ತುರುವೇಕೆರೆ: ಸುಸ್ತಿದಾರರು ಸಕಾಲದಲ್ಲಿ ಸಾಲ ಮರು ಪಾವತಿಸಿ ಪಟ್ಟಣದ ಪ್ರಾಥಮಿಕ ಕೃಷಿ ಭೂ ಅಭಿವೃದ್ಧಿ ಬ್ಯಾಂಕನ್ನು ಉಳಿಸುವಂತೆ ಬ್ಯಾಂಕ್ ಅಧ್ಯಕ್ಷ ಹೆಚ್.ಎಲ್.ಮೂಡಲಗಿರಿ ಗೌಡ ಮನವಿ ಮಾಡಿದರು.
ಪಟ್ಟಣದ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಬ್ಯಾಂಕಿನ ಷೇರನ್ನು ಸುಮಾರು 13,587 ಮಂದಿ ಪಡೆದಿದ್ದಾರೆ. ಈ ಪೈಕಿ 841 ಮಂದಿ ಸಾಲಗಾರ ಸದಸ್ಯರಿದ್ದು ಸುಮಾರು 8 ಕೋಟಿಗೂ ಅಧಿಕ ಹಣ ಮರು ಪಾವತಿಯಾಗದೇ ಬ್ಯಾಂಕ್ ನಲ್ಲಿ ವ್ಯವಹಾರ ನಡೆಸುವುದು ಅತ್ಯಂತ ಕ್ಲಿಷ್ಟಕರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಹೋಬಳಿಗಳಾದ ದಬ್ಬೇಘಟ್ಟದಲ್ಲಿ 157 ಮಂದಿ 2 ಕೋಟಿ ರೂ. ಗೂ ಅಧಿಕ ಮಾಯಸಂದ್ರದಲ್ಲಿ 51 ಮಂದಿ 56 ಲಕ್ಷಕ್ಕೂ ರೂ. ಗೂ ಅಧಿಕ, ದಂಡಿನ ಶಿವರದಲ್ಲಿ 72 ಮಂದಿ ಕೋಟಿ ರೂ. ಗೂ ಅಧಿಕ, ಕಸಬಾದಲ್ಲಿ 143 ಮಂದಿಗೆ 2 ಕೋಟಿ ರೂ. ಅಧಿಕ ಮೊತ್ತದ ಸಾಲ ಮರು ಪಾವತಿಸಬೇಕಿದೆ. ನಮ್ಮ ಬ್ಯಾಂಕಿನಿಂದ 841 ಮಂದಿ ಸಾಲ ಪಡೆದಿದ್ದು, ಕೇವಲ 407 ಮಂದಿ 269 ಲಕ್ಷ ರೂ. ಮಾತ್ರ ಮರು ಪಾವತಿಸಿದ್ದಾರೆ. ಬಾಕಿ 423 ಸಾಲಗಾರರು ಸುಮಾರು 613 ಲಕ್ಷ ರೂ. ಗಳಷ್ಟು ಹಣ ಮರು ಪಾವತಿಸಿದರೆ ಬ್ಯಾಂಕ್ ಸುಸ್ಥಿತಿಯಲ್ಲಿ ವ್ಯವಹರಿಸಬಹುದಾಗಿದೆ ಎಂದು ತಿಳಿಸಿದರು.
ನಮ್ಮ ಬ್ಯಾಂಕಿನಿಂದ ಸಣ್ಣ ಪ್ರಮಾಣದಲ್ಲಿ ಸಾಲ ಪಡೆದವರು ಸಾಲ ಮರು ಪಾವತಿಸುವಲ್ಲಿ ಪ್ರಾಮಾಣಿಕತೆ ತೋರಿದ್ದಾರೆ. ಆದರೆ ಹೆಚ್ಚಿನ ಮೊತ್ತದ ಸಾಲ ಪಡೆದವರು ಸುಸ್ತಿದಾರರಾಗಿದ್ದು ಸಾಲ ಮರು ಪಾವತಿಸಲು ಮುಂದಾಗದಿರುವುದು ಬ್ಯಾಂಕಿನ ಅಭಿವೃದ್ಧಿಗೆ ಹಿನ್ನಡೆಯಾಗಿ ಪರಿಣಮಿಸಿದೆ, ಸಾಲ ವಸೂಲಾತಿ ಮಾಡಲು ಬ್ಯಾಂಕಿನ ಸಿಬ್ಬಂದಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದು, ಸಾಲ ಪಡೆದವರು ಮರು ಪಾವತಿಸಲು ಮುಂದಾಗುವ ಮೂಲಕ ಕೃಷಿಕರ ಪರವಾದ ಸಂಸ್ಥೆಯ ಉಳಿವಿಗೆ ಸಹಕಾರಿಗಳಾಗಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ನಿರ್ದೇಶಕರಾದ ಟಿ.ಎಸ್.ಬೋರೇಗೌಡ, ಉಗ್ರೇಗೌಡ, ವಿ.ಟಿ.ವೆಂಕಟರಾಮಯ್ಯ ಇದ್ದರು.
Comments are closed.