ತುಮಕೂರು: ಇಂದಿನ ಪೈಪೋಟಿ ಯುಗದಲ್ಲಿ ಒಂದು ಸಂಗೀತ ಸಂಸ್ಥೆಯನ್ನು ಮೂವತ್ತು ವರ್ಷಗಳ ಕಾಲ ನಡೆಸುವುದು ನಿಜಕ್ಕೂ ಸವಾಲಿನ ಕೆಲಸ, ಇದನ್ನು ಸಾಧಿಸಿರುವ ಶ್ರೀರಾಘವೇಂದ್ರ ಸಂಗೀತ ಸಭಾದ ಕಾರ್ಯ ನಿಜಕ್ಕ ಶ್ಲಾಘನೀಯ ಎಂದು ಖ್ಯಾತ ಕೊಳಲು ವಾದಕ, ಪೀಟಲು ಚೌಡಯ್ಯ ಅವರ ಮರಿಮೊಮ್ಮಗ ವಿದ್ವಾನ್ ಎ.ಚಂದನ್ ಕುಮಾರ್ ತಿಳಿಸಿದದರು.
ನಗರದ ಶಂಕರ ಮಠದಲ್ಲಿರುವ ಶ್ರೀಅಭಿನವ ವಿದ್ಯಾತೀರ್ಥ ಸಭಾಂಗಣದಲ್ಲಿ ಶ್ರೀರಾಘವೇಂದ್ರ ಸಂಗೀತ ಸಭಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ರಾಘವೇಂದ್ರ ಸಂಗೀತ ಸಭಾದ ಮೂವತ್ತನೇ ವರ್ಷದ ವಾರ್ಷಿಕೋತ್ಸವ ಹಾಗೂ ಹಿರಿಯ ಸಂಗೀತ ವಿದ್ವಾಂಸದ ಸಮ್ಮೇಳನ, ಯುವ ಕಲಾವಿದರಿಂದ ಸಂಗೀತ ಮತ್ತು ನೃತ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸಂಗೀತವೆಂಬುದು ಎಲ್ಲರನ್ನು ತನ್ನತ್ತ ಸೆಳೆಯುವ ಗುಣ ಹೊಂದಿದೆ. ಹಾಗಾಗಿ ಸಂಗೀತಕ್ಕೆ ಮನ ಸೋಲದ ಮನುಜರೇ ಇಲ್ಲ. ಇಂತಹ ಕಾರ್ಯಕ್ರಮ ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುವಂತಾಗಲಿ ಎಂದರು.
ಶ್ರೀವಾಸವಿ ದೇವಾಲಯದ ಅಧ್ಯಕ್ಷ ಆರ್.ಎಲ್.ರಮೇಶ್ಬಾಬು ಮಾತನಾಡಿ, ನಮ್ಮ ಸನಾತನ ಧರ್ಮ, ಸಂಸ್ಕೃತಿ, ಪರಂಪರೆ ಉಳಿದು, ಬೆಳೆದುಕೊಂಡು ಬಂದಿದ್ದರೆ ಅದಕ್ಕೆ ಸಂಗೀತ, ನೃತ್ಯ ಕಲೆಗಳೇ ಕಾರಣ, ಸಂಗೀತ ವಿದೂಷಿ ಲಲಿತ ಚಲಂ ತನ್ನ ಜೀವವನ್ನೇ ಸಂಗೀತಕ್ಕೆ ಮುಡಿಪಾಗಿಟ್ಟಿದ್ದಾರೆ. ಭಾರತೀಯ ಸಂಸ್ಕೃತಿಯ ಮೇಲೆ ಅನೇಕ ಪರಕೀಯರ ದಾಳಿಯ ನಡುವೆಯೂ ಉಳಿದಿದೆ ಎಂದರೆ ಅದಕ್ಕೆ ಇಂತಹ ಕಲೆಗಳೇ ಕಾರಣ, ಇಂತಹ ಕಾರ್ಯಕ್ರಮಗಳು ಹಿರಿಯ ಕಲಾವಿದರಿಗೆ ವೇದಿಕೆ ಒದಗಿಸುವುದರ ಜೊತೆಗೆ ಕಿರಿಯರಿಗೆ ಕಲಿಯುವ ಆಸಕ್ತಿ ಬೆಳೆಸುವಂತಹ ವೇದಿಕೆಯಾಗಿ ರೂಪಗೊಳ್ಳಬೇಕಿದೆ. ಹಣಕ್ಕೆ ಹೆಚ್ಚಿನ ಮಹತ್ವ ದೊರೆಯುತ್ತಿರುವ ಈ ಕಾಲದಲ್ಲಿ ಇಂತಹ ಕಲೆ ಮತ್ತು ಸಂಸ್ಕೃತಿ ಉಳಿಯಬೇಕಾದರೆ ಇಂತಹ ಕಲೆಗಳು ಜಾತಿ, ಧರ್ಮಗಳನ್ನು ಮೀರಿ ಎಲ್ಲಾ ವರ್ಗದವರನ್ನು ಒಳ್ಳಗೊಳ್ಳವಂತಾಗಬೇಕು. ಗ್ರಾಮೀಣ ಭಾಗಗಳಲ್ಲಿಯೂ ಕಾರ್ಯಕ್ರಮಗಳು ನಡೆದರೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀರಾಘವೇಂದ್ರ ಸಂಗೀತ ಸಭಾದ ಅಧ್ಯಕ್ಷರಾದ ವಿದೂಷಿ ಲಲಿತಾ ಚಲಂ ಮಾತನಾಡಿ, ನಮ್ಮ ಸಂಸ್ಥೆ ಕಳೆದ ಮೂವತ್ತು ವರ್ಷಗಳಿಂದ ಎಲ್ಲಾ ವರ್ಗದ ಕಲಾವಿದರನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ಹಿರಿಯ ಕಲಾವಿದರಿಂದ ಕಿರಿಯರವರೆಗೆ ತಮ್ಮ ಕಲೆಯನ್ನು ಪ್ರೋತ್ಸಾಹ ಬಂದಿದೆ. ಕನಕದಾಸರು, ಪುರಂದರದಾಸರು, ತ್ಯಾಗರಾಜರ ಆರಾಧನಾ ಕಾರ್ಯಕ್ರಮಗಳ ಜೊತೆಗೆ ವಿವಿಧ ಸಂಗೀತ ಕಾರ್ಯಕ್ರಮ ನೀಡುತ್ತಾ ಬಂದಿದೆ. ವಿವಿಧ ಸಂಘ, ಸಂಸ್ಥೆಗಳು ನಮಗೆ ಸಹಕಾರ ನೀಡುತ್ತಾ ಬಂದಿದೆ. ಇಂದಿನಿಂದ ಐದು ದಿನಗಳ ಕಾಲ ನಾಡಿನ ಪ್ರಖ್ಯಾತ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಕಲಾಸಕ್ತರು ಆಗಮಿಸಿ ಪ್ರೋತ್ಸಾಹಿಸುವಂತೆ ಕೋರಿದರು.
ಶ್ರೀರಾಘವೇಂದ್ರ ಸಂಗೀತ ಸಭಾದ ಕಾರ್ಯದರ್ಶಿ ಆರ್.ವೆಂಕಟೇಶ ಮೂರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಶ್ರೀಶಂಕರ ಸೇವಾ ಸಮಿತಿಯ ಕಾರ್ಯದರ್ಶಿ ಟಿ.ಎಸ್.ಮಂಜುನಾಥ್, ಶ್ರೀರಾಘವೇಂದ್ರ ಸಂಗೀತ ಸಭಾದ ಗೌರವಾಧ್ಯಕ್ಷರಾದ ವಿದೂಷಿ ರುಕ್ಮಣಿ, ಗೋಪಾಲ್, ಸಂಘಟನಾ ಕಾರ್ಯದರ್ಶಿ ಆರ್.ರಾಜೀವಲೋಚನ, ಮೃದಂಗ ವಿದ್ವಾನ್ ಅಂಜನಕುಮಾರ್, ಪುರುಷೋತ್ತಮ್, ಮಂಜುಳ ರಾಘವೇಂದ್ರ, ಕನ್ಯಾಕುಮಾರಿ, ಗೌರವ ಸದಸ್ಯರಾದ ಸುಧಾ ಪ್ರಸಾದ್ ಮತ್ತಿತರರು ಇದ್ದರು.
Comments are closed.