ತುಮಕೂರು: ಮಧುಗಿರಿ ಶಾಸಕ ಹಾಗೂ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಕೆ.ಎನ್.ರಾಜಣ್ಣ ಹಾಗೂ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರಿಗೆ ಪ್ರಸ್ತುತ ಸರಕಾರದಲ್ಲಿ ಮಂತ್ರಿ ಸ್ಥಾನ ನೀಡಬೇಕೆಂದು ಮಾದಿಗ ದಂಡೋರ, ಮಾದಿಗ ಸಂಘಟನೆಗಳ ಒಕ್ಕೂಟ ಹಾಗೂ ಮಹಾಜನ್ ಪರಿವಾರ ಸಂಘಟನೆಗಳ ವತಿಯಿಂದ ಕಾಂಗ್ರೆಸ್ ಪಕ್ಷವನ್ನು ಒತ್ತಾಯಿಸಿದ್ದಾರೆ.
ತುಮಕೂರು ನಗರದ ಅಂಬೇಡ್ಕರ್ ಭವನದಲ್ಲಿ ಸಭೆ ಸೇರಿದ್ದ ಮೂರು ಸಂಘಟನೆಗಳ ಮುಖಂಡರು ದಲಿತ, ಹಿಂದುಳಿದ, ಶೋಷಿತರ ಪರವಾಗಿ ಕೆಲಸ ಮಾಡುತ್ತಿರುವ ಕೆ.ಎನ್.ರಾಜಣ್ಣ ಹಾಗೂ ಸತತವಾಗಿ ಐದನೇ ಬಾರಿಗೆ ಗೆಲುವು ಸಾಧಿಸಿರುವ, ಹಿಂದಿನ ಸಮ್ಮಿಶ್ರ ಸರಕಾರದಲ್ಲಿ ಶಿಕ್ಷಣ ಮಂತ್ರಿಯಾಗಿ ಕೆಲಸ ಮಾಡಿರುವ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಮಾದಿಗ ದಂಡೋರ ರಾಜ್ಯ ವಕ್ತಾರ ಎಂ.ವಿ.ರಾಘವೇಂದ್ರ ಸ್ವಾಮಿ, ಮಾದಿಗ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೋಡಿಯಾಲ ಮಹದೇವ, ಮಹಾಜನ್ ಪರಿವಾರ ಮತ್ತು ಅಲೆಮಾರಿ ಸಂಘದ ಹಂಚಿಹಳ್ಳಿ ರಾಮು ಸ್ವಾಮಿ, ಹಬ್ಬತ್ತನಹಳ್ಳಿ ಶ್ರೀನಿವಾಸ್, ಗೂಳೂರು ರಾಜಣ್ಣ, ಚನ್ನನಕುಂಟೆ ರಂಗನಾಥ ಅವರು ಒತ್ತಾಯಿಸಿದ್ದಾರೆ.
ಮಾದಿಗ ದಂಡೋರ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ವಿ.ರಾಘವೇಂದ್ರ ಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ಹೇಗೆ ಅಹಿಂದ ನಾಯಕರೋ ಅದೇ ರೀತಿ ಮಧುಗಿರಿ ಶಾಸಕರಾಗಿರುವ ಕೆ.ಎನ್.ರಾಜಣ್ಣ ಅಹಿಂದ ನಾಯಕ ರಾಗಿದ್ದಾರೆ. ಎಲ್ಲಾ ಶೋಷಿತ ಸಮುದಾಯಗಳನ್ನು ಒಂದೇ ತೆಕ್ಕೆಗೆ ತೆಗೆದುಕೊಂಡು ಬಂದು ಅವರಿಗೆ ಡಿಸಿಸಿ ಬ್ಯಾಂಕ್ ಇನ್ನಿತರ ಸಂಘ ಸಂಸ್ಥೆಗಳ ಮೂಲಕ ಸಾಲ ಸೌಲಭ್ಯ ಕಲ್ಪಿಸುವ ಕೆಲಸ ಮಾಡಿದ್ದಾರೆ. ಅಲ್ಲದೆ ದಲಿತ, ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳನ್ನು ಗುರುತಿಸಿ ಅವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಬೆಳೆವಣಿಗೆಗೆ ಪೂರಕವಾದ ಎಲ್ಲಾ ಸಹಕಾರ ನೀಡುತ್ತಾ ಬಂದಿದ್ದಾರೆ. ಇಂತಹವರು ಸಚಿವರಾಗಿ ಆಯ್ಕೆಯಾದರೆ ಸಾಮಾಜಿಕ ನ್ಯಾಯ ಎಂಬುದು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಲು ಸಾಧ್ಯವಾಗುತ್ತದೆ. ಹಾಗಾಗಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್, ಅವರ ಹಿರಿತನದ ಜೊತೆಗೆ ಅವರ ರಾಜಕೀಯ ಅನುಭವವನ್ನು ಪಕ್ಷದ ಮತ್ತು ಸರಕಾರದ ಕಾರ್ಯಕ್ರಮಗಳಲ್ಲಿ ಬಳಕೆ ಮಾಡಿಕೊಳ್ಳುವ ಮೂಲಕ ಬಡವರಿಗೆ, ದೀನ ದಲಿತರಿಗೆ, ಶೋಷಿತರಿಗೆ ಹೆಚ್ಚಿನ ಅನುಕೂಲವಾಗುವಂತೆ ಮಾಡಬೇಕೆಂದು ನಮ್ಮ ಒತ್ತಾಯವಾಗಿದೆ ಎಂದರು.
ಮಾದಿಗ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೋಡಿಯಾಲ ಮಹದೇವ್ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಈ ಬಾರಿ ಮಾದಿಗ ಜನಾಂಗ ಕಾಂಗ್ರೆಸ್ ಪಕ್ಷದ ಕೈಹಿಡಿದಿದೆ. ಇದರ ಭಾಗವಾಗಿಯೇ 136 ಸೀಟು ಗೆಲ್ಲಲು ಸಾಧ್ಯವಾಗಿದೆ. ತುಮಕೂರು ಜಿಲ್ಲೆಯಲ್ಲಿ 7 ಸ್ಥಾನ ಪಡೆಯಲು ಮಾದಿಗರು, ಅಲೆಮಾರಿ ಸಮುದಾಯಗಳು ಕಾಂಗ್ರೆಸ್ ಪಕ್ಷದ ಪರ ಮತಚಲಾಯಿಸಿರುವುದೇ ಸಾಕ್ಷಿ, ಇದಕ್ಕೆ ಕಾರಣರು ಅಹಿಂದ ನಾಯಕರಾದ ಕೆ.ಎನ್.ರಾಜಣ್ಣ ಮತ್ತು ಎಸ್.ಆರ್.ಶ್ರೀನಿವಾಸ್, ಹಾಗಾಗಿ ಈ ಇಬ್ಬರು ನಾಯಕರಿಗೆ ಸರಕಾರದಲ್ಲಿ ಮಂತ್ರಿ ಸ್ಥಾನ ನೀಡಬೇಕೆಂಬುದು ನಮ್ಮಗಳ ಒತ್ತಾಯವಾಗಿದೆ. ಕೆ.ಎನ್.ರಾಜಣ್ಣ ಸಹಕಾರಿ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿರುವುದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ ಇದರ ಜೊತೆಗೆ ಸತತವಾಗಿ ಐದನೇ ಬಾರಿ ವಿಧಾನಸಭೆ ಪ್ರವೇಶಿಸಿರುವ ಎಸ್.ಆರ್.ಶ್ರೀನಿವಾಸ್, ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಶಿಕ್ಷಣ ಸಚಿವರಾಗಿ ಯಾವುದೇ ರಾಗ, ದ್ವೇಷಗಳಿಲ್ಲದ ನಿಭಾಯಿಸಿದವರು. ಹಾಗಾಗಿ ಈ ಇಬ್ಬರು ನಾಯಕರಿಗೆ ಸಚಿವ ಸ್ಥಾನ ನೀಡಬೇಕೆಂಬುದು ನಮ್ಮಗಳ ಒತ್ತಾಯವಾಗಿದೆ ಎಂದರು.
ಮಹಾಜನ್ ಪರಿವಾರದ ಅಲೆಮಾರಿ ಸಂಘಟನೆಯ ಮುಖಂಡ ಹಂಚಿಹಳ್ಳಿ ರಾಮುಸ್ವಾಮಿ ಮಾತನಾಡಿ, ಶಾಸಕರಾದ ಕೆ.ಎನ್.ರಾಜಣ್ಣ ಮತ್ತು ಎಸ್.ಆರ್.ಶ್ರೀನಿವಾಸ್ ಅವರು ಶೋಷಿತ ಸಮುದಾಯಗಳ ಏಳಿಗೆಗೆ ಹಗಲಿರುಳು ದುಡಿಯುವ ಜನಪ್ರತಿನಿಧಿಗಳು, ಕೆ.ಎನ್.ರಾಜಣ್ಣ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅಲೆಮಾರಿ ಸಮುದಾಯಗಳಾದ ದಕ್ಕಲಿಗರು, ದರ್ಬೇಸಿಗಳು, ದೊಂಬಿದಾಸರು ಇಂತಹ ಸಮುದಾಯಗಳನ್ನು ಗುರುತಿಸಿ ಅವರಿಗೆ ಆರ್ಥಿಕ ನೆರವು ಒದಗಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡಿದವರು. ಇಂತಹ ವ್ಯಕ್ತಿ ಮಂತ್ರಿಗಳಾದರೆ ಹೆಚ್ಚಿನ ಅನುಕೂಲ ಸಮಾಜಕ್ಕೆ ಆಗಲಿದೆ. ಸಾಮಾಜಿಕ ನ್ಯಾಯದ ಪರಿಪಾಲನೆಯಾಗಲಿದೆ. ಹಾಗಾಗಿ ಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರು ಈರ್ವರನ್ನು ಮಂತ್ರಿಗಳನ್ನಾಗಿ ಮಾಡಿ, ಅವರ ಅನುಭವ ಬಳಕೆ ಮಾಡಿಕೊಳ್ಳಬೇಕೆಂದು ಆಗ್ರಹಿಸಿದರು.
Comments are closed.