ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ

ಅಧಿಕಾರಿಗಳಿಗೆ ಜಿಪಂ ಸಿಇಒ ಡಾ.ವಿದ್ಯಾಕುಮಾರಿ ಸೂಚನೆ

113

Get real time updates directly on you device, subscribe now.


ತುಮಕೂರು: ಜಿಲ್ಲೆಯಲ್ಲಿ 2023ರ ಜನವರಿ ಮಾಹೆಯಿಂದ ಏಪ್ರಿಲ್ ಮಾಹೆಯ ವರೆಗೆ 21 ಚಿಕುನ್ಗುನ್ಯಾ ಹಾಗೂ 30 ಡೆಂಗ್ಯೂ ಪ್ರಕರಣ ವರದಿಯಾಗಿದ್ದು, ಸಾಂಕ್ರಾಮಿಕ ರೋಗ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಆಯಾ ಇಲಾಖೆಗಳಿಗೆ ವಹಿಸಿರುವ ಜವಾಬ್ದಾರಿ ನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಚೇರಿಯ ಸಹಯೋಗದಲ್ಲಿ ವಿಶ್ವ ಮಲೇರಿಯಾ ದಿನ ಹಾಗೂ ರಾಷ್ಟ್ರೀಯ ಡೆಂಗ್ಯೂ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಅಂತರ ಇಲಾಖೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಲೇರಿಯಾ ಪ್ರಕರಣ ನಿವಾರಣಾ ಹಂತ ತಲುಪಿದೆ ಎಂದು ತಿಳಿಸಿದರಲ್ಲದೆ ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆ, ಅನಾರೋಗ್ಯಕರ ಪರಿಸರ, ಅನಿಯಂತ್ರಿತ ಹಾಗೂ ಯೋಜಿತವಲ್ಲದ ನಗರೀಕರಣ, ಅಸುರಕ್ಷಿತ ನೀರು ಶೇಖರಣಾ ವಿಧಾನ, ಅಸಮರ್ಪಕ ನೀರು ಪೂರೈಕೆ, ಜನಾಂಗದ ವಲಸೆ, ಪ್ರಕೃತಿ ವಿಕೋಪ, ಅಜ್ಞಾನ ಮತ್ತು ತಿಳುವಳಿಕೆ ಕೊರತೆಯಿಂದ ಡೆಂಗ್ಯೂ ಪ್ರಕರಣ ವರದಿಯಾಗುತ್ತಿದ್ದು, ಡೆಂಗ್ಯು ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದರು.

ಡೆಂಗ್ಯೂ ಪ್ರಕರಣ ಉಲ್ಬಣವಾಗದಂತೆ ಆರೋಗ್ಯ, ಆಶಾ ಕಾರ್ಯಕರ್ತೆಯರಿಂದ ಎಲ್ಲಾ ಗ್ರಾಮಗಳಲ್ಲಿ ಮತ್ತು ಪಟ್ಟಣ ಪ್ರದೇಶಗಳಲ್ಲಿ 15 ದಿನಗಳಿಗೊಮ್ಮೆ ನಿಯಮಿತ ಲಾರ್ವಾ ಸಮೀಕ್ಷೆ ಮಾಡಿಸಬೇಕು. ಸಂಶಯಾಸ್ಪದ ಪ್ರಕರಣಗಳಿಂದ ರಕ್ತದ ಮಾದರಿ ಸಂಗ್ರಹಿಸಿ ಜಿಲ್ಲಾ ಸೆಂಟಿನಲ್ ಪ್ರಯೋಗಾಲಯಗಳಲ್ಲಿ ಉಚಿತ ಪರೀಕ್ಷೆ ಮಾಡಿಸಬೇಕು. ರೋಗ ಪೀಡಿತ ಪ್ರದೇಶಗಳಲ್ಲಿ ತಾತ್ಕಾಲಿಕ ಚಿಕಿತ್ಸಾಲಯ, ಸಂಚಾರಿ ಚಿಕಿತ್ಸಾಲಯ ತೆರೆದು ನುರಿತ ವೈದ್ಯಕೀಯ ಸೌಲಭ್ಯ ಒದಗಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ ಅವರಿಗೆ ಸೂಚನೆ ನೀಡಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಸಾರ್ವಜನಿಕ ನಳ ಹಾಗೂ ಕೊಳವೆ ಬಾವಿಗಳ ಬಳಿ ನೀರು ನಿಲ್ಲದೆ ಸರಾಗವಾಗಿ ಹರಿದು ಮುಂದೆ ಹೋಗುವಂತೆ ಸೂಕ್ತ ವ್ಯವಸ್ಥೆ ಮಾಡುವುದರ ಜೊತೆಗೆ ಈಗಾಗಲೇ ಚರಂಡಿಗಳಲ್ಲಿರುವ ಹೂಳನ್ನು ತೆಗೆದು ನೀರು ಹರಿಯುವಂತೆ ನೋಡಿಕೊಳ್ಳಬೇಕು. ನೀರು ಸರಬರಾಜು ಮಾಡುವ ಪೈಪುಗಳಲ್ಲಿ ಸೋರಿಕೆಯಾಗದಂತೆ ಕ್ರಮ ವಹಿಸಬೇಕು. ನೀರು ಸಂಗ್ರಹಿಸುವ ನೀರಿನ ಟ್ಯಾಂಕ್ ಗಳನ್ನು ಭದ್ರವಾದ ಮುಚ್ಚಳದಿಂದ ಮುಚ್ಚಿರಬೇಕು. ಗ್ರಾಮದ ನೈರ್ಮಲ್ಯತೆ ಹಾಗೂ ಗ್ರಾಮದಲ್ಲಿರಬಹುದಾದ ಸಾಂಕ್ರಾಮಿಕ ರೋಗಗಳ ಬಗ್ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದರು.

ಶಾಲೆಯ ಮಕ್ಕಳಲ್ಲಿ ಯಾವುದೇ ಜ್ವರ ಪ್ರಕರಣ ಕಂಡು ಬಂದರೆ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು ಹಾಗೂ ಸಾಮೂಹಿಕ ಜ್ವರ ಪ್ರಕರಣ ಕಂಡು ಬಂದಲ್ಲಿ ತಪ್ಪದೆ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಿಳಿಸಬೇಕು. ಶಾಲೆಗಳಲ್ಲಿ ಆರೋಗ್ಯ ಶಿಕ್ಷಣ ಕಾರ್ಯಕ್ರಮ ನಿರಂತರವಾಗಿ ಹಮ್ಮಿಕೊಳ್ಳುವಂತೆ ಯೋಜನೆ ರೂಪಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಮಾರ್ಗದರ್ಶನ ನೀಡಿದರು.
ನಗರಾಭಿವೃದ್ಧಿ ಇಲಾಖೆ ಮತ್ತು ಮಹಾ ನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಉದ್ಯಾನವನಗಳಲ್ಲಿ ಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿಯುಳ್ಳ ಫಲಕ ಹಾಕುವುದರೊಂದಿಗೆ ಸ್ವಚ್ಛತೆ ಕಾಪಾಡಬೇಕು. ಕಾಲಕಾಲಕ್ಕೆ ಧೂಮೀಕರಣ ಕಾರ್ಯ ಕೈಗೊಳ್ಳಬೇಕು. ಸೊಳ್ಳೆ ಉತ್ಪತ್ತಿ ತಾಣಗಳ ನಿಯಂತ್ರಣ ಮಾಡುವ ಸಲುವಾಗಿ ಮಹಾನಗರ ಪಾಲಿಕೆಗಳಲ್ಲಿ ಈಗಾಗಲೇ ರೂಢಿಯಲ್ಲಿರುವ ನಾಗರಿಕ ಹಾಗೂ ಕಟ್ಟಡ ಬೈಲಾಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಕೃಷಿ ಉತ್ಪನ್ನ ಮಾರುಕಟ್ಟೆ, ಸಿನಿಮಾ ಮಂದಿರ, ತರಕಾರಿ ಮಾರುಕಟ್ಟೆ, ಗುಬ್ಬಿ ವೀರಣ್ಣ ಕಲಾಕ್ಷೇತ್ರ ಮತ್ತು ಇತರೆ ಸಾರ್ವಜನಿಕ ಪ್ರದೇಶಗಳಲ್ಲಿ ಸಮರ್ಪಕ ಘನತ್ಯಾಜ್ಯ ವಸ್ತುಗಳ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮಹಾನಗರ ಪಾಲಿಕೆಗೆ ಸೂಚಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಮಾಜ ಕಲ್ಯಾಣ, ಕಾರ್ಮಿಕ, ಮೀನುಗಾರಿಕೆ ಹಾಗೂ ನೀರಾವರಿ ಇಲಾಖೆಗೆ ಸೂಚಿಸಿದ ಜವಾಬ್ದಾರಿ ಪಾಲಿಸಿ ಸಾಂಕ್ರಾಮಿಕ ರೋಗ ತಡೆಗಟ್ಟುವುದಕ್ಕೆ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಟಿ.ಎನ್.ಪುರುಷೋತ್ತಮ್ ಮಾತನಾಡಿ 2023ರ ಜನವರಿಯಿಂದ ಏಪ್ರಿಲ್ ವರೆಗೆ ಡೆಂಗ್ಯು ಪ್ರಕರಣಗಳಿಗೆ ಸಂಬಂಧಿಸಿದಂತೆ 726 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಇದರಲ್ಲಿ 30 ಪ್ರಕರಣಗಳು ದೃಢಪಟ್ಟಿವೆ. ಚಿಕುನ್ ಗುನ್ಯಾಗೆ ಸಂಬಂಧಿಸಿದಂತೆ 464 ಮಾದರಿಗಳನ್ನು ಪರೀಕ್ಷೆಗೊಳಪಡಿಸಿದ್ದು, ಇದರಲ್ಲಿ 21 ಪ್ರಕರಣ ದೃಢಪಟ್ಟಿವೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಿದ್ದಗಂಗಾ ಮೆಡಿಕಲ್ ಕಾಲೇಜಿನ ಡಾ.ರೇಣುಶ್ರೀ, ಶ್ರೀದೇವಿ ಮೆಡಿಕಲ್ ಕಾಲೇಜಿನ ಡಾ.ರವೀಶ್, ಆರೋಗ್ಯ ಇಲಾಖೆ ಅಧಿಕಾರಿಗಳು, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಹಾಗೂ ತಾಲ್ಲೂಕು ವೈದ್ಯಾಧಿಕಾರಿಗಳು ಇದ್ದರು.

Get real time updates directly on you device, subscribe now.

Comments are closed.

error: Content is protected !!