ಸಮರ್ಥ ಸಿಇಟಿ ಪರೀಕ್ಷೆ ನಿರ್ವಹಣೆ ಮಾಡಿ

ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಸೂಚನೆ

180

Get real time updates directly on you device, subscribe now.


ತುಮಕೂರು: ಜಿಲ್ಲೆಯಲ್ಲಿ 2023ನೇ ಸಾಲಿನ ಇಂಜಿನಿಯರಿಂಗ್, ಕೃಷಿ ವಿಜ್ಞಾನ, ವೆಟರ್ನರಿ, ಫಾರ್ಮಸಿ, ಬಿಎಸ್ಸಿ (ನರ್ಸಿಂಗ್) ಸೇರಿದಂತೆ ಮತ್ತಿತರ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಮೇ 20 ಮತ್ತು 21 ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದ್ದು, ಯಾವುದೇ ಲೋಪ ಬಾರದಂತೆ ಪರೀಕ್ಷೆಯನ್ನು ಉತ್ತಮ ಹಾಗೂ ಸಮರ್ಥವಾಗಿ ನಿರ್ವಹಣೆ ಮಾಡಬೇಕೆಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿ ಜಿಲ್ಲೆಯ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಮಾತನಾಡಿ, ಸಿಇಟಿ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬ ಅಧಿಕಾರಿಯನ್ನು ವೀಕ್ಷಕರನ್ನಾಗಿ ನೇಮಿಸಬೇಕು. ಸಿಇಟಿ ಪರೀಕ್ಷೆ ಬರೆಯುವ ಮಕ್ಕಳ ಪೋಷಕರು, ಹತ್ತಿರದ ಸಂಬಂಧಿಕರನ್ನು ವೀಕ್ಷಕರನ್ನಾಗಿ ನೇಮಕ ಮಾಡಬಾರದು ಹಾಗೂ ವಿಜ್ಞಾನ ವಿಷಯದ ಉಪನ್ಯಾಸಕರನ್ನು ಪರೀಕ್ಷಾ ಕೇಂದ್ರಗಳಿಗೆ ಪರಿವೀಕ್ಷಕರನ್ನಾಗಿ ನೇಮಿಸಬಾರದೆಂದು ಅವರು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.

ಸಿಇಟಿ ಪರೀಕ್ಷಾ ಪ್ರಶ್ನೆಪತ್ರಿಕೆ ಮತ್ತು ಉತ್ತರ ಪತ್ರಿಕೆಗಳ ಗೌಪ್ಯ ಬಂಡಲುಗಳನ್ನು ಖಜಾನೆಯಲ್ಲಿ ಸಂರಕ್ಷಿಸಿಡಬೇಕು ಎಂದು ಸೂಚಿಸಿದರಲ್ಲದೆ ಪರೀಕ್ಷೆ ನಡೆಯುವ ದಿನಗಳಂದು ಪರೀಕ್ಷಾ ಕೇಂದ್ರದ ಸುತ್ತ ಮುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಸ್ಥಳವೆಂದು ಘೋಷಿಸಲಾಗುವುದು. ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಒದಗಿಸಲಾಗುವುದು ಎಂದು ತಿಳಿಸಿದರು.
ಪರೀಕ್ಷಾ ಕೇಂದ್ರಗಳಿಗೆ ಯಾರೂ ಸಹ ವಾಚ್, ಆಭರಣ, ಮೊಬೈಲ್ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರುವಂತಿಲ್ಲ. ಎಲ್ಲಾ ಕೇಂದ್ರಗಳಿಗೆ ಸಿಸಿ ಟಿವಿ ಅಳವಡಿಸಲಾಗಿದ್ದು, ವಿದ್ಯಾರ್ಥಿಗಳು ಸಮವಸ್ತ್ರ ಸಂಹಿತೆ ಪಾಲಿಸಬೇಕೆಂದು ತಿಳಿಸಿದರು.

ಅನುಚಿತವಾಗಿ ವರ್ತಿಸುವ ಹಾಗೂ ನಿಯಮಗಳ ಉಲ್ಲಂಘನೆ ಮಾಡುವ ವಿದ್ಯಾರ್ಥಿಗಳು ಕಂಡುಬಂದರೆ ಸಂಬಂಧಿಸಿದ ಕೊಠಡಿ ಮೇಲ್ವಿಚಾರಕರು ಕೂಡಲೇ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಮಾಹಿತಿ ರವಾನಿಸಬೇಕು ಎಂದು ಸೂಚನೆ ನೀಡಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಿ.ಬಸವಲಿಂಗಪ್ಪ ಮಾತನಾಡಿ, ಜಿಲ್ಲೆಯ ತುಮಕೂರು ನಗರದ 14 ಪರೀಕ್ಷಾ ಕೇಂದ್ರದಲ್ಲಿ 6264 ವಿದ್ಯಾರ್ಥಿಗಳು, ತಿಪಟೂರಿನ 2 ಕೇಂದ್ರದಲ್ಲಿ 1608 ವಿದ್ಯಾರ್ಥಿಗಳು, ಶಿರಾ ತಾಲ್ಲೂಕಿನ 2 ಕೇಂದ್ರದಲ್ಲಿ 1124 ಹಾಗೂ ಕುಣಿಗಲ್ ತಾಲ್ಲೂಕಿನ 1 ಪರೀಕ್ಷಾ ಕೇಂದ್ರದಲ್ಲಿ 437 ಸೇರಿದಂತೆ ಒಟ್ಟು 19 ಪರೀಕ್ಷಾ ಕೇಂದ್ರದಲ್ಲಿ 9433 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಮೇ 20 ರಂದು ಬೆಳಗ್ಗೆ 10.30 ರಿಂದ 11.50 ಗಂಟೆಯ ವರೆಗೆ ಜೀವಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50 ಗಂಟೆಯ ವರೆಗೆ ಗಣಿತ ಹಾಗೂ ಮೇ 21ರ ಬೆಳಗ್ಗೆ 10.30 ರಿಂದ 11.50 ಗಂಟೆಯ ವರೆಗೆ ಭೌತಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50 ಗಂಟೆಯ ವರೆಗೆ ರಸಾಯನ ಶಾಸ್ತ್ರ ವಿಷಯದ ಪರೀಕ್ಷೆ ನಡೆಯಲಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಖಜಾನೆ ಅಧಿಕಾರಿ ಮುನಿರೆಡ್ಡಿ, ತುಮಕೂರು ಉಪವಿಭಾಗದ ಡಿವೈಎಸ್ ಪಿ ಹೆಚ್.ಶ್ರೀನಿವಾಸ್, ಉಪ ವಿಭಾಗಾಧಿಕಾರಿ ಹೋಟೆಲ್ ಶಿವಪ್ಪ, ಪರೀಕ್ಷಾ ಕೇಂದ್ರಗಳ ಪ್ರಾಂಶುಪಾಲರು, ವೀಕ್ಷಕರು ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಪರೀಕ್ಷಾ ಕೇಂದ್ರಗಳ ವಿವರ
ಕುಣಿಗಲ್ ತಾಲ್ಲೂಕಿನ ಮಹಾತ್ಮಗಾಂಧಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಶಿರಾ ತಾಲ್ಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ತಿಪಟೂರು ತಾಲ್ಲೂಕಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ತುಮಕೂರಿನ ಎಸ್ಐಟಿ ಬಡಾವಣೆಯ ವಾಸವಿ ಸಂಯುಕ್ತ ಪದವಿ ಪೂರ್ವ ಕಾಲೇಜು, ಹೊರಪೇಟೆ ಸರ್ವೋದಯ ಪದವಿ ಪೂರ್ವ ಕಾಲೇಜು, ಬಿ.ಹೆಚ್.ರಸ್ತೆ ಶ್ರೀಸಿದ್ಧಗಂಗಾ ಪದವಿ ಪೂರ್ವ ಕಾಲೇಜು, ಕಾಳಿದಾಸ ನಗರದ ಕಾಳಿದಾಸ ಪದವಿ ಪೂರ್ವ ಕಾಲೇಜು, ಸೋಮೇಶ್ವರ ಬಡಾವಣೆಯ ಇಂದಿರಾ ಪದವಿ ಪೂರ್ವ ಕಾಲೇಜು, ಎಸ್ಐಟಿ ಬಡಾವಣೆಯ ವಿದ್ಯಾವಾಹಿನಿ ಪದವಿ ಪೂರ್ವ ಕಾಲೇಜು, ಬಿಹೆಚ್ ರಸ್ತೆಯ ಸಿದ್ಧಗಂಗಾ ಮಹಿಳಾ ಪದವಿ ಪೂರ್ವ ಕಾಲೇಜು, ಅಶೋಕ ರಸ್ತೆ ಸರ್ಕಾರಿ ಎಂಪ್ರೆಸ್ ಬಾಲಕಿಯರ ಪದವಿ ಪೂರ್ವ ಕಾಲೇಜು, ಹೊರಪೇಟೆಯ ಬಾಪೂಜಿ ಸಂಯುಕ್ತ ಪದವಿ ಪೂರ್ವ ಕಾಲೇಜು, ಬಸವೇಶ್ವರ ರಸ್ತೆ ಎಸ್ಆರ್ ವಿಪಿ ಪದವಿ ಪೂರ್ವ ಕಾಲೇಜು, ಅಶೋಕ ನಗರದ ಶಾರದಾಂಬ ಸ್ವತಂತ್ರ ವಿಜ್ಞಾನ ಪದವಿ ಪೂರ್ವ ಕಾಲೇಜು, ಬಿಹೆಚ್ ರಸ್ತೆ ಬಿಷಪ್ ಸಾರ್ಜೆಂಟ್ ಪದವಿ ಪೂರ್ವ ಕಾಲೇಜು, ಬಿಹೆಚ್ ರಸ್ತೆ ಸಿದ್ಧಗಂಗಾ ಬಾಲಕರ ಪದವಿ ಪೂರ್ವ ಕಾಲೇಜು ಹಾಗೂ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಸಿಇಟಿ ಪರೀಕ್ಷೆ ನಡೆಯಲಿದೆ.

Get real time updates directly on you device, subscribe now.

Comments are closed.

error: Content is protected !!