ಕೆಎನ್ಆರ್ ಗೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡಿ

82

Get real time updates directly on you device, subscribe now.


ತುಮಕೂರು: ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಅವರಿಗೆ ಈ ಬಾರಿಯ ಸಚಿವ ಸಂಪುಟದಲ್ಲಿ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡಬೇಕೆಂದು ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಆಗ್ರಹ ಪೂರ್ವಕ ಮನವಿಯನ್ನು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಗೆ ಮಾಡುವುದಾಗಿ ದಸಂಸ ಮುಖಂಡ ಕುಂದೂರು ತಿಮ್ಮಯ್ಯ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಕೆ.ಎನ್.ರಾಜಣ್ಣ ಸಾಮಾನ್ಯ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ ಎಂದರೆ ಅವರು ಎಷ್ಟು ಜನಾನುರಾಗಿ ಎಂಬುದು ಎಲ್ಲರಿಗೂ ಅರ್ಥವಾಗುತ್ತದೆ. ಅಲ್ಲದೆ ಶೋಷಿತರು, ದಲಿತರ ಪರವಾಗಿ ಕೆಲಸ ಮಾಡುವ ಜಿಲ್ಲೆಯ ರಾಜಕಾರಣಿ ಎಂದರೆ ಕೆಎನ್ಆರ್, ಹಾಗಾಗಿ ಅವರನ್ನು ಸಚಿವರನ್ನಾಗಿ ಮಾಡಬೇಕೆಂಬುದು ನಮ್ಮೆಲ್ಲರ ಒತ್ತಾಯವಾಗಿದೆ ಎಂದರು.

ಮಧುಗಿರಿ ಕ್ಷೇತ್ರದ ಶಾಸಕರಾಗಿರುವ ಕೆ.ಎನ್.ರಾಜಣ್ಣ ನೇರ ಮತ್ತು ನಿಷ್ಠೂರ ರಾಜಕಾರಣಿ, ಎಲ್ಲಾ ವರ್ಗದ ಜನರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಗುಣ ಅವರಲ್ಲಿದೆ. ಅಲ್ಲದೆ ಸಹಕಾರಿ ಕ್ಷೇತ್ರದಲ್ಲಿ ಆಪಾರ ಅನುಭವ ಹೊಂದಿರುವ ಇವರನ್ನು ಮಂತ್ರಿ ಮಾಡುವುದರಿಂದ ಸರಕಾರಕ್ಕೆ ಅನುಕೂಲವಾಗುವುದರ ಜೊತೆಗೆ ಜಿಲ್ಲೆಯ ಅಭಿವೃದ್ಧಿಗೂ ಪೂರಕವಾಗಲಿದೆ ಎಂದು ಕಂದೂರು ತಿಮ್ಮಯ್ಯ ತಿಳಿಸಿದರು.

ದಲಿತರು, ಶೋಷಿತರ ಪರವಾಗಿ ನಿಲ್ಲುವ ರಾಜಕಾರಣಿ ಕೆ.ಎನ್.ರಾಜಣ್ಣ ಅವರನ್ನು ಮಂತ್ರಿ ಮಾಡಬೇಕೆಂದು ಇಂದು ಒತ್ತಾಯಿಸಲಾಗುತ್ತಿದೆ. ಅಗತ್ಯ ಬಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಬಳಿ ಸಹ ನಿಯೋಗ ಹೋಗಿ ಅವರಿಗೂ ಮನವರಿಕೆ ಮಾಡಿಕೊಡಲು ಸಿದ್ಧರಿದ್ದೇವೆ. ಕೆಎನ್ಆರ್ ಮಂತ್ರಿ ಮಾಡುವುದರಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಪಕ್ಷಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಹಾಗಾಗಿ ಹೈಕಮಾಂಡ್ ಈ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಬೇಕೆಂದರು.

ವೈದ್ಯ ಡಾ.ಬಸವರಾಜು ಮಾತನಾಡಿ, ದಲಿತರು, ಕಾರ್ಮಿಕರು, ಬಡವರ ಪರವಾಗಿ ಧ್ವನಿ ಎತ್ತುವ ಜನಪ್ರತಿನಿಧಿಗಳಲ್ಲಿ ಕೆಎನ್ಆರ್ ಕೂಡ ಒಬ್ಬರು, ವಿಧಾನಪರಿಷತ್ ಸದಸ್ಯರಾಗಿ, ಶಾಸಕರಾಗಿ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. ಎಂತಹ ಸಂದರ್ಭದಲ್ಲಿಯೂ ದಲಿತರು, ಅಲ್ಪಸಂಖ್ಯಾತರ ಪರ ಧ್ವನಿ ಎತ್ತುವ ಎದೆಗಾರಿಕೆ ಕೆ.ಎನ್.ರಾಜಣ್ಣ ಅವರಲ್ಲಿದೆ. ಹಾಗಾಗಿ ಅವರನ್ನು ಸಚಿವರನ್ನಾಗಿ ಮಾಡಿ ಜಿಲ್ಲೆಯ ಅಭಿವೃದ್ಧಿಗೆ ಇಂಬು ನೀಡುವಂತೆ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾ.ಅರುಂಧತಿ, ವಿರೂಪಾಕ್ಷ ಡ್ಯಾಗೇರಹಳ್ಳಿ, ಮುಸ್ತಾಪ, ಚೇಳೂರು ಶಿವನಂಜಪ್ಪ, ಸುಬ್ಬರಾಯಪ್ಪ, ರೈತ ಸಂಘದ ಎನ್.ರಾಮಚಂದ್ರ ಸೇರಿದಂತೆ ಹಲವರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!