ತ್ವರಿತ ಆಸ್ತಿ ನೋಂದಣಿಗೆ ಕಾವೇರಿ 2.0 ತಂತ್ರಾಂಶ

106

Get real time updates directly on you device, subscribe now.


ತುಮಕೂರು: ಕಾವೇರಿ ತಂತ್ರಾಂಶ 2.0 ಅಳವಡಿಕೆಯಿಂದ ಯಾವುದೇ ಆಸ್ತಿ ಖರೀದಿಸುವುದಕ್ಕಿಂತ ಮೊದಲೇ ಆಸ್ತಿಯ ಮೇಲೆ ಇರುವ ಋಣಭಾರ ಹಾಗೂ ನೋಂದಣಿಯಾಗಿರುವ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದಾಗಿದೆಯಲ್ಲದೆ ಈ ತಂತ್ರಾಂಶದಿಂದ ಆಸ್ತಿ ನೋಂದಣಿಯನ್ನು ತ್ವರಿತಗತಿಯಲ್ಲಿ ಮಾಡಬಹುದಾಗಿದೆ ಎಂದು ನೋಂದಣಿ ಮಹಾ ಪರಿವೀಕ್ಷಕರು ಮತ್ತು ಮುದ್ರಾಂಕಗಳ ಇಲಾಖೆಯ ಆಯುಕ್ತೆ ಬಿ.ಆರ್.ಮಮತ ಹೇಳಿದರು.

ಜಿಲ್ಲಾ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಚೇರಿ ಆವರಣದಲ್ಲಿ ಮಂಗಳವಾರ ಕಾವೇರಿ 2.0 ತಂತ್ರಾಂಶ ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕರು ತಮ್ಮ ಆಸ್ತಿಯ ನೋಂದಣಿಗಾಗಿ ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವ ಸಲುವಾಗಿ ಈ ತಂತ್ರಾಂಶ ಪರಿಚಯಿಸಲಾಗಿದೆ ಎಂದು ತಿಳಿಸಿದರು.

ಈ ತಂತ್ರಾಂಶದ ಮೂಲಕ ಸಾರ್ವಜನಿಕರು ತಮ್ಮ ಆಸ್ತಿಯ ವಿವರ ಮತ್ತು ಮೂಲ ದಾಖಲೆಗಳನ್ನು ಆನ್ಲೈನ್ ಮೂಲಕ ನೇರವಾಗಿ ಉಪ ನೋಂದಣಾಧಿಕಾರಿಗೆ ಕಳುಹಿಸಬಹುದು. ಅಧಿಕಾರಿಗಳು ಪರಿಶೀಲಿಸಿದ ನಂತರ ನೋಂದಣಿಗೆ ತಗಲುವ ವೆಚ್ಚವನ್ನು ಖಜಾನೆಗೆ ಆನ್ಲೈನ್ ಮೂಲಕ ಪಾವತಿಸಿ ನಮಗೆ ಬೇಕಾದ ದಿನಾಂಕ ಮತ್ತು ಸಮಯ ನಿಗದಿಪಡಿಸಿಕೊಳ್ಳಲು ಅವಕಾಶವಿದೆ. ನಿಗದಿಪಡಿಸಿಕೊಂಡ ದಿನದಂದು ಕೆಲವೇ ನಿಮಿಷದಲ್ಲಿ ಭಾವಚಿತ್ರ, ಸಹಿ ಹಾಗೂ ಹೆಬ್ಬೆಟ್ಟಿನ ಗುರುತು ತೆಗೆದುಕೊಂಡು ನೋಂದಣಿ ಮಾಡಿಕೊಡಲಾಗುವುದು ಎಂದರು.

ಕಾವೇರಿ 2.0 ತಂತ್ರಾಂಶವು ಜನಸ್ನೇಹಿಯಾಗಿ ಕೆಲಸ ಮಾಡುತ್ತದೆ. ಸಾರ್ವಜನಿಕರೇ ತಮ್ಮ ಆಸ್ತಿಯ ದಸ್ತಾವೇಜುಗಳನ್ನು ನೇರವಾಗಿ ದಾಖಲಿಸುವುದರಿಂದ ಲೋಪಗಳು ಕಡಿಮೆಯಾಗುತ್ತವೆ. ಈ ತಂತ್ರಾಂಶ ಅಳವಡಿಸುವುದರೊಂದಿಗೆ ಕಚೇರಿಯಲ್ಲಿ ಮೂಲಭೂತ ಸೌಕರ್ಯಗಳಾದ ಪ್ರತ್ಯೇಕ ಕೌಂಟರ್, ಸಾರ್ವಜನಿಕರಿಗೆ ಆಸನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ತಾಯಂದಿರು ಶಿಶುಗಳಿಗೆ ಹಾಲುಣಿಸಲು ಪ್ರತ್ಯೇಕ ಸ್ಥಳ, ಪುರುಷರು ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಹಾಗೂ ಸರ್ಕಾರದ ವಿವಿಧ ಕಾರ್ಯಕ್ರಮ ವೀಕ್ಷಿಸಲು ಟಿವಿ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಹೊಸ ತಂತ್ರಾಂಶದ ಮೂಲಕ ಎಲ್ಲಾ ಉಪ ನೋಂದಣಾಧಿಕಾರಿಗಳು ಜನಸ್ನೇಹಿಯಾಗಿ ಕೆಲಸ ಮಾಡಲು ಸಜ್ಜಾಗಿದ್ದಾರೆ ಎಂದರಲ್ಲದೆ, ರಾಜ್ಯದಲ್ಲಿ ಇಲ್ಲಿಯವರೆಗೂ 155 ಕಚೇರಿಯಲ್ಲಿ ಕಾವೇರಿ 2.0 ತಂತ್ರಾಂಶ ಅಳವಡಿಸಲಾಗಿದೆ. ಉಳಿದ 97 ಕಚೇರಿಗಳಲ್ಲಿ ಈ ತಂತ್ರಾಂಶವನ್ನು ಶೀಘ್ರವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಹಾಯಕ ನೋಂದಣಿ ಮಹಾ ಪರಿವೀಕ್ಷಕ ಹೆಚ್.ಎಲ್.ಪ್ರಭಾಕರ್, ಚಿಕ್ಕಬಳ್ಳಾಪುರ ಜಿಲ್ಲಾ ನೋಂದಣಾಧಿಕಾರಿ ಎಂ.ಶ್ರೀದೇವಿ, ಜಿಲ್ಲಾ ನೋಂದಣಾಧಿಕಾರಿ ಶಶಿಕಲಾ.ಬಿ.ಎನ್, ಉಪ ನೋಂದಣಾಧಿಕಾರಿಗಳಾದ ಎಸ್.ಪಿ.ರಂಗರಾಜು, ಧನಲಕ್ಷ್ಮೀ, ಸೌಮ್ಯ ಸಂಪತ್, ಎಂ.ರಾಜಶೇಖರ್ ಹಾಗೂ ಸಿಬ್ಬಂದಿ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!