ಸಿಸಿ ರಸ್ತೆ ಅಧ್ವಾನಕ್ಕೆ ನಾಗರಿಕರ ಅಸಮಾಧಾನ

144

Get real time updates directly on you device, subscribe now.


ಕುಣಿಗಲ್: ಪಟ್ಟಣದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಎಡ ಭಾಗದ ಪ್ರವೇಶದಲ್ಲಿ ಅಸಮರ್ಪಕ ಸಿಸಿ ರಸ್ತೆ ಕಾಮಗಾರಿಯಿಂದಾಗಿ ಕಬ್ಬಿಣದ ಸರಳು ಮೇಲೆದ್ದು, ವಾಹನ ಸಂಚಾರ ಸುರಕ್ಷತೆ ಪ್ರಶ್ನಿಸುವಂತಾಗಿದ್ದು, ಯಾವುದೇ ಅನಾಹುತ ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತು ಮೇಲೆ ಬಂದಿರುವ ಸರಳುಗಳ ಸುಸ್ಥಿತಿಗೊಳಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.

ಪಟ್ಟಣದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣಕ್ಕೆ ಎರಡು ಪ್ರಮುಖ ಪ್ರವೇಶವಿದೆ. ಒಂದು ಹಾಸನ ಕಡೆಯಿಂದ ಮತ್ತೊಂದು ಬೆಂಗಳೂರು ಕಡೆಯಿಂದ ಬರುವ ವಾಹನದ ಪ್ರವೇಶ ದ್ವಾರವಿದೆ. ಹಾಸನ ಕಡೆಯಿಂದ ಬರುವ ವಾಹನಗಳು ಮುಖ್ಯ ರಸ್ತೆಯಿಂದ ಬಸ್ ನಿಲ್ದಾಣದ ಒಳಗೆ ಪ್ರವೇಶ ಮಾಡುವ ಹಾಗೂ ಹೋಗುವ ಮಾರ್ಗದಲ್ಲಿ ಅಸಮರ್ಪಕ ಕಾಂಕ್ರಿಟ್ ರಸ್ತೆಯ ಕಾಮಗಾರಿಯಿಂದಾಗಿ, ರಸ್ತೆಗೆ ಅಳವಡಿಸಿರುವ ಕಂಬಿಗಳು ಮೇಲೆ ಎದ್ದಿವೆ.

ಬಸ್ಸುಗಳು ಸಂಚರಿಸುವಾಗ ಈ ಕಂಬಿಗಳು ಚಕ್ರಕ್ಕೆ ಸಿಲುಕಿದಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ತಳ್ಳಿಹಾಕುವಂತಿಲ್ಲವಾಗಿದೆ. ದಿನಾಲೂ ಕುಣಿಗಲ್ ಬಸ್ ನಿಲ್ದಾಣದ ಮಾರ್ಗವಾಗಿ ಇನ್ನರಕ್ಕೂ ಹೆಚ್ಚು ಬಸ್ ಗಳು ಸಂಚಾರ ಮಾಡುತ್ತಿವೆ. ಸಂಚಾರ ನಿಯಂತ್ರಕರು ಸೇರಿದಂತೆ ಕುಣಿಗಲ್ ಘಟಕದ ವ್ಯವಸ್ಥಕರು, ತುಮಕೂರು ಸಾರಿಗೆ ವಿಭಾಗದ ಹಿರಿಯಾಧಿಕಾರಿಗಳು ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಹೋಗುತ್ತಿದ್ದು, ಪ್ರವೇಶ ಮಾರ್ಗದಲ್ಲಿ ಮೇಲೆದ್ದು ನಿಂತಿರುವ ಕಬ್ಬಿಣದ ಸರಳುಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಅಧಿಕಾರಿಗಳು ಕಂಡೂ ಕಾಣದಂತೆ ಜಾಣ ಕುರುಡುತನ ಪ್ರದರ್ಶಿಸಿರುವುದು ಇಲಾಖಾಧಿಕಾರಿಗಳ ನಿರ್ಲಕ್ಷವೊ ಎಂಬುದು ಮಾತ್ರ ತಿಳಿಯುತ್ತಿಲ್ಲ ಎಂದು ಪುರಸಭೆ ಮಾಜಿ ಸದಸ್ಯ ಕೆ.ರಮೇಶ್ ತಿಳಿಸಿದ್ದು, ಇನ್ನಾದರೂ ಅಧಿಕಾರಿಗಳು ಜಾಣ ಕುರುಡಿನಿಂದ ಹೊರ ಬಂದು ಯಾವುದೇ ಅನಾಹುತ ಸಂಭವಿಸಿ ಪ್ರಾಣಾಪಾಯ ಸಂಭವಿಸುವ ಮುನ್ನ ಮೇಲೆ ಬಂದಿರುವ ಸರಳುಗಳ ಸುಸ್ಥಿತಿಗೊಳಿಸಿ, ಸಿಸಿ ರಸ್ತೆ ಸರಿಪಡಿಸುವ ಜೊತೆಯಲ್ಲಿ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಲ್ಲಿ ಒಂದು ಆಗಮನ ಹಾಗೂ ಮತ್ತೊಂದು ಪ್ರವೇಶ ದ್ವಾರವನ್ನು ನಿರ್ಗಮನಕ್ಕೆ ಮೀಸಲಿಟ್ಟು ಕಡ್ಡಾಯ ಸಂಚಾರ ವ್ಯವಸ್ಥೆಗೊಳಿಸುವ ಮೂಲಕ ಪಟ್ಟಣದ ಮುಖ್ಯಹೆದ್ದಾರಿಯಲ್ಲಿ ಅಪಘಾತ ನಿಯಂತ್ರಣಕ್ಕೂ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!