ತಿಪಟೂರು ಅಭಿವೃದ್ಧಿಗೆ ಕೈ ಜೋಡಿಸಿ: ಷಡಕ್ಷರಿ

190

Get real time updates directly on you device, subscribe now.


ತಿಪಟೂರು: ತಾಲ್ಲೂಕಿನ ಅಭಿವೃದ್ಧಿಗೆ ನನ್ನಲ್ಲಿ ಸಾಕಷ್ಟು ಕನಸಿನ ಯೋಜನೆ ನನ್ನ ಹಿಂದಿನ ಅವಧಿಯಲ್ಲಿ ಮಾಡಿದ್ದು ಅವುಗಳು ಮುಂದುವರೆಯದೆ ಹಾಗೇಯೇ ಉಳಿದಿದೆ. ಅದನ್ನು ಮುಂದುವರೆಸುತ್ತಾ ತಿಪಟೂರು ತಾಲ್ಲೂಕನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಅಧಿಕಾರಿಗಳು ಸಹಕಾರಿಯಾಗಿ ಕೈ ಜೋಡಿಸಬೇಕು ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ನಮ್ಮ ಮೇಲೆ ವಿಶ್ವಾಸವಿಟ್ಟು ಜನರು ಬಹುಮತ ನೀಡಿದ್ದಾರೆ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ನಿರ್ವಹಿಸಬೇಕು. ಸಾರ್ವಜನಿಕರು ತನ್ನ ಬಳಿ ದೂರು ಬರದಂತೆ ಎಚ್ಚರಿಕೆಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿ, ಜನರ ಹಾಗೂ ರೈತರ ಮನೆ ಬಾಗಿಲಿಗೆ ಆಡಳಿತ ಯಂತ್ರ ಇರುವಂತೆ ಕೆಲಸ ಮಾಡಬೇಕಾಗಿದೆ ಎಂದರು.
ಸರ್ಕಾರದ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಎಂಬ ರೀತಿಯಲ್ಲಿ ಶಾಸಕನ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮ ರೂಪಿಸಿ ಪ್ರತಿ ವಾರ್ಡ್ಗಳಲ್ಲಿಯೂ ಸಾರ್ವಜನಿಕರ ಸಭೆ ಮಾಡಲಾಗುವುದು. ನಗರಸಭೆಯ ವ್ಯಾಪ್ತಿಯಲ್ಲಿರುವ ದೋಬಿ ಘಾಟ್ ಬಳಿ ಸಾಂಸ್ಕೃತಿಕವಾಗಿ, ರಾಜಕೀಯವಾಗಿ, ಮತ್ತಿತ್ತರ ವೇದಿಕೆ ಕಾರ್ಯಕ್ರಮ ನಡೆಸಲು ಸುಂದರ ಗಾಜಿನ ಮನೆ ನಿರ್ಮಾಣ ಮಾಡಲು ಸೂಕ್ತವಾದ ಸ್ಥಳ ಪರಿಶೀಲನೆ ಮಾಡಬೇಕು ಎಂದು ನಗರಸಭೆ ಆಯುಕ್ತರಿಗೆ ತಿಳಿಸಿದರು.

ನಗರದ ಜನತೆಗೆ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಒದಗಿಸುವುದು ನಮ್ಮ ಕರ್ತವ್ಯವಾಗಿದ್ದು, ಈಚನೂರು ಕೆರೆ ಹಾಗೂ ನೋಣವಿನಕೆರೆಯ ಅಂಗಳವು ಈಗಾಗಲೇ ಒತ್ತುವರಿಯಾಗಿದ್ದು, ಕೋರ್ಟ್ ಆದೇಶದಂತೆ ಒತ್ತುವರಿಯಾಗಿರುವ ಕೆರೆಗಳನ್ನು ಉಳಿಸಿಬೇಕಾಗಿರುವುದರಿಂದ ಒತ್ತುವರಿ ರಾಜಕಾಲುವೆಗಳು, ಕೆರೆ, ಕಟ್ಟೆಗಳನ್ನು ಸರ್ವೇ ಮಾಡಿ ಎಷ್ಟೇ ಪ್ರಭಾವಿ ವ್ಯಕ್ತಿಯಾದರು ಬಿಡದ ಕೆರೆಗಳನ್ನು ಉಳಿಸಬೇಕೆಂದು ತಹಶೀಲ್ದಾರ್ ಗೆ ತಿಳಿಸಿದರು.
ಸಣ್ಣ ಪುಟ್ಟ ಕಾಯಿಲೆಗಳಿಗೆ ಪಕ್ಕದ ಹಾಸನ ಆಸ್ವತ್ರೆಗಳಿಗೆ ರೋಗಿಗಳನ್ನು ಕಳುಹಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು ನೀವುಗಳು ಸಹ ವೈದ್ಯಾಧಿಕಾರಿಗಳಾಗಿದ್ದು ನಿಮ್ಮಲ್ಲಿ ಚಿಕಿತ್ಸೆ ಕೊಡಲು ಏಕೆ ಸಾಧ್ಯವಿಲ್ಲ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ರವಿಕುಮಾರ್ ಗೆ ಪ್ರಶ್ನಿಸಿ, ಚಿಕಿತ್ಸೆಗೆ ಸಲಕರಣೆ ಬೇಕಾದರೆ ನಮ್ಮನ್ನು ಕೇಳಿ ಎಂದರು. ಮೊದಲು ಸಾರ್ವಜನಿಕ ಆಸ್ವತ್ರೆಯಲ್ಲಿ ಶೌಚಾಲಯಗಳ ಶುಚಿತ್ವ ಮಾಡಿಸಿ, ಕಾವಲುಗಾರರನ್ನು ನೇಮಿಸಿ ಎಂದರು.

ನಗರಸಭೆಯ ಅಧಿಕಾರಿಯಾಗಿರುವ ನಾಗೇಶ್ ಸರಿಯಾಗಿ ಕೆಲಸ ನಿರ್ವಹಿಸದೆ ಇರುವುದು ತಿಳಿದಿದ್ದು, ನಗರದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮುಖ್ಯ ರಸ್ತೆಗಳು ಸದಾ ಸ್ವಚ್ಛತೆಯಿಂದ ಕೂಡಿರಬೇಕು ಹಾಗೂ ಯುಜಿಡಿಯ ಸಮಸ್ಯೆಯನ್ನು ಹತ್ತು ದಿನಗಳಲ್ಲಿ ಬಗೆಹರಿಸಬೇಕು ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಗಿದ್ದು ಚುನಾವಣೆಯ ಸಂದರ್ಭದಲ್ಲಿ ಗ್ಯಾರಂಟಿಗಳನ್ನು ನಾವು ನೀಡಿದ್ದು ಅದರನ್ವಯ ತಾಲ್ಲೂಕಿನಲ್ಲಿ ಒಟ್ಟು 59,252 ಪಡಿತರ ಚೀಟಿಗಳಿದ್ದು ಬಾಕಿ ಉಳಿದಿರುವ ಹಾಗೂ ಅರ್ಜಿ ಸಲ್ಲಿಸಿರುವ 669 ಫಲಾನುಭವಿಗಳಿಗೆ ಕಾರ್ಡ್ಗಳನ್ನು ಕಾನೂನು ವ್ಯಾಪ್ತಿಯಲ್ಲಿ ಸರಿದೂಗಿಸಿ ವಿತರಣೆ ಮಾಡಿದರೆ 10 ಕೆಜಿ ಅಕ್ಕಿ, ಗೃಹ ಲಕ್ಷ್ಮಿಯಲ್ಲಿ 2000 ರೂಪಾಯಿ, ಗೃಹ ಜ್ಯೋತಿಯಲ್ಲಿ 200 ಯೂನಿಟ್ ವಿದ್ಯುತ್ ನೀಡಲು ಸಾಧ್ಯವಾಗುತ್ತದೆ, ಆದ್ದರಿಂದ ಶೀಘ್ರವಾಗಿ ಕೆಲಸ ಮಾಡಬೇಕು ಎಂದರು.

ಕಲ್ಪವೃಕ್ಷದ ನಾಡಿನಲ್ಲಿ ತೆಂಗಿಗೆ ತಗುಲಿರುವ ರೋಗಗಳ ವೀಕ್ಷಣೆಗೆ ಕಾಸರಗೂಡು, ಅರಸೀಕೆರೆ ಸೇರಿದಂತೆ ವಿವಿಧೆಡೆಗಳಿಂದ ವಿಜ್ಞಾನಿಗಳ ತಂಡ ಆಗಮಿಸಿದ್ದು ತಾಲ್ಲೂಕಿನ ಅನೇಕ ರೈತರ ತೋಟಗಳಿಗೆ ಭೇಟಿ ನೀಡಿದ್ದು ಅದರ ಸಮಗ್ರ ಮಾಹಿತಿ ನೀಡಿದರೆ ಸರ್ಕಾರದ ಜೊತೆ ಚರ್ಚಿಸಿ ಸೂಕ್ತ ಪರಿಹಾರಕ್ಕೆ ಮನವಿ ಮಾಡಲಾಗುವುದು ಎಂದರು.

ಬೆಸ್ಕಾಂ ಇಲಾಖೆಯ ಸಿಬ್ಬಂದಿ ರೈತರು ಹಾಗೂ ಸಾರ್ವಜನಿಕರಿಂದ ಹಣ ಪಡೆದು ಕೆಲಸ ಮಾಡುತ್ತಿರುವ ದೂರು ಸಾರ್ವಜನಿಕರಿಂದ ಕೇಳುತ್ತಿದ್ದು ಇದು ಮುಂದುವರೆಯದಂತೆ ಎಇಇ ಮನೋಹರ್ ಗೆ ತಿಳಿಸಿದರು. ಅರಣ್ಯ ಇಲಾಖೆಯಲ್ಲಿ ಗಿಡಗಳನ್ನು ನೆಡುವುದು ನಿಮ್ಮ ಕೆಲಸವಾಗಿದ್ದು ಅವುಗಳ ಪೋಷಣೆಯು ಸಹ ನಿಮ್ಮದಾಗಿರುತ್ತದೆ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಪವನ್ ಕುಮಾರ್, ನಗರಸಭೆಯ ಆಯುಕ್ತ ವಿಶ್ವೇಶ್ವರ, ಕಾರ್ಯ ನಿರ್ವಹಕಾಧಿಕಾರಿ ಸುದರ್ಶನ್ ಹಾಗೂ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!