ಹುಳಿಯಾರು: ಸೋಮವಾರ ಸಂಜೆ ಮಳೆಗಾಳಿಯ ಆರ್ಭಟಕ್ಕೆ ಹುಳಿಯಾರು ಹೋಬಳಿಯ ಕೋರಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅನೇಕ ಹಳ್ಳಿಗಳು ಅಕ್ಷರಶಃ ನಲುಗಿವೆ. ಮನೆಗಳು, ವಿದ್ಯುತ್ ಕಂಬಗಳು ಧರೆಗುರುಳಿದರೆ ತೆಂಗು, ಬಾಳೆ, ಮಾವು ನೆಲ ಕಚ್ಚಿ ಅಪಾರ ನಷ್ಟವನ್ನುಂಟು ಮಾಡಿದೆ.
ಗುಡುಗು, ಮಿಂಚು ಮತ್ತು ಗಾಳಿಯೊಂದಿಗೆ ಮಳೆ ಆರಂಭವಾದರೂ ಸಹ ಮಳೆಗಿಂತ ಗಾಳಿಯ ಹೊಡೆತ ಹೆಚ್ಚಾಗಿ ಕೋರಗೆರೆ ಗ್ರಾಪಂ ವ್ಯಾಪ್ತಿಯ ಭಟ್ಟರಹಳ್ಳಿ, ಮರಾಠಿಪಾಳ್ಯ, ಕೋರಗೆರೆ, ವಡ್ಡರಹಟ್ಟಿ ಗ್ರಾಮಗಳು ತತ್ತರಿಸಿ ಹೋಗುವಷ್ಟು ಹಾನಿ ಮಾಡಿದೆ. ಮನೆಯ ಹೆಂಚು, ಶೀಟ್ ಹಾರಿ ಹೋಗಿ ಮನೆಯೊಳಗೆ ನೀರು ನುಗ್ಗಿ ಬಟ್ಟೆ, ದಿನಸಿ, ದಾಖಲಾತಿಗಳು ಹಾಳಾಗಿವೆ.
ಭಟ್ಟರಹಳ್ಳಿಯ ಸಿದ್ರಾಮಕ್ಕ, ಕೋರಗೆರೆಯ ಚಂದ್ರಕಲಾ, ವಡ್ಡರಹಟ್ಟಿಯ ನೇತ್ರಾವತಿ, ಮರಾಠಿಪಾಳ್ಯದ ಲಲಿತಮ್ಮ, ನಾಗರತ್ನಮ್ಮ, ಮಹೇಶಮ್ಮ, ಲಕ್ಕಮ್ಮ, ಮಹಾಲಕ್ಷ್ಮಿ, ಸುಜಾತಮ್ಮ, ವಸಂತಕುಮಾರಿ, ಮಲ್ಲಮುನಿಸ್ವಾಮಿ, ಕರಿಯಮ್ಮ, ಸಿದ್ರಾಮಕ್ಕ, ಗವಿಯಮ್ಮ, ವಸಂತಮ್ಮ ಅವರಿಗೆ ಸೇರಿದ ಮನೆಗಳಿಗೆ ಭಾಗಶಃ ಹಾನಿಯಾಗಿದೆ.
ಮರಾಠಿಫಾಳ್ಯ ಹನುಮಂತಯ್ಯ, ತಮ್ಮಯ್ಯ, ಮಲಿಯಮ್ಮ, ರೇಣುಕಮ್ಮ, ಸುರೇಶ್, ಸೋಮಶೇಖರಯ್ಯ, ನಾಗರಾಜು, ರವೀಶ್ ಸೇರಿದಂತೆ ಅನೇಕ ರೈತರ ನೂರಾರು ತೆಂಗಿನ ಮರಗಳು ಧರೆಗುರುಳಿವೆ. ಅವರಿಗೆ ಸೇರಿದ ಯಳನಾಡು ಸೋಮಶೇಖರಯ್ಯ 500 ಬಾಳೆ, 10 ತೆಂಗು, 30 ಅಡಿಕೆ ತೋಟ ನೆಲಕಚ್ಚಿದೆ. ಅಲ್ಲದೆ 63 ಕೆವಿ, 25 ಕೆವಿಯ 2 ಟಿಸಿ ಹಾಗೂ ಇಪ್ಪತ್ತಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಬಿದ್ದು ಹತ್ತಾರು ಗ್ರಾಮಗಳು ಕತ್ತಲೆಯಲ್ಲಿ ಮುಳುಗುವಂತೆ ಮಾಡಿದೆ.
ಸ್ಥಳಕ್ಕೆ ತಹಸೀಲ್ದಾರ್ ಡಿ.ಅರ್ಚನಾಭಟ್, ತೋಟಗಾರಿಕೆ ಇಲಾಖೆಯ ಸಂತೋಷ್ ಬೆಸ್ಕಾಂನ ಉಮೇಶ್ ಹಾಗೂ ಉಮೇಶ್ನಾಯ್ಕ ಹಾಗೂ ಪಿಡಿಓ ನವೀನ್, ಭೇಟಿ ನೀಡಿ ಘಟನೆಯ ವಿವರ ಪಡೆದು ನಷ್ಟದ ಮಾಹಿತಿ ಪಡೆದರು.
ನಿಬಂಧನೆಗಳಿಗೆ ಒಳಪಟ್ಟು ಪರಿಹಾರ
ಮನೆಯ ನಷ್ಟದ ಬಗ್ಗೆ ಎಂಜಿನಿಯರ್ ಅವರಿಂದ ವರದಿ ಪಡೆದು ಸರ್ಕಾರದ ನಿಬಂಧನೆಗಳಿಗೆ ಒಳಪಟ್ಟು ಮನೆ ನಷ್ಟಕ್ಕೆ ಪರಿಹಾರವನ್ನು ಕೊಡಲಾಗುವುದು.
ಡಿ.ಅರ್ಚನಾಭಟ್, ತಹಸೀಲ್ದಾರ್, ಚಿಕ್ಕನಾಯಕನಹಳ್ಳಿ
ಲಕ್ಷಾಂತರ ರೂ. ನಷ್ಟವಾಗಿದೆ
ಮಳೆಗಾಳಿಯ ರೌದ್ರನರ್ತನಕ್ಕೆ ಕೋರಗೆರೆ ಗ್ರಾಪಂ ಅನೇಕ ಹಳ್ಳಿಗಳು ತತ್ತರಿಸಿ ಹೋಗಿವೆ. ಅನೇಕ ತೋಟದ ಮನೆಗಳು ಬಿದ್ದಿವೆ. ಮರಗಳಂತೂ ಲೆಕ್ಕವಿಲ್ಲದಷ್ಟು ಬಿದ್ದಿವೆ. ನಷ್ಟದ ಬಗ್ಗೆ ಅಧಿಕಾರಿಗಳಿಗೆ ಇನ್ನೂ ಅಂದಾಜಿಸಲು ಆಗಿಲ್ಲ. ಒಂದೆರಡು ದಿನ ತಡವಾದರೂ ಪರ್ವಾಗಿಲ್ಲ. ನಷ್ಟಕ್ಕೊಳಗಾದ ಎಲ್ಲರಿಗೂ ಪರಿಹಾರ ಕೊಡಬೇಕು.
ದಿನೇಶ್, ಗ್ರಾಪಂ ಸದಸ್ಯ, ಕೋರಗೆರೆ
Comments are closed.