ತುಮಕೂರು: ಚುನಾವಣೆಯಲ್ಲಿ ಸೋತಿದ್ದೇನೆ ಎಂದು ಕ್ಷೇತ್ರ ಬಿಡುವ ಪ್ರಶ್ನೆಯೇ ಇಲ್ಲ, ಕಾರ್ಯಕರ್ತರ ಹಿತಕ್ಕಾಗಿ ಹೋರಾಡುತ್ತೇನೆ ಎಂದು ಗ್ರಾಮಾಂತರ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ತಿಳಿಸಿದರು.
ಬಳ್ಳಗೆರೆಯಲ್ಲಿ ನಡೆದ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿ, ಬೆಳ್ಳಾವಿ ಹೋಬಳಿಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರಚಾರ ಮಾಡುವುದರ ಜೊತೆಗೆ ನನ್ನ ವಿರುದ್ಧ ಇಲ್ಲಸಲ್ಲದ ಅಪಪ್ರಚಾರವನ್ನು ಬಿಜೆಪಿಯ ಮುಖಂಡರು ಮಾಡಿದ್ದು ಹಿನ್ನಡೆಯಾಯಿತು ಎಂದರು.
ಬಿಜೆಪಿಯ ಕೇಂದ್ರ ಮತ್ತು ರಾಜ್ಯ ನಾಯಕರು ತಳಮಟ್ಟದಿಂದಲೇ ನನ್ನ ವಿರುದ್ಧ ಅಪಪ್ರಚಾರ ಮಾಡಿದರು, ಎರಡನೇ ಹಂತದ ನಾಯಕರ ಕೊರತೆಯ ಏಕಾಂಗಿಯಾಗಿ ಹೋರಾಟ ಮಾಡಬೇಕಾದ ಸಂದರ್ಭದಲ್ಲಿಯೂ ಕಾರ್ಯಕರ್ತರು ನನ್ನೊಂದಿಗೆ ನಿಂತರು, 85 ಸಾವಿರ ಮತಗಳನ್ನು ನೀಡಿದ್ದಾರೆ ಅವರ ಅಭಿಮಾನಕ್ಕೆ ಋಣಿಯಾಗಿರುತ್ತೇನೆ ಎಂದರು.
ಜೆಡಿಎಸ್ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಎದೆಗುಂದಬೇಕಾದ ಪರಿಸ್ಥಿತಿ ಇಲ್ಲ. ಬಿಜೆಪಿಯ ವಿರುದ್ಧ ಸಕಾರಾತ್ಮಕವಾಗಿ ಹೋರಾಟ ಮಾಡುವ ಮೂಲಕ ಸಮರ್ಥ ವಿರೋಧ ಪಕ್ಷವಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಕಾರ್ಯಕರ್ತರು, ಮುಖಂಡರು ಸಿದ್ಧರಾಗಬೇಕಿದೆ. ಮಾಧ್ಯಮಗಳ ಬಲದೊಂದಿಗೆ ಕಾರ್ಯನಿರ್ವಹಿಸೋಣ ಎಂದು ಕರ ನೀಡಿದರು.
ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಗೆಲ್ಲಿಸಲು ಕಾರ್ಯಕರ್ತರು ಸಿದ್ಧರಾಗಬೇಕಿದೆ. ಅಪಪ್ರಚಾರ ಮತ್ತು ಕುತಂತ್ರಗಳಿಂದ ಸೋಲಿಸಿದವರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮುಂದಾಗಬೇಕಿದೆ ಎಂದರು.
ಜೆಡಿಎಸ್ ಪಕ್ಷದಲ್ಲಿ ಜಾತಿವಾರು ನಾಯಕರ ಕೊರತೆ ಇದ್ದು ಕೂಡಲೇ ಇದರ ಬಗ್ಗೆ ಮೊನ್ನೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಪಕ್ಷ ಸಂಘಟಿಸುವಲ್ಲಿ ಇನ್ನಷ್ಟು ಶಕ್ತಿಯಾಗಬೇಕು. ಮುಂದಿನ ತಾಪಂ, ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ಎದುರಿಸಲು ಸನ್ನದ್ಧರಾಗಿ ಎಂದು ಕಾರ್ಯಕರ್ತರಿಗೆ ಭರವಸೆ ನೀಡಿದರು. ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.
Comments are closed.