ತುಮಕೂರು: ಸಿದ್ದಗಂಗಾ ಮಠ ಒಳ್ಳೆಯ ಕೆಲಸಗಳಿಗೆ ಸ್ಪೂರ್ತಿ ನೀಡುವಂತಹ ಮಠ, ಹಾಗಾಗಿಯೇ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದು ನನ್ನ ಶಾಸಕ ಜವಾಬ್ದಾರಿ ಆರಂಭಿಸುತ್ತಿದ್ದೇನೆ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶಗೌಡ ತಿಳಿಸಿದರು.
ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಹಿರಿಯ ಶ್ರೀಗಳಾದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ಪೂಜೆ ಸಲ್ಲಿಸಿ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ 2008ರಲ್ಲಿ ಶಾಸಕನಾಗಿ ಆಯ್ಕೆಯಾದ ಸಂದರ್ಭದಲ್ಲಿಯೂ ಡಾ.ಶಿವಕುಮಾರ ಸ್ವಾಮಿಜೀಗಳ ಆಶೀರ್ವಾದ ಪಡೆದು ಕೆಲಸ ಆರಂಭಿಸಿದ್ದೆ, ಈಗಲೂ ಕೂಡ ಅದೇ ಕೆಲಸ ಮುಂದುವರೆಸಿದ್ದೇನೆ ಎಂದರು.
ಸಿದ್ದಗಂಗಾ ಮಠದ ಆಶೀರ್ವಾದಿಂದ 2008 ಮತ್ತು 2013 ರಲ್ಲಿ ಶಾಸಕನಾಗಿ ಆಯ್ಕೆಯಾಗಲು ಅವಕಾಶವಾಯಿತು. ಆ ವೇಳೆ ಕ್ಷೇತ್ರದ ಜನರು ಬಹುದಿನದ ಬೇಡಿಕೆಯಾಗಿದ್ದ ಹೆಬ್ಬೂರು- ಗೂಳೂರು ಏತನೀರಾವರಿ ಜಾರಿ, ಶಾಲೆಗಳ ಅಭಿವೃದ್ಧಿ, ರೈತರಿಗೆ ನಿರಂತರ ವಿದ್ಯುತ್ ಹೀಗೆ ಹತ್ತು ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕ್ಷೇತ್ರದಲ್ಲಿ ನಡೆಸಲು ಸಹಕಾರಿಯಾಯಿತು. ಇದಕ್ಕೆಲ್ಲಾ ಸ್ಫೂರ್ತಿ ನೀಡಿದ್ದು ಸಿದ್ದಗಂಗಾ ಮಠ ಎಂದರು.
ಹಿರಿಯ ಶ್ರೀಗಳಿದ್ದ ಸಂದರ್ಭದಲ್ಲಿ ಮಠಕ್ಕೆ ಬಂದರೆ ಕ್ಷೇತ್ರದ ನೀರಾವರಿ ಯೋಜನೆ, ರೈತರ ಪರವಾಗಿ ನಿಲ್ಲುವಂತೆ, ಗ್ರಾಮೀಣ ಭಾಗದಲ್ಲಿಯೂ ಉತ್ತಮ ಗುಣಮಟ್ಟದ ಶಾಲೆ ತೆರೆದು ಬಡವರಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಬೇಕೆಂದು ಶ್ರೀಗಳು ಸಲಹೆ ನೀಡುತ್ತಿದ್ದರು. ಅದರಂತೆ ಈ ಬಾರಿಯೂ ಉತ್ತಮವಾಗಿ ಕೆಲಸ ಮಾಡಲು ಮುಂದಾಗಿರುವುದಾಗಿ ಹೇಳಿದರು.
ಭಕ್ತರಿಂದ ನಡೆದಾಡುವ ದೇವರು ಎಂದು ಕರೆಸಿಕೊಂಡಿದ್ದ ಡಾ.ಶಿವಕುಮಾರ ಸ್ವಾಮೀಜಿ ನನ್ನಂತಹ ಲಕ್ಷಾಂತರ ಜನರಿಗೆ ಸ್ಪೂರ್ತಿಯಾಗಿದ್ದಾರೆ. ಹಾಗಾಗಿಯೇ ಇಂದಿಗೂ ಅವರ ಗುದ್ದುಗೆಗೆ ದಿನಕ್ಕೆ ಸಾವಿರಾರು ಜನರು ಭೇಟಿ ನೀಡಿ, ಪೂಜೆ ಸಲ್ಲಿಸಿ ದರ್ಶನ ಪಡೆಯುತ್ತಾರೆ. ಹಾಗೆಯೇ ನಾನು ಸಹ ಹಿರಿಯ ಶ್ರೀಗಳ ಗದ್ದುಗೆ ದರ್ಶನ ಪಡೆದು ಗ್ರಾಮಾಂತರ ಕ್ಷೇತ್ರದಲ್ಲಿ ನನ್ನ ಕೆಲಸ ಆರಂಭಿಸಿದ್ದೇನೆ. ಹಾಗೇಯ ಶ್ರೀಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಸಹ ನನ್ನ ಮೇಲಿದೆ ಎಂದರು.
ಅಪಪ್ರಚಾರದಿಂದ ಹಿನ್ನಡೆ
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನೆಡೆಯಾಗಿದೆ. ಆದರೆ ರಾಷ್ಟ್ರಮಟ್ಟದಲ್ಲಿ ಇಂದಿಗೂ ಬಿಜೆಪಿ ಪ್ರಬಲವಾಗಿದೆ. ಕರ್ನಾಟಕದ ವಿಚಾರದಲ್ಲಿ ಪಕ್ಷ ಸದೃಢವಾಗಿದ್ದರೂ ಕೆಲ ವಿಷಯಗಳಲ್ಲಿ ಆದ ಹೊಂದಾಣಿಕೆ ಕೊರೆತೆಯಿಂದ ಕಡಿಮೆ ಸ್ಥಾನ ಬಂದಿವೆ. ಮುಂದಿನ ಬಾರಿ ಸರಿ ಹೋಗಲಿದೆ. ಕಾಂಗ್ರೆಸ್ ನವರು ನಮ್ಮ ಪಕ್ಷದ ಬಗ್ಗೆ ಮಾಡಿದ ಅಪಪ್ರಚಾರದಿಂದ ಕಡಿಮೆ ಸೀಟು ಬಂದಿವೆ. ಗ್ಯಾಸ್ ಬೆಲೆ ಹೆಚ್ಚಳ, ಪಡಿತರ ಅಕ್ಕಿ ಇನ್ನಿತರ ವಿಚಾರಗಳ ಬಗ್ಗೆ ಹೆಚ್ಚು ಅಪಪ್ರಚಾರ ನಡೆಯಿತು, ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸಿಕೊಂಡು ಹೋಗುವ ವಿಶ್ವಾಸ ವ್ಯಕ್ತಪಡಿಸಿದರು.
ಸರ್ಕಾರ ಯಾವುದಿದ್ದರೇನು. ಅನುದಾನ ತರುವ ತಾಕತ್ತು ನನಗಿದೆ. ಸರ್ಕಾರ ಒಂದು ರೀತಿಯಲ್ಲಿ ಬಾವಿಯಿದ್ದಂತೆ, ಯಾರಿಗೆ ಶಕ್ತಿ ಇದೆಯೋ ಅವರು ಹೆಚ್ಚು ನೀರು ಸೇದಿಕೊಳ್ಳುತ್ತಾರೆ. ಈ ಹಿಂದೆ 2013ರಲ್ಲಿ ಸಿದ್ದರಾಮಯ್ಯ ಸರ್ಕಾರವಿದ್ದಾಗಲೂ ಕೇತ್ರದ ಅಭಿವೃದ್ಧಿಗೆ 800 ಕೋಟಿ ಅನುದಾನ ತಂದಿದ್ದೆ, ಈ ಬಾರಿಯೂ ಪ್ರಬಲ ವಿರೋಧ ಪಕ್ಷವಾಗಿ ಕ್ಷೇತ್ರದ ಅಭಿವೃದ್ಧಿಗೆ ಬೇಕಾದ ಅನುದಾನ ತರಲಿದ್ದೇನೆ. ನಾನು ಅನುದಾನವನ್ನು ನನ್ನ ಮನೆಗೆ ಕೇಳೋದಿಲ್ಲ. ಬಡವರಿಗೆ ಮನೆ, ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ಸೇರಿದಂತೆ ಎಲ್ಲವನ್ನು ಆದ್ಯತೆಯ ಮೇರೆಗೆ ಮಾಡಲಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಮೈದಾಳ ಗ್ರಾಪಂ ಅಧ್ಯಕ್ಷೆ ಮಾಲಾ ಮಂಜುನಾಥ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಶಂಕರಣ್ಣ, ಉಮಾಶಂಕರ್, ಗೂಳೂರು ಶಿವಕುಮಾರ್, ಅರಕೆರೆ ರವೀಶ್, ನಾರಾಯಣಪ್ಪ, ಗೂಳೂರು ವಿಜಯಕುಮಾರ್, ಗಂಗಾಂಜನೇಯ, ಪಂಚೆ ರಾಮಚಂದ್ರಪ್ಪ, ಊರುಕೆರೆ ಆರ್.ವಿಜಯಕುಮಾರ್, ಹೊನ್ನೇಶ್ ಕುಮಾರ್, ಹೆತ್ತೇನಹಳ್ಳಿ ವೆಂಕಟೇಶ್ ಮತ್ತಿತರರು ಇದ್ದರು.
Comments are closed.