ತುಮಕೂರು: ಜಿಲ್ಲೆಯಲ್ಲಿ ಮುಂದಿನ ನಾಲ್ಕೈದು ದಿನಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದ್ದು, ಜಿಲ್ಲೆಯ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ಹಾಜರಿದ್ದು, ಮಳೆಯಿಂದ ಉಂಟಾಗಬಹುದಾದ ತುರ್ತು ಪರಿಸ್ಥಿತಿಯನ್ನು ತ್ವರಿತವಾಗಿ ನಿಭಾಯಿಸಲು ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚನೆ ನೀಡಿದ್ದಾರೆ.
ಜಿಲ್ಲೆಯಲ್ಲಿರುವ ಜಲಕಾಯಗಳ ಸುಸ್ಥಿತಿಯ ಬಗ್ಗೆ ಸ್ಥಳ ಪರಿಶೀಲಿಸಿ ಸೂಕ್ಷ್ಮ ಜಲಕಾಯಗಳ ಬಗ್ಗೆ ವೈಯಕ್ತಿಕ ಗಮನ ಹರಿಸಿ ಯಾವುದೇ ರೀತಿಯಲ್ಲಿ ಹಾನಿ, ತೊಂದರೆಯುಂಟಾಗದಂತೆ ಪೂರ್ವ ಸಿದ್ಧತೆಗೆ ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ಕೆರೆಗಳು ಒಂದರಿಂದ ಒಂದಕ್ಕೆ ಜೋಡಣೆಯಾಗಿರುವುದರಿಂದ ಮೇಲ್ಭಾಗದ ಕೆರೆಗಳು ಹಾನಿಯಾದಲ್ಲಿ ಕೆಳಭಾಗದ ಕೆರೆಗಳು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇರುವುದರಿಂದ ಎಲ್ಲಾ ರೀತಿಯ ಮಾನದಂಡ ಗಣನೆಗೆ ತೆಗೆದುಕೊಂಡು ಸಮರ್ಪಕವಾದ ಪೂರ್ವ ಸಿದ್ಧತೆ ಕೈಗೊಳ್ಳಬೇಕೆಂದು ಜಲಕಾಯಗಳ ತಾಂತ್ರಿಕ ನಿರ್ವಹಣೆ ಮಾಡುವ ಹೇಮಾವತಿ, ಸಣ್ಣ ನೀರಾವರಿ ಮತ್ತು ಪಂಚಾಯತ್ ರಾಜ್ ಇಲಾಖೆಗಳಿಗೆ ಸೂಚನೆ ನೀಡಿದ್ದಾರೆ.
ಮಳೆಯಿಂದ ಸಂಭವಿಸಬಹುದಾದ ರಸ್ತೆ ಮತ್ತು ಸೇತುವೆಗಳ ಹಾನಿ ತಡೆಗಟ್ಟುವ ನಿಟ್ಟಿನಲ್ಲಿ ಪ್ರಸ್ತುತ ಹಾನಿಯಾಗಿರುವ ರಸ್ತೆ ಮತ್ತು ಸೇತುವೆಗಳನ್ನು ತಕ್ಷಣವೇ ದುರಸ್ತಿಪಡಿಸಿ ಸಾರ್ವಜನಿಕರು ಮತ್ತು ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಕ್ರಮ ವಹಿಸಬೇಕು. ರಸ್ತೆಯ ಮೇಲೆ ನೀರಿನ ಹರಿವಿನ ಮಟ್ಟ ಹೆಚ್ಚಾದಲ್ಲಿ ಅಥವಾ ಮರಗಳು ಬಿದ್ದು ರಸ್ತೆ ಸಂಪರ್ಕ ಕಡಿತವಾದಲ್ಲಿ ತುರ್ತು ತೆರವು ಕಾರ್ಯ ಕೈಗೊಳ್ಳಲು ಅಥವಾ ಸಾರ್ವಜನಿಕರ ಸಂಚಾರಕ್ಕೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲು ಲೋಕೋಪಯೋಗಿ ಮತ್ತು ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗಕ್ಕೆ ನಿರ್ದೇಶನ ನೀಡಿದ್ದಾರೆ.
ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯಲ್ಲಿ ಹಠಾತ್ ಪ್ರವಾಹ ಪ್ರದೇಶಗಳನ್ನು ಗುರುತಿಸಿ ನೀರು ನಿಲ್ಲದಂತೆ ಸರಾಗವಾಗಿ ಹರಿದು ಹೋಗುವಂತೆ ಕಾಲುವೆ, ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಹವಾಮಾನ ಮುನ್ಸೂಚನೆಯಂತೆ ಅಧಿಕ ಮಳೆಯಾಗುವ ಸಂಭವವಿದ್ದಲ್ಲಿ ಸದರಿ ಪ್ರದೇಶದ ಜನರಿಗೆ ಮುನ್ನೆಚ್ಚರಿಕೆ ನೀಡಲು ಕ್ರಮ ವಹಿಸಬೇಕು. ಅಗತ್ಯಕ್ಕನುಗುಣವಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಿ ತುರ್ತು ಪರಿಸ್ಥಿತಿಯನ್ನು ಸಮರ್ಪಕ ರೀತಿಯಲ್ಲಿ ನಿಭಾಯಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಗರಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳಿಗೆ ಸೂಚನೆ ನೀಡಿದ್ದಾರೆ.
ಕಳೆದ ವರ್ಷ ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಧಿಕ ಮಳೆಯಿಂದ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆ ಉಂಟಾದ ಕಾರಣ ಸದರಿ ಪರಿಸ್ಥಿತಿ ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಪಾಲಿಕೆ ಆಯುಕ್ತರಿಗೆ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ ದುಸ್ಥಿತಿಯಲ್ಲಿರುವ ಹಾಗೂ ಬೀಳುವ ಹಂತದಲ್ಲಿರುವ ಶಾಲೆ, ಅಂಗನವಾಡಿ ಕೊಠಡಿಗಳಲ್ಲಿ ಮಕ್ಕಳನ್ನು ಕೂರಿಸದೆ ಆಯಾ ಶಾಲಾ ವ್ಯಾಪ್ತಿಯಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳತಕ್ಕದ್ದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳಿಗೆ ನಿರ್ದೇಶನ ನೀಡಿದ್ದಾರೆ.
ಮಳೆಯಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಲ್ಲಿ ವಿಳಂಬ ಮಾಡದೆ 24 ಗಂಟೆಯೊಳಗಾಗಿ ವಿದ್ಯುತ್ ಸಂಪರ್ಕ ನೀಡಲು ಕ್ರಮ ವಹಿಸಬೇಕು. ರಾಜ್ಯದಲ್ಲಿ ಈಗಾಗಲೇ 3 ಮಂದಿ ವಿದ್ಯುತ್ ಸ್ಪರ್ಶದಿಂದ ಮೃತರಾಗಿದ್ದು, ಈ ಬಗ್ಗೆ ವಿಶೇಷ ಗಮನ ಹರಿಸಿ ತುರ್ತು ಪರಿಸ್ಥಿತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬೆಸ್ಕಾಂ ಇಲಾಖೆಗೆ ತಾಕೀತು ಮಾಡಿದ್ದಾರೆ.
ಜನ- ಜಾನುವಾರುಗಳ ಪ್ರಾಣ ಹಾನಿ, ಬೆಳೆಹಾನಿ, ಮನೆ ಹಾನಿ ಮತ್ತು ಗೃಹೋಪಯೋಗಿ ವಸ್ತುಗಳ ಹಾನಿಯ ಪ್ರಕರಣಗಳಲ್ಲಿ ಸಂಬಂಧಪಟ್ಟ ಇಲಾಖೆಗಳು ಸಮನ್ವಯ ಸಾಧಿಸಿ ಎನ್ ಡಿಆರ್ಎಫ್ ಮಾರ್ಗಸೂಚಿಯಂತೆ ತುರ್ತಾಗಿ 24 ಗಂಟೆಯೊಳಗೆ ಪರಿಹಾರ ನೀಡಲು ಕ್ರಮ ವಹಿಸತಕ್ಕದ್ದು ಎಂದು ಜಿಲ್ಲೆಯ ಎಲ್ಲಾ ತಾಲ್ಲೂಕು ಮಟ್ಟದ ಆರೋಗ್ಯ, ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಪಾಲನೆ, ಪಂಚಾಯತ್ ರಾಜ್ ಇಲಾಖಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ನಿರ್ದೇಶನ ನೀಡಿದ್ದಾರೆ.
ಮುಂಗಾರು ಹಂಗಾಮಿಗೆ ಅವಶ್ಯಕವಾದ ಬಿತ್ತನೆ ಬೀಜ, ರಸಗೊಬ್ಬರ, ಕ್ರೀಟನಾಶಕ ಇತ್ಯಾದಿಗಳನ್ನು ರೈತರಿಗೆ ಸಕಾಲದಲ್ಲಿ ಸರಿಯಾದ ಪ್ರಮಾಣದಲ್ಲಿ ವಿತರಣೆಯಾಗುವಂತೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಬೇಕು. ಪ್ರಸ್ತುತ ಮಳೆಯಿಂದ ಉಂಟಾಗಬಹುದಾದ ಹಾನಿಯನ್ನು ಕಂದಾಯ ಇಲಾಖೆ, ಸಿಬ್ಬಂದಿಯೊಂದಿಗೆ ಜಂಟಿ ಸಮೀಕ್ಷೆ ಕಾರ್ಯವನ್ನು ತುರ್ತಾಗಿ ಕೈಗೊಂಡು ನಿಗದಿತ ನಮೂನೆಯಲ್ಲಿ ವರದಿ ಸಲ್ಲಿಸಬೇಕೆಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.
ಮಳೆಯಿಂದ ಉಂಟಾಗಬಹುದಾದ ತುರ್ತು ಪರಿಸ್ಥಿತಿ ನಿಭಾಯಿಸುವಲ್ಲಿ ತಕ್ಷಣದಿಂದಲೇ ಕಾರ್ಯ ಪ್ರವೃತ್ತರಾಗಿ ಇತರೆ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿಕೊಂಡು ಸೂಕ್ತ ಸಿದ್ಧತೆ ಕೈಗೊಳ್ಳಬೇಕು. ತಪ್ಪಿದಲ್ಲಿ ಸಂಬಂಧಪಟ್ಟ ಅಧಿಕಾರಿಯನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
Comments are closed.