ಕುಣಿಗಲ್: ತಾಲೂಕಿನಲ್ಲಿರುವ ಕೆಲ ಅಧಿಕಾರಿಗಳು ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ದುಡ್ಡು ಕೊಟ್ಟು ಬಂದು ಇಲ್ಲಿ ದುಡ್ಡು ಮಾಡುವ ದಂಧೆ ಇಟ್ಟುಕೊಂಡಿದ್ದು ಅದಕ್ಕೆ ಇನ್ನು ಮುಂದೆ ಆಸ್ಪದ ಇಲ್ಲ. ಬಡ ರೈತರ ಶೋಷಣೆ ಮಾಡಿ ದುಡ್ಡುಮಾಡುವ ದಂಧೆ ನಡೆಸುವ ಮನೋಭಾವ ಇದ್ದವರು ತಾಲೂಕಿನಿಂದ ವರ್ಗ ಮಾಡಿಸಿಕೊಂಡು ಹೋಗಿ ಎಂದು ಶಾಸಕ ಡಾ.ರಂಗನಾಥ್ ಹೇಳಿದರು.
ಶುಕ್ರವಾರ ಮಧ್ಯಾಹ್ನ ತಾಪಂ ಸಭಾಂಗಣದಲ್ಲಿ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಅಧಿಕಾರಿಗಳ ಸಭೆ ನಡೆಸಿದ ಅವರು, ತಮ್ಮ ಮೊದಲ ಅವಧಿಯಲ್ಲಿ ತಾಲೂಕಿನಲ್ಲಿ ಏನಾದರೂ ಪ್ರಗತಿ ಸಾಧಿಸಲು ಕಾರಣವಾಯಿತೆಂದರೆ ಅದೂ ನನ್ನ ಹಗಲಿರುಳು ಶ್ರಮದ ಹೊರತು ಅಧಿಕಾರಿಗಳಿಂದಲ್ಲ. ತಾಲೂಕಿನಲ್ಲಿ ಕೆಲ ಇಲಾಖೆಯಲ್ಲಿ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸದೆ ಕೇವಲ ಹಣ ಮಾಡಲು, ಕಮಿಷನ್ ಹೊಡೆಯಲು ಕುಳಿತಿದ್ದಾರೆ. ಇದು ಮುಂದೆ ಆಗೊಲ್ಲ ಎಂದರು.
ಈಗ ಇರುವುದು ನಮ್ಮ ಕಾಂಗ್ರೆಸ್ ಸರ್ಕಾರ, ಅಧಿಕಾರಿಗಳು ಕೇವಲ ಎಂಟು ಗಂಟೆ ಕೆಲಸ ಎಂಬುದ ಮರೆತು ಜನರ ಸಮಸ್ಯೆಗೆ ಸದಾ ಸ್ಪಂದಿಸಬೇಕು. ಪಿಡಿಒಗಳು ಜನರ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡಬೇಕು. ಲಂಚ ಇಲಾಖೆ ಮಾಡಲು ಲಂಚ ಎಂದು ಕೇಳಿ ಬಂದಲ್ಲಿ ಮುಲಾಜಿಲ್ಲದೆ ಕಠಿಣ ಕ್ರಮಕ್ಕೆ ಶಿಫಾರಸ್ಸು ಮಾಡಬೇಕಾಗುತ್ತೆ. ಇಒ ಈ ಬಗ್ಗೆ ಎಚ್ಚರದಿಂದ ಇರಬೇಕು. ಪೊಲೀಸ್ ಅಧಿಕಾರಿಗಳು ಇನ್ನು ಮುಂದೆ ಕೇಸು ಹಾಕಿ ಜನರಿಗೆ ತೊಂದರೆ ಕೊಡುವ ರಾಜಕಾರಣ ಬಿಡಬೇಕು. ಎರಡೂ ಕಡೆಯವರನ್ನು ಕೂರಿಸಿ ಸಂಧಾನ ಮಾಡುವ ಮೂಲಕ ಜನಪರ ಪೊಲೀಸಿಂಗ್ ಮಾಡಬೇಕು. ಅಧಿಕಾರಿಯೊಬ್ಬರು ನನ್ನ ಮೇಲೆ ಎಂಟು ಕೇಸು ಹಾಕಿದ್ದಾರೆ. ಆದರೆ ಇಂದು ಸಭೆಗೆ ಬಂದಿಲ್ಲ. ಒಂದು ಕೇಸು ಹಾಕಿದರೆ ಆದ ಆ ವ್ಯಕ್ತಿ, ಕುಟುಂಬದ ಮೇಲೆ ಎಂತಹ ಪರಿಣಾಮ ಬೀರುತ್ತದೆ ಎಂಬುದು ಅರಿಯಬೇಕು. ಕಂದಾಯ ಇಲಾಖೆಯಲ್ಲಿ ಆರ್ಐಗಳೆ ಡಿಸಿಗಳಾಗಿದ್ದಾರೆ. ರೈತರನ್ನು ವಿನಾಕಾರಣ ಶೋಷಣೆ ಮಾಡಿದಲ್ಲಿ ಮುಲಾಜಿಲ್ಲದೆ ಕ್ರಮ ವಹಿಸಬೇಕಾಗುತ್ತದೆ ಎಂದರು.
ಪಶು ಸಂಗೋಪನೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ನೆಪ ಹೇಳಬೇಡಿ, ಎಲ್ಲರೂ ಕೆಲಸ ಮಾಡಲಾಗದು ಎಂದು ಪ್ರತಿಭಟನೆ ನಡೆಸಿ ನಿಮ್ಮ ಇಲಾಖೆ ಮುಖ್ಯಸ್ಥರಿಗೆ ಪತ್ರ ಬರೆಯಿರಿ. ನಂತರ ಅ ಬಗ್ಗೆ ನಾನು ಗಮನ ಹರಿಸುತ್ತೇನೆ ಎಂದು ಪಶುಸಂಗೋಪನೆ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.
ಬೆಸ್ಕಾಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ಕಾರ್ಯ ವೈಖರಿ ಸುಧಾರಿಸಿಕೊಳ್ಳಬೇಕು. ಆರೋಗ್ಯ ಇಲಾಖೆ ಸೇರಿದಂತೆ ಪಟ್ಟಣ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ನಡವಳಿಕೆ ತೃಪ್ತಿ ತರುತ್ತಿಲ್ಲ. ಸಾಧ್ಯವಾದರೆ ಕೆಲಸ ಮಾಡಿ ಇಲ್ಲವಾದರೆ ವರ್ಗ ಮಾಡಿಸಿಕೊಂಡು ಹೋಗಿ, ನನ್ನ ಕ್ಷೇತ್ರದಲ್ಲಿ ಕೆಲಸ ಮಾಡದವರು ರಾಜ್ಯದಲ್ಲಿ ಎಲ್ಲಿ ಹೇಗೆ ಕೆಲಸ ಮಾಡುತ್ತಾರೆ ಎಂಬುದ ನಾನೇ ನೋಡುತ್ತೇನೆ. ಪ್ರತಿ ಗ್ರಾಮಗಳಲ್ಲೂ ಗ್ರಾಮ ವಾಸ್ತವ್ಯ ಮಾಡುತ್ತೇನೆ. ಅಧಿಕಾರಿಗಳು ನೆಪ ಹೇಳದೆ ಹಾಜರಿದ್ದು ಜನರ ಸಮಸ್ಯೆ ಸ್ಪಂದಿಸಬೇಕು. ಸರ್ವೇ ಇಲಾಖೆಯಲ್ಲಿ ವಿನಾಕಾರಣ ಶೋಷಣೆ ಮಾಡುವುದು ನಿಲ್ಲಿಸಬೇಕು, ಪುರಸಭೆ ಮುಖ್ಯಾಧಿಕಾರಿಗಳು ಇನ್ನು ಮೂರು ತಿಂಗಳೊಳಗೆ ಇ-ಖಾತೆ ಮಾಡಬೇಕು. ಇನ್ನೊಂದು ವಾರದೊಳಗೆ ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಬೇಕು. ಇಲ್ಲವಾದಲ್ಲಿ ನೀವು ಬೇರೆ ಜಾಗನೋಡಿಕೊಳ್ಳಿ ಎಂದು ಮುಖ್ಯಾಧಿಕಾರಿಗಳಿಗೆ ನೇರವಾಗಿ ಹೇಳಿದ ಶಾಸಕರು ಸಹಕಾರ ಇಲಾಖೆಯ ಅಧಿಕಾರಿಗಳ ವಿರುದ್ಧ ಅಸಮಧಾನ ವ್ಯಕ್ತಪಡಿಸಿ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ಆಯೋಜಿಸುವಂತೆ ತಹಶೀಲ್ದಾರ್ ಗೆ ಸೂಚಿಸಿದರು.
ಸಭೆಯಲ್ಲಿ ತಹಶೀಲ್ದಾರ್ ಮಹಾಬಲೇಶ್ವರ್, ಇಒ ಜೋಸೆಫ್, ಅಮೃತೂರು ಸಿಪಿಐ ಅರುಣ ಸಾಲುಂಕಿ, ಪುರಸಭೆ ಮುಖ್ಯಾಧಿಕಾರಿ ಶಿವಪ್ರಸಾದ್ ಸೇರಿದಂತೆ ಇತರರು ಇದ್ದರು.
Comments are closed.