ಶಾಸಕ ಸಂತೋಷ್ ಲಾಡ್ ಗೆ ಸಚಿವ ಸ್ಥಾನ ನೀಡ್ಬೇಡಿ

71

Get real time updates directly on you device, subscribe now.


ತುಮಕೂರು: ನಕಲಿ ದಾಖಲೆ ಸೃಷ್ಟಿ ಮಾಡಿ ಸರಕಾರಿ ಜಮೀನು ಕಬಳಿಸಿ ಸಿಕ್ಕಿಬಿದ್ದಿರುವ ಕಲಘಟಗಿ ಶಾಸಕ ಸಂತೋಷ್ ಲಾಡ್ ಅವರನ್ನು ಸಚಿವರನ್ನಾಗಿ ನೇಮಕ ಮಾಡಿಕೊಳ್ಳಬಾರದು ಎಂದು ಸರಕಾರಕ್ಕೆ ಹಾಗೂ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಗೆ ಒತ್ತಾಯಿಸಿ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಮಾವೇಶಗೊಂಡ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಹೋರಾಟಗಾರರ ವೇದಿಕೆಯ ರಾಜ್ಯಾಧ್ಯಕ್ಷ ಹೆಚ್.ಜಿ.ರಮೇಶ್ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಕುಣಿಹಳ್ಳಿ ಮಂಜುನಾಥ್ ಹಾಗೂ ಇನ್ನಿತರೆ ಕಾರ್ಯಕರ್ತರು ಈ ಹಿಂದಿನ ಬಿಜೆಪಿ ಸರಕಾರದ ಶೇ. 40ರ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಲೇ ಜನರಿಂದ ಮತ ಪಡೆದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರಕಾರ ನಕಲಿ ದಾಖಲೆ ಸೃಷ್ಟಿಸಿ ಸರಕಾರಿ ಆಸ್ತಿ ನುಂಗಿರುವ ವ್ಯಕ್ತಿಯನ್ನು ಸಚಿವನನ್ನಾಗಿ ಮಾಡಿದ್ದೇ ಆದಲ್ಲಿ ರಾಜ್ಯದ ಮತದಾರರಿಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ. ಹಾಗಾಗಿ ಕಲಘಟಗಿ ಶಾಸಕ ಸಂತೋಷ್ ಲಾಡ್ ಅವರಿಗೆ ಸಚಿವ ಸ್ಥಾನ ನೀಡಬಾರದು ಎಂದು ಆಗ್ರಹಿಸಿದರು.

ಈ ವೇಳೆ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಹೋರಾಟಗಾರರ ವೇದಿಕೆಯ ರಾಜ್ಯಾಧ್ಯಕ್ಷ ಹೆಚ್.ಜಿ.ರಮೇಶ್ ಮಾತನಾಡಿ, ಮೂಲತಃ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನವರಾದ ಸಂತೋಷ್ ಲಾಡ್ ಬಳ್ಳಾರಿ ಜಿಲ್ಲೆಯಲ್ಲಿ ಪ್ರಭಾವಿ ರಾಜಕಾರಣಿಯೂ ಆಗಿದ್ದು, ತಾವು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ತೋರಣಗಲ್ಲು ಹೋಬಳಿ ಮಾಳಾಪುರ ಗ್ರಾಮದ ಸರ್ವೆ ನಂಬರ್ 123 ರಲ್ಲಿ ಸುಮಾರು 50 ಎಕರೆ ಸರಕಾರಿ ಭೂಮಿಯನ್ನು ನಕಲಿ ದಾಖಲೆ ಸೃಷ್ಟಿಸಿ ಸರಕಾರದಿಂದ ಯಾವುದೇ ರೀತಿಯ ಮಂಜೂರಾತಿ ಪಡೆಯದಿದ್ದರೂ ಖಾಸಗಿ ವ್ಯಕ್ತಿಯೊಬ್ಬನನ್ನು ಕೈಬರಹದ ಪಹಣಿಯಲ್ಲಿ ಹೆಸರು ನೋಂದಾಯಿಸಿ ನಂತರ ನಿಯಮಗಳನ್ನು ಉಲ್ಲಂಸಿ ಅವರಿಂದ ಕ್ರಯಕ್ಕೆ ಪಡೆದ ರೀತಿಯಲ್ಲಿ ತಮ್ಮ ಕುಟುಂಬದ ಸದಸ್ಯರಿಗೆ ತಲಾ 8 ಎಕರೆಯಂತೆ ಸುಮಾರು ಕೋಟ್ಯಂತರ ರೂಪಾಯಿ ಬೆಲೆ ಬಾಳುವ 50 ಎಕರೆ ಭೂಮಿಯನ್ನು ಕಬಳಿಕೆ ಮಾಡಲು ಸಂಚು ಹೂಡಿದ್ದು, ನಮ್ಮ ವೇದಿಕೆಯ ಹೋರಾಟದಿಂದ ಎಚ್ಚೆತ್ತುಕೊಂಡ ಅಲ್ಲಿನ ಜಿಲ್ಲಾ ಆಡಳಿತ ಎಲ್ಲಾ ನಕಲಿ ಸೃಷ್ಟಿತ ದಾಖಲೆಗಳನ್ನು ರದ್ದು ಮಾಡಿ ವಾಪಸ್ ಸರಕಾರಕ್ಕೆ ಪಡೆದಿರುತ್ತಾರೆ ಎಂದರು.

ಮಾಳಾಪುರದ ರೀತಿಯಲ್ಲಿಯೇ ಸಂಡೂರು ಸೇರಿದಂತೆ ಬಹಳಷ್ಟು ಕಡೆ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಸರಕಾರಿ ಆಸ್ತಿ ಕಬಳಿಕೆ ಮಾಡಿರುವುದು ಕಂಡು ಬರುತ್ತಿದೆ. ಈ ಸಂಬಂಧ ಕ್ರಿಮಿನಲ್ ಪ್ರಕರಣ ದಾಖಲು ಮಾಡುವಂತೆ ಬಳ್ಳಾರಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಿ ಮನವಿ ಮಾಡಲಾಗಿದ್ದರು ಈವರೆಗೂ ಯಾವುದೇ ರೀತಿಯಾದಂತಹ ಕ್ರಮ ಕೈಗೊಂಡಿರುವುದಿಲ್ಲ. ಇದಕ್ಕೆ ಇವರ ಪ್ರಭಾವ ರಾಜಕಾರಣವೇ ಸಾಕ್ಷಿಯಾಗಿರುತ್ತದೆ. ಆದ್ದರಿಂದ ಮತ್ತೆ ಇವರು ಸಚಿವರಾದರೆ ತಮ್ಮ ಎಲ್ಲಾ ಅಕ್ರಮ ಮುಚ್ಚಿ ಹಾಕುವ ಸಂಭವವೇ ಹೆಚ್ಚಾಗಿರುತ್ತದೆ. ಆದ್ದರಿಂದ ಸಂಬಂಧಿಸಿದ ಕಲಘಟಗಿ ವಿಧಾನಸಭಾ ಕ್ಷೇತ್ರದ ಸದಸ್ಯರಾಗಿ ಆಯ್ಕೆಯಾಗಿರುವ ಸಂತೋಷ್ ಹೆಚ್ ಲಾಡ್ ಇವರಿಗೆ ಸಚಿವ ಸ್ಥಾನ ನೀಡದೆ ಅವರ ವಿರುದ್ಧ ತನಿಖೆ ನಡೆಸಲು ವಿಶೇಷ ಸಮಿತಿ ರಚಿಸುವಂತೆ ಹಾಗೂ ಅವರ ಮೇಲೆ ಕ್ರಿಮಿನಲ್ ಪ್ರಕರಣ ಹೂಡಿ ಕಾನೂನು ಕ್ರಮ ಜರುಗಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದು ಹೆಚ್.ಜಿ.ರಮೇಶ್ ತಿಳಿಸಿದರು.

ಪ್ರತಿಭಟನೆಯಲ್ಲಿ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ರಾಜ್ಯ ಖಜಾಂಚಿ ಮೋಹನ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್, ತುರುವೇಕೆರೆ ತಾಲೂಕು ಅಧ್ಯಕ್ಷ ರುದ್ರೇಶ್, ತುಮಕೂರು ನಗರ ಘಟಕದ ಅಧ್ಯಕ್ಷ ದೀಪಕ್, ದೊರೆಸ್ವಾಮಿ, ಕೊರಟಗೆರೆ ಗಿರೀಶ್ ಇನ್ನಿತರರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!