ನೀರಾವರಿ ಯೋಜನೆ ಜಾರಿಗೆ ಮುಂದಾಗಿ

ಅಧಿಕಾರಿಗಳಿಗೆ ಗ್ರಾಮಾಂತರ ಶಾಸಕ ಸುರೇಶ್ ಗೌಡ ಸೂಚನೆ

152

Get real time updates directly on you device, subscribe now.


ತುಮಕೂರು: ಮುಂದಿನ ಒಂದು ತಿಂಗಳಲ್ಲಿ ನೆನೆಗುದಿಗೆ ಬಿದ್ದಿರುವ ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳಾದ ಬಹುಗ್ರಾಮ ಕುಡಿಯುವ ನೀರು ಯೋಜನೆ, ಜೆಜೆಎಂ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳು ಸಶಕ್ತವಾಗಿ ಕೆಲಸ ಮಾಡುವಂತೆ ಅಗತ್ಯ ಕ್ರಮವನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ತೆಗೆದುಕೊಳ್ಳದೆ ಹೋದರೆ ಅವರ ವಿರುದ್ಧ ಸರಕಾರಕ್ಕೆ ಪತ್ರ ಬರೆಯುವುದಾಗಿ ಗ್ರಾಮಾಂತರ ಶಾಸಕ ಬಿ.ಸುರೇಶಗೌಡ ಎಚ್ಚರಿಕೆ ನೀಡಿದ್ದಾರೆ.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಗ್ರಾಪಂಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಸಭೆ ನಡೆಸಿದ ಅವರು ನೂರಾರು ಕೋಟಿ ರೂ. ಗಳ ಅನುದಾನದಲ್ಲಿ ನಿರ್ಮಾಣವಾದ ಎಂವಿಎಸ್, ಆರ್ಓ ಪ್ಲಾಂಟ್ ಮತ್ತು ಜೆಜೆಎಂ ಯೋಜನೆಗಳು ಜನರ ಉಪಯೋಗಕ್ಕೆ ಬರುತ್ತಿಲ್ಲ. ಕಳೆದ ಐದು ವರ್ಷದಲ್ಲಿ ಇಡೀ ಯೋಜನೆಯನ್ನೇ ಸಾಯಿಸಲಾಗಿದೆ. ಅಧಿಕಾರಿಗಳು ಒಂದು ತಿಂಗಳಲ್ಲಿ ಇದನ್ನು ಸರಿದಾರಿಗೆ ತರದಿದ್ದರೆ ಅವರ ವಿರುದ್ಧ ಸರಕಾರದ ಮುಖ್ಯ ಕಾರ್ಯದರ್ಶಿಗಳು, ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಇಲಾಖೆಯ ಸಚಿವರಿಗೆ ಪತ್ರ ಬರೆಯಲಾಗುವುದು. ಅಲ್ಲದೆ ತಾಲೂಕು ಕೆಡಿಪಿ, ಜಿಲ್ಲಾ ಕೆಡಿಪಿ ಸಭೆಗಳಲ್ಲದೆ ವಿಧಾನಸಭೆ ಯಲ್ಲಿಯೂ ಇದರ ಬಗ್ಗೆ ಧ್ವನಿ ಎತ್ತಲಾಗುವುದು ಎಂದರು.

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 11 ಬಹುಗ್ರಾಮ ಕುಡಿಯುವ ನೀರಿನ ಯೋಜನೆ, 119 ಶುದ್ಧ ಕುಡಿಯುವ ನೀರಿನ ಘಟಕ ಮಾಡಲಾಗಿದೆ. ಇದರಲ್ಲಿ ಶೇ.50 ರಷ್ಟು ಕೆಲಸ ಮಾಡುತ್ತಿಲ್ಲ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಕೆರೆಗಳಿಗೆ ತುಂಬಿಸಿರುವ ನದಿ ನೀರನ್ನು ಶುದ್ಧೀಕರಣ ಮಾಡಿ ಮನೆಗಳಿಗೆ ಒದಗಿಸಲು ಆಗುತ್ತಿಲ್ಲ ವೆಂದರೆ ಈ ಯೋಜನೆ ಇದ್ದೂ ಏನು ಪ್ರಯೋಜನ ಎಂದು ಪ್ರಶ್ನಿಸಿದ ಅವರು, ಎಂವಿಎಸ್ ಸ್ಕೀಂಗಳ ನಿರ್ವಹಣೆಗೆ ವಾರ್ಷಿಕ 40 ಲಕ್ಷ ದಿಂದ 60 ಲಕ್ಷ ರೂ.ಗಳ ವರೆಗೆ ನಿರ್ವಾಹಣಾ ವೆಚ್ಚ ನೀಡಲಾಗುತ್ತಿದೆ. ನಿರ್ವಹಣೆಯ ಗುತ್ತಿಗೆ ಪಡೆದವರು ಸರಿಯಾಗಿ ಕಾರ್ಯ ನಿರ್ವ ಹಿಸುತ್ತಿಲ್ಲವೆಂದರೆ ಅವರಿಗೆ ನೋಟೀಸ್ ನೀಡಿ ಸ್ಪಂದಿಸದಿದ್ದರೆ ಬ್ಲಾಕ್ ಟೀಸ್ಟ್ ಗೆ ಸೇರಿಸಿ, ಅದನ್ನು ಬಿಟ್ಟು ಗುತ್ತಿಗೆದಾರರ ಮೇಲೆ ಅಧಿಕಾರಿಗಳು, ಗ್ರಾಮ ಪಂಚಾಯಿತಿಗಳ ಮೇಲೆ ಗುತ್ತಿಗೆದಾರರು ನೆಪ ಹೇಳಿ ಯೋಜನೆ ಹಾಳುಗೆಡವಬಾರದು ಎಂದು ಶಾಸಕ ಸುರೇಶಗೌಡ ಎಚ್ಚರಿಕೆ ನೀಡಿದರು.

ಕ್ಷೇತ್ರದಲ್ಲಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಹಾಗೂ ಶುದ್ಧ ಕುಡಿಯುವ ನೀರಿನ ಯೋಜನೆಗಳ ಸ್ಥಿತಿಗತಿ ಅರಿಯಲು ಮೇ 28ರ ಭಾನುವಾರ ಇಡೀ ಕ್ಷೇತ್ರದಾದ್ಯಂತ ಪ್ರವಾಸ ಮಾಡಲಿದ್ದೇನೆ. ಅಂದು ಅಧಿಕಾರಿಗಳು, ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಇದ್ದು ಸಮಸ್ಯೆಗಳ ಪಟ್ಟಿ ನೀಡಿದರೆ ಪರಿಹಾರ ರೂಪಿಸಲು ಸಾಧ್ಯವಾಗುತ್ತದೆ. ಹಾಗಾಗಿ ಮೇ 28ರ ಭಾನುವಾರ ಎಲ್ಲಾ ಆರ್ ಡಬ್ಲ್ಯುಎಸ್ ನ ಎಲ್ಲಾ ಅಧಿಕಾರಿಗಳು ಮತ್ತು ಆಯಾಯ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಆಗಮಿಸುವಂತೆ ಸಲಹೆ ನೀಡಿದರು.

ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರದ ಜಲಜೀವನ್ ಮೀಷನ್ ಅಡಿಯಲ್ಲಿ ಸುಮಾರು 200 ಕೋಟಿ ರೂ. ಗೂ ಹೆಚ್ಚಿನ ಅನುದಾನ ಬಂದಿದೆ. ಅಧಿಕಾರಿಗಳೇ ತಿಳಿಸಿರುವಂತೆ ಸುಮಾರು 384 ಕಾಮಗಾರಿಗಳ ಅಂದಾಜು ಮಾಡಿದ್ದು, ಇವುಗಳಲ್ಲಿ ಮೊದಲ ಹಂತದಲ್ಲಿ 43, ಎರಡನೇ ಹಂತದಲ್ಲಿ 44 ಕಾಮಗಾರಿ ಕೈಗೆತ್ತಿಕೊಂಡಿದ್ದು, ಇವುಗಳಲ್ಲಿ ಬಹುತೇಕ ಪೂರ್ಣಗೊಂಡಿವೆ. ಮೂರನೇ ಹಂತದಲ್ಲಿ 149 ಕಾಮಗಾರಿಗಳಿದ್ದು, ಅವುಗಳನ್ನು ಶೀಘ್ರವೇ ಟೆಂಡರ್ ಕರೆದು ಕಾಮಗಾರಿ ಕೈಗೆತ್ತಿಕೊಳ್ಳಲು ಅಗತ್ಯ ಕ್ರಮ ವಹಿಸುತ್ತೇನೆ. ಜೆಜೆಎಂ ಒಂದು ಅದ್ಭುತ ಯೋಜನೆಯಾಗಿದ್ದು, ಗ್ರಾಮ ಪಂಚಾಯಿತಿ ಸದಸ್ಯರು, ಅಧ್ಯಕ್ಷರು ನಿರ್ಲಕ್ಷ ಮಾಡದೆ, ನಿಮ್ಮ ವ್ಯಾಪ್ತಿಯ ಎಲ್ಲಾ ಮನೆಗಳಿಗೂ ಕುಡಿಯುವ ನೀರು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕ ಬಿ.ಸುರೇಶಗೌಡ ತಿಳಿಸಿದರು.

ಕ್ಷೇತ್ರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಮಾಡುತ್ತಿರುವ ಕೆಆರ್ಐಡಿಎಲ್, ಶ್ರೀಸಾಯಿ ಸಿರಿ ಮತ್ತು ಜಲಸಿರಿ ಏಜೆನ್ಸಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಈ ಬಗ್ಗೆ ಸರಕಾರದ ಗಮನಕ್ಕೆ ತರಲಾಗುವುದು, ಸಮರ್ಪಕವಾಗಿ ನಿರ್ವಹಣೆ ಮಾಡದ ಏಜೆನ್ಸಿ ಟೆಂಡರ್ ರದ್ದು ಪಡಿಸುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಇ ಅವರಿಗೆ ಸೂಚಿಸಿದರು.

ಜೆಜೆಎಂ ಯೋಜನೆಯಲ್ಲಿ ವೇಗವಾಗಿ ನೀರು ಬರುವುದಿಲ್ಲ ಎಂಬ ದೂರು ಇದೆ. ಇದಕ್ಕೆ ಪರಿಹಾರವೆಂಬಂತೆ ಮೈದಾಳ ಗ್ರಾಮದಲ್ಲಿ ಪ್ರಾಯೋಗಿಕವಾಗಿ ಎಲ್ಲಾ ಮನೆಗಳಿಗೂ ತಲಾ ಒಂದು ಟ್ಯಾಂಕ್ ವಿತರಿಸಿ, ನೀರು ಬಂದಾಗ ಅದರಲ್ಲಿ ಸಂಗ್ರಹಿಸಲು ಅವಕಾಶ ಕಲ್ಪಿಸಲಾಗಿದೆ. ಇದೇ ರೀತಿಯಲ್ಲಿಯೇ ಎಲ್ಲಾ ಗ್ರಾಮಗಳಿಗೂ ಮಾಡಿದರೆ ಹೆಚ್ಚು ಅನುಕೂಲವಾಗಬಹುದು ಎಂದು ಶಾಸಕ ಬಿ.ಸುರೇಶಗೌಡ ಸಲಹೆ ನೀಡಿದರು.
ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಇ ರವಿ, ಎಇಇ ಅಶೋಕ, ಬಿಇಓ ಡಾ.ಹನುಮಾ ನಾಯ್ಕ್ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!