ಗೊಂದಲ ಸೃಷ್ಟಿ ನಡುವೆಯೂ ಜನ ಗೆಲ್ಲಿಸಿದ್ರು

ತುಮಕೂರಿನಲ್ಲಿ ಶಾಸಕ ಜ್ಯೋತಿ ಗಣೇಶ್ ಅವರ ಕಚೇರಿ ಆರಂಭ

78

Get real time updates directly on you device, subscribe now.


ತುಮಕೂರು: ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ 2ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಜ್ಯೋತಿಗಣೇಶ್ ಅವರು ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಮಹಾನಗರ ಪಾಲಿಕೆ ಆವರಣದಲ್ಲಿ ಶಾಸಕರ ಕಚೇರಿ ಆರಂಭಿಸಿದರು.

ಮಹಾನಗರ ಪಾಲಿಕೆ ಆವರಣದಲ್ಲಿರುವ ಶಾಸಕರ ಹಳೇ ಕಚೇರಿಯನ್ನೇ ಈ ಬಾರಿಯೂ ನೂತನವಾಗಿ ವಿಶೇಷ ಪೂಜಾ ವಿಧಿ ವಿಧಾನ ನೆರವೇರಿಸುವ ಮೂಲಕ ಗುರುವಾರ ಆರಂಭಿಸಲಾಯಿತು.
ಕಚೇರಿ ಪ್ರಾರಂಭೋತ್ಸವದ ಪೂಜಾ ವಿಧಾನ ನೆರವೇರಿದ ನಂತರ ಮಾತನಾಡಿದ ಶಾಸಕ ಜ್ಯೋತಿಗಣೇಶ್, 16ನೇ ವಿಧಾನಸಭೆಗೆ ಮೇ 10 ರಂದು ನಡೆದ ಚುನಾವಣೆಯಲ್ಲಿ ನಗರ ಕ್ಷೇತ್ರದಲ್ಲಿ ಸಂದಿಗ್ದ, ಗೊಂದಲಮಯ ವಾತಾವರಣ ನಿರ್ಮಾಣವಾಗಿತ್ತು. ಇಂತಹ ಪರಿಸ್ಥಿತಿಯಲ್ಲೂ ತುಮಕೂರಿನ ಜನತೆ ನನ್ನನ್ನು ಕೈ ಹಿಡಿದು ಗೆಲ್ಲಿಸಿದ್ದಾರೆ. ನಗರದ ಜನರಿಗೆ ನಾನು ಚಿರ ಋಣಿಯಾಗಿದ್ದೇನೆ. ನಗರದ ಸಮಗ್ರ ಅಭಿವೃದ್ಧಿ, ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಲು ನಾನು ಸದಾ ಬದ್ಧನಾಗಿದ್ದೇನೆ ಎಂದರು.

ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರಚಾರ ನಡೆಸಿ ನನ್ನ ಗೆಲುವಿಗೆ ಸಹಕರಿಸಿದ್ದಾರೆ. ಅವರೆಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದರು.
2018 ರ ಚುನಾವಣೆಯಲ್ಲೂ ನಗರ ಕ್ಷೇತ್ರದಲ್ಲಿ ಇದೇ ರೀತಿಯ ಗೊಂದಲಮಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಆ ಸಂದರ್ಭದಲ್ಲಿ ಬಹಿರಂಗವಾಗಿರಲಿಲ್ಲ. ಈ ಗೊಂದಲ ಪರಿಸ್ಥಿತಿ ಈ ಚುನಾವಣೆಯಲ್ಲಿ ಬಹಿರಂಗವಾಗಿದ್ದರೂ ಸ್ವಲ್ಪ ಕಷ್ಟವಾಯಿತು. ನನ್ನನ್ನು ಸೋಲಿಸುವ ಹುನ್ನಾರವೂ ನಡೆಯಿತು. ಏನೇ ಆದರೂ ನಗರದ ಜನತೆ ನನ್ನ ಕೈಹಿಡಿದಿದ್ದಾರೆ ಎಂದು ಹೇಳಿದರು.

ತುಮಕೂರು ನಗರದಲ್ಲಿ ನನ್ನ ಅವಧಿಯಲ್ಲಿ ಆದ ಅಭಿವೃದ್ಧಿ ಕಾರ್ಯಗಳನ್ನು ನನ್ನನ್ನು ಕೈ ಹಿಡಿದಿವೆ. ತುಮಕೂರು ಸ್ಮಾರ್ಟ್ ಸಿಟಿಯಾಗಿ ಸಾಕಷ್ಟು ಅಭಿವೃದ್ಧಿಯಾಗಿದೆ. ಇದಕ್ಕೆ ಬಿಜೆಪಿ ಸರ್ಕಾರ ನೀಡಿದ ಸಹಕಾರ ಕಾರಣ, ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ, ಗುಣಮಟ್ಟದ ಡಿಜಿಟಲ್ ಲೈಬ್ರರಿ ನಿರ್ಮಾಣ, ಎಂ.ಜಿ.ಸ್ಟೇಡಿಯಂ ನವೀಕರಿಸಿ ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯ ಕಲ್ಪಿಸಿರುವುದು. ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ವಿವಿಧ ಕ್ರೀಡಾ ಕೋರ್ಟ್ ನಿರ್ಮಾಣದ ಜೊತೆಗೆ ಸೌಲಭ್ಯ ಕಲ್ಪಿಸಿರುವುದು. ಉದ್ಯಾನವನಗಳ ಅಭಿವೃದ್ಧಿ, ಅಮಾನಿಕೆರೆಯಲ್ಲಿ ಉತ್ತಮ ಪಾರ್ಕ್ ನಿರ್ಮಿಸಿ ಹಿರಿಯ ನಾಗರಿಕರಿಗೆ ಬೆಳಗಿನ ವಾಕಿಂಗ್ ಗೆ ವ್ಯವಸ್ಥೆ ಕಲ್ಪಿಸಿರುವುದು.
ನಗರದ ರಸ್ತೆಗಳ ಅಭಿವೃದ್ಧಿ, ನಗರದ ಜನರಿಗೆ ಬೇಕಾದ ನೀರಿನ ಸೌಲಭ್ಯ, ಚರಂಡಿಗಳ ನಿರ್ಮಾಣ ಸೇರಿದಂತೆ ಅಗತ್ಯ ಮೂಲ ಭೂತ ಸೌಲಭ್ಯ ಕಲ್ಪಿಸಿರುವುದು ನನ್ನ 2ನೇ ಬಾರಿ ಗೆಲುವಿಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.ಜನರಿಗೋಸ್ಕರ ಶಾಸಕರ ಕಾರ್ಯಾಲಯ ಪ್ರಾರಂಭಿಸಲಾಗಿದೆ. ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಕಚೇರಿ ಸದಾ ಮುಕ್ತವಾಗಿರುತ್ತದೆ. ಜನರನ್ನು ನನನ್ನು ಆರಿಸಿ ಕಳಿಸಿದ್ದು ಅವರ ಕಷ್ಟ ಸುಖಗಳಿಗೆ ಸ್ಪಂದಿಸಿ ನಗರದ ಮತ್ತಷ್ಟು ಅಭಿವೃದ್ಧಿ ಗುರಿ ಇಟ್ಟುಕೊಂಡಿದ್ದೇನೆ. ಆ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವೆ ಎಂದು ತಿಳಿಸಿದರು.

ಶಾಸಕರ ಕಚೇರಿ ಪ್ರಾರಂಭೋತ್ಸವದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ಟೂಡಾ ಅಧ್ಯಕ್ಷ ಚಂದ್ರಶೇಖರ್, ಟೂಡಾ ಮಾಜಿ ಅಧ್ಯಕ್ಷ ಬಾವಿಕಟ್ಟೆ ನಾಗಣ್ಣ, ಪಾಲಿಕೆ ಮಾಜಿ ಮೇಯರ್ ಬಿ.ಜಿ.ಕೃಷ್ಣಪ್ಪ, ಮುಖಂಡರಾದ ವೈ.ಎಚ್.ಹುಚ್ಚಯ್ಯ, ನಂದೀಶ್, ರವೀಶಯ್ಯ, ಜಗದೀಶ್, ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ನಗರ ಬಿಜೆಪಿ ಅಧ್ಯಕ್ಷ ಹನುಮಂತರಾಜು ಸೇರಿದಂತೆ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡು ಶಾಸಕ ಜ್ಯೋತಿಗಣೇಶ್ ಅವರಿಗೆ ಶುಭ ಹಾರೈಸಿದರು.

Get real time updates directly on you device, subscribe now.

Comments are closed.

error: Content is protected !!