ತುಮಕೂರು: ಮಕ್ಕಳಿಗೆ ನಮ್ಮ ಸಂಸ್ಕೃತಿ, ಪರಂಪರೆ, ಆಚಾರ, ವಿಚಾರಗಳ ಪರಿಚಯ ಮಾಡಿಕೊಡದಿದ್ದರೆ ಅವರು ಯಾವುದೇ ಡಿಗ್ರಿ ಪಡೆದರು ಅದು ಪರಿಪೂರ್ಣವಲ್ಲ ಎಂದು ರಾಮಕೃಷ್ಣ-ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮಿಜಿ ತಿಳಿಸಿದ್ದಾರೆ.
ನಗರದ ಶ್ರೀರಾಘವೇಂದ್ರ ಸಂಗೀತ ಸಭಾದ 30ನೇ ವಾರ್ಷಿಕೋತ್ಸವ, ಹಿರಿಯ ಸಂಗೀತ ವಿದ್ವಾಂಸರ ಸಮ್ಮೇಳನ ಹಾಗೂ ಕಿರಿಯರಿಂದ ಸಂಗೀತ ನೃತ್ಯೋತ್ಸವ ಕಾರ್ಯಕ್ರಮದ ಮುಕ್ತಾಯ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಕಾಪಿ ಹೊಡೆದು ಪಾಸು ಮಾಡುವ ಎಸ್ಎಸ್ಎಲ್ ಸಿ, ಪಿಯುಸಿ ಫಲಿತಾಂಶದಿಂದ ನಿಮ್ಮ ಮಕ್ಕಳಿಗೆ ಗೌರವ ಬರಲ್ಲ. ನಿಮ್ಮ ಮಕ್ಕಳು ಸಮಾಜದಲ್ಲಿ ತಲೆ ಎತ್ತಿ ನಡೆಯಬೇಕಾದರೆ ಸಂಗೀತ, ನೃತ್ಯದಂತಹ ಸನಾತನ ಸಂಸ್ಕೃತಿ ಕಲಿಸಿ, ಇಲ್ಲಿ ಕಾಪಿ ಹೊಡೆಯಲು ಸಾಧ್ಯವಿಲ್ಲ ಎಂದರು.
ಹಾವು ತನ್ನ ಹಳೆಯ ಶರೀರ ಇಟ್ಟುಕೊಂಡು ಪೊರೆ ಕಳೆಚುವಂತೆ, ಮನುಷ್ಯ ಕೂಡ ತನ್ನ ಸಂಸ್ಕೃತಿ, ಪರಂಪರೆಯಲ್ಲಿ ಇರುವ ಹಳೆಯ ಮೌಲ್ಯಗಳನ್ನು ಇಟ್ಟುಕೊಂಡೆ ಹೊಸ ಅವಿಷ್ಕಾರದತ್ತ ಮುನ್ನೆಡೆದಾಗ ಮಾತ್ರ ಬದಲಾವಣೆ ಸಾಧ್ಯ. ಪ್ರತಿಯೊಂದು ಪ್ರಗತಿಯೂ ಬದಲಾವಣೆಯ ಸಂಕೇತ. ಈ ನಿಟ್ಟಿನಲ್ಲಿ ರಾಘವೇಂದ್ರ ಸಂಗೀತ ಸಭಾ ಕಳೆದ ಮೂವತ್ತು ವರ್ಷಗಳಲ್ಲಿ ಸಾವಿರಾರು ಸಂಗೀತಗಾರರನ್ನು ನಾಡಿಗೆ ಕೊಡುಗೆಯಾಗಿ ನೀಡಿದೆ. ಇದಕ್ಕಾಗಿ ಸಭಾದ ಎಲ್ಲಾ ಪದಾಧಿಕಾರಿಗಳಿಗೂ ಅಭಿನಂದನೆ ಸಲ್ಲಿಸುವುದಾಗಿ ಡಾ.ವೀರೇಶಾನಂದ ಸರಸ್ವತಿ ಸ್ವಾಮೀಜಿ ನುಡಿದರು.
ಹಿರಿಯ ಸಂಗೀತ ವಿದ್ವಾಂಸರ ಸಮ್ಮೇಳನದ ಅಧ್ಯಕ್ಷ ಡಾ.ಟಿ.ಎಸ್.ಸತ್ಯವತಿ ಮಾತನಾಡಿ, ದೈವ ಕೃಪೆ ಎಲ್ಲಿದೆಯೋ ಅಲ್ಲಿ ಮಾನವ ಪ್ರಯತ್ನ ಯಶಸ್ಸು ಕಾಣುತ್ತದೆ ಎಂಬುದಕ್ಕೆ ರಾಘವೇಂದ್ರ ಸಂಗೀತ ಸಭಾನೇ ನಿದರ್ಶನ, ಒಂದು ಸಂಸ್ಥೆಗೆ ಮೂವತ್ತು ವರ್ಷದ ದೊಡ್ಡದು. ಸಜ್ಜರ ಒಳ್ಳೆಯ ಗುಣವೆಂದರೆ ಇನ್ನೊಬ್ಬರಲ್ಲಿರುವ ಸಣ್ಣ ಗುಣ ಗುರುತಿಸಿ, ಅವರನ್ನು ಗೌರವಿಸುವುದು. ಆ ಕೆಲಸವನ್ನು ಇಂದು ರಾಘವೇಂದ್ರ ಸಂಗೀತ ಸಭಾ ನನಗೆ ನಾದಕಲಾ ಜ್ಯೋತಿ ಎಂಬ ಬಿರದು ನೀಡಿ ಸನ್ಮಾನಿಸಿರುವುದು ನನಗೆ ಸಂತೋಷ ಉಂಟು ಮಾಡಿದೆ ಎಂದರು.
ಗಾನಕಲಾ ವಿದೂಷಿ ಡಾ.ಆರ್.ಕೆ.ಪದ್ಮನಾಭನ್ ಮಾತನಾಡಿ, ರಾಘವೇಂದ್ರ ಸಂಗೀತ ಸಭಾ ಮತ್ತು ನನಗೂ ಅವಿನಾಭಾವ ಸಂಬಂಧ, ಅವರು ನಡೆಸುವ ಎಲ್ಲಾ ಕಾರ್ಯಕ್ರಮಗಳಲ್ಲಿ ನಾನಿಲ್ಲದೆ ಹೋದರೂ ಅದನ್ನು ಅಸ್ವಾದಿಸುವ ಕೆಲಸ ಮಾಡುತ್ತೇನೆ. ಒಂದು ಕಾಲದಲ್ಲಿ ವ್ಯಾಪಾರಕ್ಕೆ ಸಿಮೀತವಾಗಿದ್ದ ತುಮಕೂರು ಇಂದು ಶೈಕ್ಷಣಿಕವಾಗಿ, ಸಾಂಸ್ಕೃತಿಕ ನಗರವಾಗಿ ಪರಿವರ್ತನೆಗೊಂಡಿದೆ. ಇದಕ್ಕೆ ಹಲವರ ಪ್ರಯತ್ನವಾಗಿದೆ. ಲಲಿತಾಚಲಂ ಸಂಗೀತಕೋಸ್ಕರ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಒಂದು ಸಂಗೀತ ಸಭಾ ನಡೆಸುವುದು ಅಷ್ಟು ಸುಲಭವಲ್ಲ. ಹಾಗಿದ್ದೂ ಮೂವತ್ತು ವರ್ಷಗಳ ಕಾಲ ನಡೆದಿರುವುದು ಸಂತೋಷದ ವಿಚಾರ.ಡಾ.ಟಿ.ಎಸ್.ಸತ್ಯವತಿ ಅವರಂತಹ ಮೇರು ಕಲಾವಿದರಿಗೆ ಸನ್ಮಾನಿಸುತ್ತಿರುವುದು ಸಂತೋಷದ ವಿಚಾರ ಎಂದರು.
ಶ್ರೀರಾಘವೇಂದ್ರ ಸಂಗೀತ ಸಭಾದ ಅಧ್ಯಕ್ಷೆ ಲಲಿತಾಚಲಂ ಮಾತನಾಡಿ, ಹಿರಿಯ ಅಧ್ಯಕ್ಷರ ಮಾರ್ಗದರ್ಶನದಲ್ಲಿ ಈ ಸಭಾ ಇದುವರೆಗೂ ನಡೆದುಕೊಂಡಿದೆ. ಇಂದಿನ ಕಾರ್ಯಕ್ರಮ ನನ್ನ ಕನಸಿನ ಕೂಸು, 25ನೆ ವರ್ಷದ ವಾರ್ಷಿಕೋತ್ಸವವನ್ನು ಅರ್.ಕೆ.ಪದ್ಮನಾಭನ್ ಅವರ ಮಾರ್ಗದರ್ಶನದಂತೆ ನಡೆಸಲಾಯಿತು. ಹಿರಿಯರಿಗೆ ಗೌರವ, ಕಿರಿಯರಿಗೆ ವೇದಿಕೆ ಇದೆ ನಮ್ಮ ಸಭಾದ ಮುಖ್ಯ ಉದ್ದೇಶ, ಸಭಾದ 25 ಜನರ ಸಮಿತಿ ನನ್ನ ಮಾತಿಗೆ ಗೌರವ ನೀಡಿ ಈ ಕಾರ್ಯಕ್ರಮ ಯಶಸ್ವಿಯಾಗಲು ಸಹಕಾರಿಯಾಗಿದೆ. ಇದಕ್ಕಾಗಿ ಎಲ್ಲರಿಗೂ ಗೌರವ ಸಲ್ಲಿಸುತ್ತಿದ್ದೇನೆ ಎಂದರು.
ಶ್ರೀರಾಘವೇಂದ್ರ ಸಂಗೀತ ಸಭಾದ ಪ್ರಧಾನ ಕಾರ್ಯದರ್ಶಿ ವೆಂಕಟೇಶಮೂರ್ತಿ ಮಾತನಾಡಿ, ಕಳೆದ ಐದು ದಿನಗಳಿಂದ ನಡೆದ ಸಂಗೀತ ಮತ್ತು ನೃತ್ಯ ಕಾರ್ಯಕ್ರಮದಲ್ಲಿ ಜಿಲ್ಲೆಯ 35 ಜನ ಹಿರಿಯ ಕಲಾವಿದರು ಮತ್ತು 15 ಜನ ಹೊರ ಜಿಲ್ಲೆಯ ಕಲಾವಿದರು ಸಂಗೀತ ಕಚೇರಿ ನಡೆಸಿಕೊಟ್ಟಿದ್ದಾರೆ. ಸಭಾವತಿಯಿಂದ 20 ರಾಜ್ಯ ಮಟ್ಟದ ಸಂಗೀತ ಸ್ಪರ್ಧೆಗಳು, 10 ಸಂಗೀತ ಶಿಬಿರಗಳು ನಡೆದಿವೆ. 180 ಜನ ಹೊರ ಜಿಲ್ಲೆಯ ಕಲಾವಿದರಿಗೆ ವೇದಿಕೆ ನೀಡಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಸಂಗೀತ ಕಾರ್ಯಕ್ರಮ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ವರ್ಷಕ್ಕೆ ಎರಡು ಬಾರಿ ಹಿರಿಯ ಕಲಾವಿದರ ಕಚೇರಿ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಸಂಗೀತ ವಿದ್ವಾಂಸರ ಸಮ್ಮೇಳನದ ಅಧ್ಯಕ್ಷರಾದ ಡಾ.ಟಿ.ಎಸ್.ಸತ್ಯವತಿ ಅವರಿಗೆ ನಾದ ಕಲಾ ಜೋತಿ ಎಂಬ ಬಿರುದು ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ರಾಘವೇಂದ್ರ ಸಂಗೀತ ಸಭಾದ ಮಾಜಿ ಅಧ್ಯಕ್ಷರಾದ ರುಕ್ಮಣಿ ಗೋಪಾಲ್, ಶ್ರೀಶಂಕರ ಸೇವಾ ಸಮಿತಿಯ ಅಧ್ಯಕ್ಷ ನಂದಿಕೇಶ್ವರ, ನಿವೃತ್ತ ನ್ಯಾಯಾಧೀಶರಾದ ನಾರಾಯಣ್, ಸಂಸ್ಥಾಪಕ ಅಧ್ಯಕ್ಷರಾದ ಡಾ.ಕೆ.ಎಸ್. ವಾಸುದೇವ ಮೂರ್ತಿ, ವಿಮಲಮೂರ್ತಿ, ಸುಧಾಪ್ರಸಾದ್, ವಿದ್ಯಾಶಂಕರ್, ಶ್ರೀರಾಘವೇಂದ್ರ ಸಂಗೀತ ಸಭಾದ ಕಾರ್ಯದರ್ಶಿ ಆರ್.ವೆಂಕಟೇಶ ಮೂರ್ತಿ, ಶ್ರೀಶಂಕರ ಸೇವಾ ಸಮಿತಿಯ ಕಾರ್ಯದರ್ಶಿ ಟಿ.ಎಸ್.ಮಂಜುನಾಥ್ ಗೋಪಾಲ್, ಸಂಘಟನಾ ಕಾರ್ಯದರ್ಶಿ ಆರ್.ರಾಜೀವಲೋಚನ, ಮೃದಂಗ ವಿದ್ವಾನ್ ಅಂಜನ್ ಕುಮಾರ್, ಪುರುಷೋತ್ತಮ್, ಮಂಜುಳ ರಾಘವೇಂದ್ರ, ಕನ್ಯಾಕುಮಾರಿ, ಗೌರವ ಸದಸ್ಯರಾದ ಸುಧಾ ಪ್ರಸಾದ್ ಸೇರಿದಂತೆ ಹಲವು ಸಂಗೀತ ವಿದ್ವಾಂಸರು ಉಪಸ್ಥಿತರಿದ್ದರು.
Comments are closed.