ತ್ಯಾಜ್ಯ ವಸ್ತುಗಳನ್ನು ಆರ್ಆರ್ಆರ್ ಕೇಂದ್ರಕ್ಕೆ ಕಳಿಸಿ

99

Get real time updates directly on you device, subscribe now.


ಕುಣಿಗಲ್: ಸ್ವಚ್ಛನಗರ ನಿರ್ವಹಣೆ ನಿಟ್ಟಿನಲ್ಲಿ ಪಟ್ಟಣದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವಿಲೆವಾರಿ ಹಾಗೂ ಪರಿಣಾಮಕಾರಿ ನಿರ್ವಹಣೆ ಎಲ್ಲರ ಕರ್ತವ್ಯವಾಗಬೇಕಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಶಿವಪ್ರಸಾದ್ ಹೇಳಿದರು.

ಮಂಗಳವಾರ ಪಟ್ಟಣ ವಿವಿಧೆಡೆಗಳಲ್ಲಿ ತ್ಯಾಜ್ಯ ನಿರ್ವಹಣೆ ನಿಟ್ಟಿನಲ್ಲಿ ಆರ್ಆರ್ಆರ್ ಕೇಂದ್ರಗಳ ಸ್ಥಾಪನೆಗೆ ಚಾಲನೆ ನೀಡಿ ಮಾತನಾಡಿ, ಪಟ್ಟಣದ ವ್ಯಾಪ್ತಿಯಲ್ಲಿ ಉತ್ಪಾದನೆಯಾಗುವ ವಿವಿಧ ರೀತಿಯ ತ್ಯಾಜ್ಯಗಳನ್ನು ಪುರಸಭೆ ವ್ಯವಸ್ಥಿತವಾಗಿ ನಿರ್ವಹಣೆ ಮಾಡಿದರೂ ಕೆಲವೊಂದು ಕಾರಣಗಳಿಂದ ಪರಿಣಾಮಕಾರಿ ನಿರ್ವಹಣೆ ಕಷ್ಟಸಾಧ್ಯವಾಗುತ್ತಿದೆ. ಇಂತಹ ಸಮಯದಲ್ಲಿ ಪುರಸಭೆಯೊಂದಿಗೆ ನಾಗರಿಕರು ಸಹಕರಿಸಿದಾಗ ತ್ಯಾಜ್ಯ ವಿಲೇವಾರಿ ಸುಸೂತ್ರವಾಗಿ ನಡೆದು ಸ್ವಚ್ಛನಗರ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದರು.

ಪುರಸಭೆ ಪರಿಸರ ಅಭಿಯಂತರ ಚಂದ್ರಶೇಖರ್ ಮಾತನಾಡಿ, ತ್ಯಾಜ್ಯಗಳ ಮರುಬಳಕೆ, ಬಳಕೆ ನಿಯಂತ್ರಣ ಹಾಗೂ ಪುನರ್ ನಿರ್ಮಾಣ ಈ ಆರ್ಅರ್ಆರ್ ಯೋಜನೆಯ ಉದ್ದೇಶವಾಗಿದೆ. ನಾಗರಿಕರ ಮನೆಯಲ್ಲಿರುವ ಹಳೆಬಟ್ಟೆ, ಪೇಪರ್, ಎಲೆಕ್ಟ್ರಾನಿಕ್ ವಸ್ತುಗಳನ್ನು ವಿಂಗಡಿಸಿಟ್ಟುಕೊಂಡು ಪುರಸಭೆ ವಾಹನಗಳು ಬಂದಾಗ ನೀಡಿದಲ್ಲಿ ಅವುಗಳನ್ನು ಆರ್ಆರ್ಆರ್ ಕೇಂದ್ರದಲ್ಲಿ ವೈಜ್ಞಾನಿಕರ ರೀತಿಯಲ್ಲಿ ನಿರ್ವಹಿಸಿ ಜನತೆಗೆ ಅನುಕೂಲ ಮಾಡಿಕೊಡಲಾಗುತ್ತದೆ. ಪ್ರತಿಯೊಂದು ಕೇಂದ್ರದಲ್ಲೂ ಒಬ್ಬ ಸಿಬ್ಬಂದಿ ನಿಯೋಜಿಸಿದ್ದು ಸ್ವಚ್ಛ ನಗರ ನಿರ್ಮಾಣಕ್ಕೆ ಈ ಯೋಜನೆ ಸಹಕಾರಿಯಾಗಿದೆ. ನಾಗರಿಕರು ಸಹಕಾರ ನೀಡಬೇಕು ಎಂದರು. ಪಟ್ಟಣದಲ್ಲಿ ಐದಾರು ವಾರ್ಡ್ಗಳಿಗೆ ಒಂದರಂತೆ ಒಟ್ಟು ನಾಲ್ಕು ಕೇಂದ್ರಗಳನ್ನು 23ನೇ ವಾರ್ಡ್, 15ನೇ ವಾರ್ಡ್, 6ನೇ ವಾರ್ಡ್ ಹಾಗೂ 18ನೇ ವಾರ್ಡ್ಗಳಲ್ಲಿ ಸ್ಥಾಪಿಸಿ ತ್ಯಾಜ್ಯ ಸಂಗ್ರಹಿಸುವ ವ್ಯವಸ್ಥೆ ರೂಪಿಸಲಾಗಿದೆ ಎಂದರು.

ಪುರಸಭೆ ಸದಸ್ಯರಾದ ನಾಗೇಶ್, ಅರುಣಕುಮಾರ್ ಮಾತನಾಡಿ, ಸರ್ಕಾರದ ಈ ಯೋಜನೆ ನಗರದ ಸ್ವಚ್ಛತೆಗೆ ಪೂರಕವಾಗಿದೆ. ಆದರೆ ಇದರ ಸದ್ಬಳಕೆ ನಿಟ್ಟಿನಲ್ಲಿ ನಾಗರಿಕರಲ್ಲಿ ಅರಿವು ಮೂಡಿಸುವ ಜೊತೆ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಿದಾಗ ಕೇಂದ್ರಗಳ ಸ್ಥಾಪನೆ ಉದ್ದೇಶ ಸರಿಯಾಗುತ್ತದೆ ಎಂದರು.

ಪುರಸಭೆ ಸದಸ್ಯೆ ಅಸ್ಮಾ, ವ್ಯವಸ್ಥಾಪಕಿ ಗೀತಾ, ಕಂದಾಯಾಧಿಕಾರಿ ಮುನಿಯಪ್ಪ, ಪ್ರಭಾರ ಆರೋಗ್ಯ ನಿರೀಕ್ಷಕ ಆನಂದ್ ಇತರೆ ಸಿಬ್ಬಂದಿ ಇದ್ದರು.

Get real time updates directly on you device, subscribe now.

Comments are closed.

error: Content is protected !!