ಕೆರೆ ಆವರಣ ಸೇರುತ್ತಿದೆ ಪಟ್ಟಣದ ತ್ಯಾಜ್ಯ

ಕುಣಿಗಲ್ ದೊಡ್ಡಕೆರೆಯ ಪರಿಸರ ಸಂರಕ್ಷಣೆ ಆಗ್ರಹ

153

Get real time updates directly on you device, subscribe now.


ಕುಣಿಗಲ್: ಪಟ್ಟಣದ ಇತಿಹಾಸ ಪ್ರಸಿದ್ದ ದೊಡ್ಡಕೆರೆಯ ಸುರಕ್ಷಿತ ವಲಯದಲ್ಲಿ ಪರಿಸರ ವಿರೋಧಿ ಚುಟುವಟಿಕೆ ವ್ಯಾಪಕವಾಗಿ ನಡೆಯುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ನಿಯಮಾನುಸಾರ ಕ್ರಮಕೈಗೊಂಡು ದೊಡ್ಡಕೆರೆಯ ಪರಿಸರ ಸಂರಕ್ಷಣೆ ಮಾಡುವಂತೆ ನಾಗರಿಕರು ಆಗ್ರಹಿಸಿದ್ದಾರೆ.

ಪಟ್ಟಣದ ಹೃದಯ ಭಾಗದಲ್ಲೆ ದೊಡ್ಡಕೆರೆ ಇದ್ದು ಪಟ್ಟಣದ ಐದು ವಾರ್ಡ್ ಸೇರಿದಂತೆ ಸುತ್ತಮುತ್ತಲಿನ ಎಂಟಕ್ಕೂ ಹೆಚ್ಚು ಹಳ್ಳಿಗಳು ಕೆರೆ ಹೊಂದುಕೊಂಡಿದೆ. ದೊಡ್ಡಕೆರೆಯು ಪಟ್ಟಣದ ಶಾಶ್ವತ ಕುಡಿಯುವ ನೀರು ಪೂರೈಕೆಯ ಪ್ರಮುಖ ತಾಣವೂ ಆಗಿದೆ. ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಅಧಿನಿಯಮ, 2018 ಪ್ರಕಾರ ಕೆರೆಯ ಏರಿಯ ಹೊರಗಿನ ಸರಹದ್ದಿನಿಂದ ಮುವತ್ತು ಮೀಟರ್ ಸುರಕ್ಷಿತ ವಲಯ ಎಂದು ಘೋಷಿಸಲಾಗಿದೆ.

ನಗರೀಕರಣ ವ್ಯಾಪಕವಾದಂತೆಲ್ಲಾ ದೊಡ್ಡಕೆರೆಯ ಸುರಕ್ಷಿತ ವಲಯದಲ್ಲಿ ಕಟ್ಟಡಗಳ ತ್ಯಾಜ್ಯ ಸೇರಿದಂತೆ ಇತರೆ ತ್ಯಾಜ್ಯ ತಂದು ಹಾಕುವುದು. ಅಕ್ಕಪಕ್ಕದ ಗ್ಯಾರೇಜ್ ನ ತ್ಯಾಜ್ಯವನ್ನು ಆವರಣದಲ್ಲಿ ಸುಡುವುದು. ಸುರಕ್ಷಿತ ವಲಯದೊಳಗೆ ನಿಯಮಗಳ ಉಲ್ಲಂಸಿ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ. ದೊಡ್ಡಕೆರೆಯು ಹೇಮಾವತಿ ನಾಲವಲಯದ ವ್ಯಾಪ್ತಿಗೆ ಬರುತ್ತಿದ್ದರೂ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ನಿಯಮದ ಪ್ರಕಾರ ಸ್ಥಳೀಯ ಪುರಸಭೆಯು ಸಹ ಕರೆ ಸಂರಕ್ಷಣೆ ನಿಟ್ಟಿನಲ್ಲಿ ಜವಾಬ್ದಾರಿ ಹೊತ್ತಿದೆ.

ಕಟ್ಟಡ ಘನತ್ಯಾಜ್ಯ ವಿಸರ್ಜನೆ ನಿಟ್ಟಿನಲ್ಲಿ ಪರಿಸರ ಇಲಾಖೆ ಜಾರಿಗೆ ತಂದಿರುವ ಕಟ್ಟಡ ತ್ಯಾಜ್ಯ ವಿಲೆವಾರಿ ನಿಯಮಾವಳಿ, ಕೆರೆ ಆವರಣದಲ್ಲಿ ಮಾಲಿನ್ಯ ನಿಯಂತ್ರಣ ಸಂಬಂಧಿಸಿದಂತೆ ಜಲಮಾಲಿನ್ಯ (ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯಿದೆ), ಕೆರೆ ಆವರಣದಲ್ಲಿ ಇತರೆ ತ್ಯಾಜ್ಯಸುಡುವುದನ್ನು ನಿಯಂತ್ರಿಸಲು ವಾಯುಮಾಲಿನ್ಯ(ತಡೆ ಮತ್ತು ನಿಯಂತ್ರಣ) ಕಾಯಿದೆ ಜಾರಿಯಲ್ಲಿದೆ. ಪಟ್ಟಣ ಸೇರಿದಂತೆ ಅಕ್ಕಪಕ್ಕದ ಎರಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾವಿರಾರು ಜನರಿಗೆ ಕುಡಿಯುವ ನೀರು ಪೂರೈಕೆಗೆ ಪ್ರಮುಖ ತಾಣ ದೊಡ್ಡಕೆರೆಯ ಆಗಿರುವುದರಿಂದ ದೊಡ್ಡಕೆರೆ ಆವರಣ ಮತ್ತು ಕೆರೆಯ ನೀರು ಮಾಲಿನ್ಯ ನಿಯಂತ್ರಣ, ಸಂರಕ್ಷಣೆ ಅತ್ಯಗತ್ಯವಾಗಿದೆ. ಮಾಲಿನ್ಯ ನಿಯಂತ್ರಿಸಲು ಹಲವು ಕಾನೂನುಗಳಿದ್ದರೂ ಪಾಲಿಸಬೇಕಾದ ಹೊಣೆಗಾರಿಕೆ ಹೊತ್ತಿರುವ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕೆರೆಯ ಆವರಣದಲ್ಲಿ ಪರಿಸರ ವಿರೋಧಿ ಚಟುವಟಿಕೆ ನಿಯಂತ್ರಣವಾಗುತ್ತಿಲ್ಲ.

ಹೇಮಾವತಿ ನಾಲಾ ವಲಯದ ಅಧಿಕಾರಿಗಳು ಕೆರೆ ಸಂರಕ್ಷಣೆ ನಿಟ್ಟಿನಲ್ಲಿ ಯಾವುದೇ ಅಗತ್ಯ ಕ್ರಮಕ್ಕೆ ಮುಂದಾಗಿಲ್ಲ. ಪುರಸಭೆಯಲ್ಲಿ ಪರಿಸರ ಅಭಿಯಂತರರಿದ್ದು ಇವರಿಗೆ ಬಹುತೇಕ ನಿಯಮಗಳ ಅರಿವಿದ್ದರೂ ಇದುವರೆವಿಗೂ ಕೆರೆ ಮಾಲಿನ್ಯ ನಿಯಂತ್ರಣ ನಿಟ್ಟಿನಲ್ಲಿ ಯಾವುದೇ ಪ್ರಕರಣ ದಾಖಲು ಮಾಡದೆ ಇರುವುದು ಎಷ್ಟರ ಮಟ್ಟಿಗೆ ನಿಯಮ ಪಾಲನೆ ಆಗುತ್ತಿದೆ ಎಂದು ಕನ್ನಡ ಸೇನೆ ಅಧ್ಯಕ್ಷ ಶ್ರೀನಿವಾಸ್ ಪ್ರಶ್ನಿಸುತ್ತಾರೆ.

ಪುರಸಭೆ ಪರಿಸರ ಅಭಿಯಂತರ ಚಂದ್ರಶೇಖರ್, ಕೆರೆ ಆವರಣದಲ್ಲಿ ಯಾವುದೇ ಪರಿಸರ ವಿರೋಧಿ ಚಟುವಟಿಕೆ ನಡೆಸದಂತೆ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಕೆಲವರು ತ್ಯಾಜ್ಯ ಸುಡುತ್ತಿರುವ ಬಗ್ಗೆ ದೂರುಬಂದಿದ್ದರು ಕೆರೆ ಸುತ್ತಮುತ್ತಲ ಗ್ಯಾರೇಜ್ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಸುರಕ್ಷಿತ ಅಂತರದಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ ಎಚ್ಚರಿಕೆ ಫಲಕವನ್ನು ಅಳವಡಿಸಲಾಗಿದೆ ಎಂದಿದ್ದಾರೆ.

Get real time updates directly on you device, subscribe now.

Comments are closed.

error: Content is protected !!