ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಪೂರೈಸಿ

ರೈತರಿಂದ ದೂರು ಬರದಂತೆ ಎಚ್ಚರ ವಹಿಸಿ- ಅಧಿಕಾರಿಗಳಿಗೆ ಡೀಸಿ ಸೂಚನೆ

191

Get real time updates directly on you device, subscribe now.


ತುಮಕೂರು: ಜಿಲ್ಲೆಗೆ ನಿಗದಿಪಡಿಸಿದ ಗುರಿ ಅನ್ವಯ ರಸಗೊಬ್ಬರ ಕಾಪು ದಾಸ್ತಾನು ವ್ಯವಸ್ಥಿತವಾಗಿ ಮಾಡಿ, ರೈತರಿಗೆ ಯಾವುದೇ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಕೊರತೆಯಾಗದಂತೆ ವಿತರಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ 2023ರ ಮುಂಗಾರು ಹಂಗಾಮು ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸರಬರಾಜು ದಾಸ್ತಾನು ಮತ್ತು ವಿತರಣೆ ಕುರಿತ ಪೂರ್ವ ಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ರೈತರಿಗೆ ಉತ್ತಮ ಬಿತ್ತನೆ ಬೀಜ ಒದಗಿಸುವ ಉದ್ದೇಶದಿಂದ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದ್ದು, ರೈತರ ಕೃಷಿ ಜಮೀನುಗಳಲ್ಲಿ ಬಿತ್ತನೆಗೆ ಬೇಕಾದಂತಹ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಸಮರ್ಪಕ ಪೂರೈಕೆಯಾಗುವಂತೆ ನಿಗಾ ವಹಿಸಬೇಕು ಎಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸೂಚನಾ ಫಲಕಗಳಲ್ಲಿ ಪ್ರದರ್ಶನ: ರೈತರು ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ರೈತರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡುವ ಮೂಲಕ ರೈತರಿಗೆ ನೆರವಾಗಬೇಕು. ಬಿತ್ತನೆ ಬೀಜ, ರಸಗೊಬ್ಬರಗಳ ಕೃತಕ ಅಭಾವ ಸೃಷ್ಟಿಸುವರು ಕಂಡು ಬಂದಲ್ಲಿ ಅವರ ಮೇಲೆ ಕ್ರಮ ಜರುಗಿಸಬೇಕು. ಕೃಷಿ ಇಲಾಖೆ ಅಧಿಕಾರಿಗಳು, ತಾಲ್ಲೂಕು ಸಿಡಿಒಗಳು ಪ್ರತಿದಿನ ರೈತರನ್ನು ಭೇಟಿ ಮಾಡಿ ಅವರ ಸಮಸ್ಯೆಗೆ ಸ್ಪಂದಿಸಬೇಕು. ಅಲ್ಲದೆ ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಿಗೆ ನಿಯಮಿತವಾಗಿ ಭೇಟಿ ನೀಡಿ ಬಿತ್ತನೆ ಬೀಜ, ರಸಗೊಬ್ಬರದ ದಾಸ್ತಾನು ವಿವರ ಹಾಗೂ ದರಗಳನ್ನು ಸೂಚನಾ ಫಲಕಗಳಲ್ಲಿ ಪ್ರಚುರಪಡಿಸಿರುವ ಕುರಿತು ಪರಿಶೀಲಿಸಬೇಕು ಎಂದು ಸೂಚಿಸಿದರು.

ವಿಳಂಬರಹಿತ ರಸಗೊಬ್ಬರ ವಿತರಣೆಗೆ ಕ್ರಮ ವಹಿಸಿ: ಜಿಲ್ಲೆಗೆ ಸರಬರಾಜು ಆಗಬೇಕಾದ ರಸಗೊಬ್ಬರವನ್ನು ವಿಳಂಬ ಮಾಡದೆ ನಿಗದಿತ ಪ್ರಮಾಣದಲ್ಲಿ ವಿತರಿಸಬೇಕು, ರೈತರಿಗೆ ಮತ್ತೊಂದು ಕಂಪನಿಯ ರಸಗೊಬ್ಬರ ಖರೀದಿಸುವಂತೆ ಒತ್ತಡ ಹೇರಬಾರದು. ನಿಗದಿತ ದರಕ್ಕೆ ಮಾರಾಟ ಮಾಡಬೇಕು. ರಸಗೊಬ್ಬರದ ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತಹ ಮಾರಾಟಗಾರರ ಮೇಲೆ ಕ್ರಮ ಜರುಗಿಸುವಂತೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಸಭೆಯಲ್ಲಿ ಹಾಜರಿದ್ದ ಬಿತ್ತನೆ ಬೀಜ ಸರಬರಾಜುದಾರರಾದ ಕೆಎಸ್ಎಸ್ಸಿ ಮತ್ತು ಕೆಓಎಫ್ ವ್ಯವಸ್ಥಾಪಕರಿಗೆ ಗುಣಮಟ್ಟದ ಬಿತ್ತನೆ ಬೀಜ ಸರಬರಾಜು ಮಾಡುವಂತೆ, ರೈತರಿಂದ ಬಿತ್ತನೆ ಬೀಜದ ಗುಣಮಟ್ಟ ಕುರಿತು ಯಾವುದೇ ದೂರುಗಳು ಬಾರದಂತೆ ಎಚ್ಚರ ವಹಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಕೃಷಿ ಇಲಾಖೆಯ ಜಂಟಿ ನಿದೇಶಕರಾದ ಕೆ.ಹೆಚ್.ರವಿ ಮಾತನಾಡಿ, ಜಿಲ್ಲೆಯಲ್ಲಿ 2023ರ ಜನವರಿ ಮಾಹೆಯಿಂದ ಮೇ 16ರ ವರೆಗೆ ವಾಡಿಕೆ ಮಳೆ 87.00 ಮಿ.ಮೀ. ಇದ್ದು, ಇಲ್ಲಿಯವರೆಗೆ 133 ಮಿ.ಮೀ. (ಶೇ.53) ರಷ್ಟು ಮಳೆಯಾಗಿರುತ್ತದೆ. ಪ್ರಸ್ತುತ ಪೂರ್ವ ಮುಂಗಾರಿನಲ್ಲಿ ಬಿತ್ತನೆಯಾಗಿದ್ದ ಹೆಸರು, ಉದ್ದು ಮತ್ತು ಅಲಸಂದೆ ಬೆಳೆಗಳು ಚಿಗುರು ಹೊಡೆಯುವ ಹಂತದಲ್ಲಿದ್ದು, ಸದ್ಯ ಮಳೆಯ ಅವಶ್ಯಕತೆ ಇರುತ್ತದೆ ಎಂದು ತಿಳಿಸಿದರು.

2023- 24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜವು ರೈತರ ಬೇಡಿಕೆ ಅನುಗುಣವಾಗಿ ಪೂರೈಕೆ ಮಾಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಭತ್ತವು 2670 ಕ್ವಿಂಟಾಲ್ ಬೇಡಿಕೆ ಇದೆ. ತೊಗರಿ 676 ಕ್ವಿಂಟಾಲ್ ಬೇಡಿಕೆ ಅದರಲ್ಲಿ 7.65 ಕ್ವಿಂಟಾಲ್ ಗುರಿ ಸಾಧಿಸಲಾಗಿದೆ. ಹೆಸರು 593 ಕ್ವಿಂಟಾಲ್ ಬೇಡಿಕೆ ಅದರಲ್ಲಿ 185 ಕ್ವಿಂಟಾಲ್ ಗುರಿ ಸಾಧಿಸಲಾಗಿದೆ. ಅಲಸಂದೆ 291 ಕ್ವಿಂಟಾಲ್ ಬೇಡಿಕೆ ಅದರಲ್ಲಿ 206 ಕ್ವಿಂಟಾಲ್ ಗುರಿ ಸಾಧಿಸಲಾಗಿದೆ. ಶೇಂಗಾ 16475 ಕ್ವಿಂಟಾಲ್ ಬೇಡಿಕೆ ಇದೆ. ಒಟ್ಟು 24062 ಕ್ವಿಂಟಾಲ್ ಬಿತ್ತನೆ ಬೀಜದ ಅವಶ್ಯಕತೆ ಇದ್ದು, ಇಲ್ಲಿಯ ವರೆಗೆ ಒಟ್ಟು 735.95 ಕ್ವಿಂಟಾಲ್ ವಿವಿಧ ಬಿತ್ತನೆ ಬೀಜಗಳ ದಾಸ್ತಾನಿದ್ದು, 397.8 ಕ್ವಿಂಟಾಲ್ ಬಿತ್ತನೆ ಬೀಜ ವಿತರಣೆಯಾಗಿರುತ್ತದೆ. ಹಾಲಿ ಬಿತ್ತನೆ ಬೀಜ ವಿತರಣೆ ಪ್ರಗತಿಯಲ್ಲಿದ್ದು, ಯಾವುದೇ ಬಿತ್ತನೆ ಬೀಜಗಳಿಗೆ ಕೊರತೆ ಇರುವುದಿಲ್ಲವೆಂದು, ತಳಿವಾರು ಬಿತ್ತನೆ ಬೀಜದ ಲಭ್ಯತೆ ಕುರಿತು ಸಭೆಗೆ ವಿವರಿಸಿದರು. ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಸಾಮಾನ್ಯ ವರ್ಗದ ರೈತರಿಗೆ ಶೇ.50 ರ ವರೆಗೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ರೈತರಿಗೆ ಶೇ.75 ರವರೆಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಮುಂಗಾರು ಹಂಗಾಮಿಗೆ ಒಟ್ಟು 60721 ಮೆಟ್ರಿಕ್ ಟನ್ ನಷ್ಟು ರಸಗೊಬ್ಬರದ ಅವಶ್ಯಕತೆ ಇರುತ್ತದೆ. ಮೇ ಮಾಹೆಯ ಅಂತ್ಯಕ್ಕೆ 17228 ಮೆಟ್ರಿಕ್ ಟನ್ ರಸಗೊಬ್ಬರದ ಅವಶ್ಯಕತೆ ಇದ್ದು, ಹಾಲಿ ಜಿಲ್ಲೆಯಲ್ಲಿ 31773 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಲಭ್ಯವಿರುವುದಾಗಿ, ಯಾವುದೇ ರಸಗೊಬ್ಬರ ಕೊರತೆ ಇಲ್ಲವೆಂದು ಎಂದು ಸಭೆಗೆ ಮಾಹಿತಿ ನೀಡಿದರು.

ಕೃಷಿ ಮಾರುಕಟ್ಟೆ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರು, ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರು, ಎಲ್ಲಾ ತಾಲ್ಲೂಕುಗಳ ಸಹಾಯಕ ಕೃಷಿ ನಿರ್ದೇಶಕರು, ವ್ಯವಸ್ಥಾಪಕರು, ಕೆಎಸ್ಎಸ್ಸಿ ವ್ಯವಸ್ಥಾಪಕರು, ಕೆಓಎಫ್ ವ್ಯವಸ್ಥಾಪಕರು, ಕೆಎಫ್ ಸಿಎಂಎಫ್, ರಸಗೊಬ್ಬರ ತಯಾರಿಕಾ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ರಸಗೊಬ್ಬರ ಮಾರಾಟಗಾರರು ಸಭೆಯಲ್ಲಿ ಹಾಜರಿದ್ದರು

Get real time updates directly on you device, subscribe now.

Comments are closed.

error: Content is protected !!