ಗುಬ್ಬಿ: ಸಂಸದ ಜಿ.ಎಸ್.ಬಸವರಾಜು, ಬಿಜೆಪಿ ಮುಖಂಡರಾದ ಚಂದ್ರಶೇಖರ ಬಾಬು, ಎನ್.ಸಿ.ಪ್ರಕಾಶ್ ವಿರುದ್ಧವಾಗಿ ಬಿಜೆಪಿ ಪರಾಜಿತ ಅಭ್ಯರ್ಥಿ ಎಸ್.ಡಿ.ದಿಲೀಪ್ ಕುಮಾರ್ ಆಯೋಜನೆ ಮಾಡಿದ್ದ ಆತ್ಮಾವಲೋಕನ ಸಭೆಯಲ್ಲಿ ದಿಲೀಪ್ ಕುಮಾರ್ ಹಾಗೂ ಅವರ ಹಿಂಬಾಲಕರು ಆಡಿದ್ದ ಮಾತುಗಳಿಗೆ ವಿರುದ್ಧವಾಗಿ ಚಂದ್ರಶೇಖರ್ ಬಾಬು ಮಾತನಾಡಿ ಅಭ್ಯರ್ಥಿ ದಿಲೀಪ್ ವಿರುದ್ಧ ಕಿಡಿ ಕಾರಿದ್ದಾರೆ.
ದಿಲೀಪ್ ಕುಮಾರ್ ಹಿಂಬಾಲಕರು ಸರಿಯಾದ ರೀತಿಯಲ್ಲಿ ಹಳೆಯ ಕಾರ್ಯಕರ್ತರನ್ನು ಚುನಾವಣೆ ಸಮಯದಲ್ಲಿ ಗಣನೆಗೆ ತೆಗೆದುಕೊಳ್ಳಲೇ ಇಲ್ಲ. ಹಾಗಾಗಿ ಒಂದಷ್ಟು ಜನ ಬಿಜೆಪಿಯಿಂದ ದೂರ ಉಳಿದಿದ್ದಾರೆ. ಇನ್ನು ಸಂಸದರಾಗಲಿ, ನಾನಾಗಲಿ ಪಕ್ಷಕ್ಕೆ ದ್ರೋಹ ಬಗೆದಿರುವಂತಹ ಒಂದು ಸಾಕ್ಷಿ ನೀಡಲಿ, ಅದನ್ನು ಬಿಟ್ಟು ಅವರ ಹಿಂಬಾಲಕರು ಬಾಯಿಗೆ ಬಂದಂತೆ ಮಾತನಾಡುವುದು ಒಳಿತಲ್ಲ. ನಮ್ಮ ಬಗ್ಗೆ ಮಾತನಾಡುವ ಅಭ್ಯರ್ಥಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಿದ್ದು ಯಾರು, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಎಪಿಎಂಸಿ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿಯೂ ಸಹ ಪಕ್ಷ ವಿರೋಧಿ ಘಟನೆಗಳನ್ನೇ ಮಾಡುತ್ತಾ ಬಂದಿರುವ ದಿಲೀಪ್ ಕುಮಾರ್ ಪಕ್ಷ ಕಟ್ಟಿ ಬೆಳೆಸಿರುವ ನಮ್ಮಗಳ ವಿರುದ್ಧ ಮಾತನಾಡುವುದು ಎಷ್ಟು ಸರಿ ಎಂಬುದನ್ನು ಮೊದಲು ಆತ್ಮವಲೋಕನ ಮಾಡಿಕೊಳ್ಳಲಿ ಎಂದರು.
ಪಕ್ಷಕ್ಕೆ ನಿಮ್ಮ ಕೊಡುಗೆ ಏನಿದೆ ಎಂಬುದನ್ನು ಸ್ಪಷ್ಟಪಡಿಸಿ, ನಾನು ಸಹ ಹಲವು ಚುನಾವಣೆಗಳಲ್ಲಿ ಸೋತಿದ್ದೇನೆ, ಗೆದ್ದಿದ್ದೇನೆ, ಯಾರ ವಿರುದ್ಧವು ಸಹ ಮಾತನಾಡಿಲ್ಲ. ಇದನ್ನು ಇಲ್ಲಿಗೆ ನಿಲ್ಲಿಸುವುದು ಒಳಿತು, ಯಾರದೋ ಮಾತನ್ನು ಕೇಳಿಕೊಂಡು ಚುನಾವಣೆ ನಡೆಸದೆ ಸ್ಥಳೀಯ ಮುಖಂಡರು ಕಾರ್ಯಕರ್ತರನ್ನು ಗಣನೆಗೆ ತೆಗೆದುಕೊಂಡು ಹೋಗಿದ್ದರೆ ಖಂಡಿತವಾಗಿಯೂ ಈ ಬಾರಿ ಬಿಜೆಪಿ ಗೆಲ್ಲುತ್ತಿತ್ತು. ಹಳೆಯ ಬಿಜೆಪಿ ಕಾರ್ಯಕರ್ತರನ್ನು ಬದಿಗಿಟ್ಟು ಕಳೆದ ವಿಧಾನಸಭೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಚುನಾವಣೆ ಮಾಡಿದ್ದ ನಿಮ್ಮ ಹಿಂಬಾಲಕರನ್ನು ಬಳಸಿಕೊಂಡಿದ್ದೆ ಮೊದಲ ತಪ್ಪಾಗಿದೆ. ಮೊದಲಿಗೆ ಪಕ್ಷದ ಕಾರ್ಯಕರ್ತರನ್ನು ಜೊತೆಗಿಟ್ಟುಕೊಂಡು ಹೋಗಬೇಕಾಗಿತ್ತು ಎಂದರು.
ಸಂಸದರು, ಜಿಲ್ಲಾಧ್ಯಕ್ಷರು ಸೇರಿದಂತೆ ಪಕ್ಷದ ಪ್ರತಿಯೊಬ್ಬರು ಸಹ ಈ ಬಾರಿ ಚುನಾವಣೆಯಲ್ಲಿ ಕೆಲಸ ಮಾಡಿದ್ದಾರೆ. ಅದನ್ನು ಬಿಟ್ಟು ಬೇಕಾ ಬಿಟ್ಟಿಯಾಗಿ ಮಾತನಾಡುವುದು, ದ್ವೇಷ ಸಾಧಿಸುವುದು ಮಾಡಿದರೆ ಬೇರೆ ಆಗುತ್ತದೆ, ದುರ್ಯೋಧನನ ತೊಡೆ ಮುರಿಯುತ್ತೇನೆ ಎಂಬ ಪದ ಬಳಸಿರುವುದು ಎಷ್ಟು ಸರಿ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇದು ಹೀಗೆ ಮುಂದುವರಿದರೆ ಯಾರ ತೊಡೆ, ಯಾರು ಮುರಿಯುತ್ತಾರೆ ಎಂಬುದನ್ನು ಕಾರ್ಯಕರ್ತರು ನಿರ್ಧಾರ ಮಾಡುತ್ತಾರೆ ಎಂದು ಗುಡುಗಿದರು.
ಮುಖಂಡ ಎನ್.ಸಿ.ಪ್ರಕಾಶ್ ಮಾತನಾಡಿ ತಾವು ಮಾಡಿಕೊಂಡಿರುವ ತಪ್ಪನ್ನು ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ಯಾವುದೇ ವ್ಯಕ್ತಿಯನ್ನ ಮುಖಂಡರನ್ನ ಕೀಳಾಗಿ ಕಡೆಗಣಿಸುವಂತಹ ಕೆಲಸ ಮಾಡಬಾರದು. ನಿಮ್ಮ ಹಿಂದೆ ಇರುವ ಹಿಂಬಾಲಕರು ಎಷ್ಟು ಚುನಾವಣೆಯಲ್ಲಿ ಮುಂದೆ ಬಂದು ಕೆಲಸ ಮಾಡಿದ್ದಾರೆ ಎಂಬುದನ್ನು ತೋರಿಸಲಿ, ಇದನ್ನು ಇಲ್ಲಿಗೆ ನಿಲ್ಲಿಸದೆ ಹೋದರೆ ಮುಂದಿನ ದಿನಮಾನಗಳಲ್ಲಿ ನನ್ನ ಶಕ್ತಿ ಏನು ಎಂಬುದನ್ನು ತೋರಿಸುತ್ತೇನೆ. ರಾಜಕೀಯ ಮಾಡುವಾಗ ಕಾರ್ಯಕರ್ತರ ಸಲಹೆ ತೆಗೆದುಕೊಂಡು ರಾಜಕೀಯ ಮಾಡಬೇಕು. ಅದನ್ನು ಬಿಟ್ಟು ಗೆದ್ದೆ ಬಿಟ್ಟಿದ್ದೇನೆ ಎಂಬ ಹುಂಬಿನಲ್ಲಿ ಚುನಾವಣೆಯಲ್ಲಿ ಯಾಮಾರಿದ್ದು ಈ ಸೋಲಿಗೆ ಕಾರಣವಾಗಿದೆ. ಅದನ್ನು ಅರ್ಥ ಮಾಡಿಕೊಂಡು ಪಕ್ಷದ ಸಂಘಟನೆ ಮಾಡುವುದು ಬಿಟ್ಟು ತಮ್ಮ ಹಿಂಬಾಲಕರ ಮೂಲಕ ನಮ್ಮನ್ನು ಹೀಯಾಳಿಸಿರುವುದು ನಿಮ್ಮ ವ್ಯಕ್ತಿತ್ವ ತೋರಿಸುತ್ತದೆ.
ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್ ಅವರು ತುಮಕೂರು ನಗರದಲ್ಲಿ ಯಾರಿಗೆ ಚುನಾವಣೆ ಮಾಡಿದ್ದೀರಾ, ಅಲ್ಲಿಗೇನು ಹೇಳಿದ್ದೀರಾ, ಗುಬ್ಬಿಯಲ್ಲಿ ಏನು ಹೇಳುತ್ತಿದ್ದೀರಾ ಎಂಬುದನ್ನು ಮೊದಲು ತಿಳಿದುಕೊಂಡು ಮಾತನಾಡಬೇಕು. ಹಿಂದಿನಿಂದಲೂ ಪಕ್ಷ ಕಟ್ಟಿ ಬೆಳೆಸಿದ್ದೇವೆ. ನನ್ನ ಕೊನೆಯ ಉಸಿರಿನವರೆಗೂ ಪಕ್ಷದಲ್ಲಿ ಇರುತ್ತೇವೆ. ಎಲ್ಲಿಯೂ ಹೋಗುವುದಿಲ್ಲ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಕೃಷ್ಣಮೂರ್ತಿ, ಶಶಿಕುಮಾರ್, ಮುಖಂಡರಾದ ನಂಜೇಗೌಡ, ಹಿತೇಶ್, ನರಸೇಗೌಡ, ಎಚ್.ಎಲ್.ಬಸವರಾಜು, ಪತ್ರೆ ದಿನೇಶ್, ಅರುಣ್ ಇನ್ನಿತರರು ಹಾಜರಿದ್ದರು.
Comments are closed.