ತುಮಕೂರು: ಗ್ರಾಮೀಣ ಜನರು ತಮ್ಮ ಶ್ರಮ ಜೀವನದಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದರೂ ಕೂಡ ಅನಾರೋಗ್ಯಕ್ಕೆ ಒಳಗಾಗುತ್ತಿರುವುದು ಕಳವಳ ಮೂಡಿಸುತ್ತಿರುವ ಸಂಗತಿಯಾಗಿದೆ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಡಾ.ಸಿದ್ಧಲಿಂಗ ಮಹಾ ಸ್ವಾಮೀಜಿ ತಿಳಿಸಿದರು.
ಸಿದ್ಧಗಂಗಾ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ ಕುಟುಂಬ ದತ್ತು ಕಾರ್ಯಕ್ರಮದ ಅಂಗವಾಗಿ ತುಮಕೂರು ಗ್ರಾಮಾಂತರ ತಾಲೂಕಿನ ಮಾರನಾಯಕಪಾಳ್ಯದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಉತ್ತಮ ಆರೋಗ್ಯಕ್ಕೆ ನಿಯಮಿತ ತಪಾಸಣೆಯೇ ಪ್ರಥಮ ಚಿಕಿತ್ಸೆಯಾಗಿದ್ದು ಗ್ರಾಮಸ್ಥರು ತಮ್ಮ ಆರೋಗ್ಯ ಕಾಳಜಿಗೆ ಮುಂದಾಗಬೇಕು ಎಂದರು.
ಪ್ರಾಚಾರ್ಯೆ ಡಾ.ಶಾಲಿನಿ ಮಾತನಾಡಿ, ಕುಟುಂಬ ದತ್ತು ಕಾರ್ಯಕ್ರಮದ ಅಡಿಯಲ್ಲಿ ಗ್ರಾಮಕ್ಕೆ ಪ್ರತಿ ತಿಂಗಳೂ ನಮ್ಮ ವೈದ್ಯಕೀಯ ವಿದ್ಯಾರ್ಥಿಗಳು ಆಗಮಿಸುತ್ತಿದ್ದು ಗ್ರಾಮಸ್ಥರು ಉಪಯೋಗ ಪಡಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಕುಮಾರ್ ಮಾತನಾಡಿ, ಪೂಜ್ಯ ಸಿದ್ಧಲಿಂಗ ಶ್ರೀಗಳ ಆಗಮನವೇ ನಮಗೆ ಆರೋಗ್ಯ ಹೆಚ್ಚಿಸಿದ್ದು, ಅವರ ಮಾರ್ಗದರ್ಶನದಿಂದ ನಡೆಯುತ್ತಿರುವ ಸಿದ್ಧಗಂಗಾ ಆಸ್ಪತ್ರೆ ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸಂಜೀವಿನಿಯಂತಾಗಿದೆ ಎಂದರು.
ಗ್ರಾಮದ 300 ಕ್ಕೂ ಹೆಚ್ಚು ಜನರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು. ಮೆಡಿಕಲ್ ಮೇಲ್ವಿಚಾರಕ ಡಾ.ನಿರಂಜನಮೂರ್ತಿ, ಪಿಆರ್ಓ ಕಾಂತರಾಜು, ಕಮ್ಯುನಿಟಿ ಮೆಡಿಸಿನ್ ವೈದ್ಯರಾದ ಡಾ.ಶ್ವೇತಾ, ಡಾ.ಲತಾ,ಡಾ.ರಾಜೇಶ್, ಪ್ರದೀಪ್, ತಾಪಂ ಸದಸ್ಯ ಕೃಷ್ಣಮೂರ್ತಿ ಮುಂತಾದವರಿದ್ದರು.
Comments are closed.