ವೀರಭದ್ರಯ್ಯ 55,643 ಮತ ಪಡೆದು 2ನೇ ಸ್ಥಾನದಲ್ಲಿ ಉಳಿಯುವಂತಾಯಿತು. ಇನ್ನು ರಾಜಣ್ಣ ಅವರನ್ನು ಸೋಲಿಸಿಯೇ ಸಿದ್ಧ ಎಂದು ಸ್ಪರ್ಧೆ ಮಾಡಿದ್ದ ಭಾರತೀಯ ಜನತಾ ಪಕ್ಷದ ಎಲ್.ಸಿ.ನಾಗರಾಜ ಕೇವಲ 15,612 ಮತ ಪಡೆದರು.
ಒಟ್ಟಾರೆ ಜಿಲ್ಲೆಯಲ್ಲಿ ಹೆಚ್ಚು ಸ್ಥಾನ ಪಡೆದು ಕಾಂಗ್ರೆಸ್ ಸಂಭ್ರಮಿಸಿದರೆ, ಜೆಡಿಎಸ್, ಬಿಜೆಪಿ ತಲಾ ಎರಡು ಸ್ಥಾನ ಪಡೆಯುವ ಮೂಲಕ ಅಲ್ಪತೃಪ್ತಿ ಪಡುವಂತಾಯಿತು.

Get real time updates directly on you device, subscribe now.

Comments are closed.

error: Content is protected !!