ಘೋಷಿಸಿರುವ 5 ಗ್ಯಾರಂಟಿಯೂ ಜಾರಿಗೊಳಿಸ್ತೇವೆ

ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಈಶ್ವರ್ ಖಂಡ್ರೆ

377

Get real time updates directly on you device, subscribe now.


ತುಮಕೂರು: ಕಾಂಗ್ರೆಸ್ ಪಕ್ಷ ನೀಡಿರುವ 5 ಗ್ಯಾರಂಟಿಗಳ ಜಾರಿಯಲ್ಲಿ ಯಾವುದೇ ಗೊಂದಲವಿಲ್ಲ. ತಕ್ಷಣವೇ ಜಾರಿ ಮಾಡುವಂತೆ ಈಗಾಗಲೇ ಸೂಚನೆ ಕೊಡಲಾಗಿದೆ. ಆದಷ್ಟು ಬೇಗ ಭರವಸೆಗಳನ್ನು ಈಡೇರಿರಲಿವೆ ಎಂದು ನೂತನ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.

ಚುನಾವಣಾ ಪೂರ್ವದಲ್ಲಿ ರಾಜ್ಯದ ಜನತೆಗೆ ಕೊಟ್ಟಿರುವ ಭರವಸೆಯನ್ನು ಈಡೇರಿಸುವುದು ನಮ್ಮ ಕರ್ತವ್ಯ. ಹಾಗಾಗಿ ರಾಜ್ಯದ ಜನತೆಗೆ ಕೊಟ್ಟಿರುವ ಎಲ್ಲ ಭರವಸೆಗಳನ್ನು ಅನುಷ್ಠಾನ ಮಾಡುತ್ತೇವೆ ಎಂದರು.
ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ. ಶ್ರೀಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷ ಶ್ರೀಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಏನೇನು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದೇವೆಯೋ ಅವುಗಳ ಜಾರಿಯಲ್ಲಿ ಯಾವುದೇ ಗೊಂದಲ ಇಲ್ಲ. ಈಗಾಗಲೇ ಮೊದಲ ಸಚಿವ ಸಂಪುಟ ಸಭೆಯಲ್ಲೇ ತಾತ್ವಿಕ ಒಪ್ಪಿಗೆ ನೀಡಿದ್ದೇವೆ. 2ನೇ ಅನೌಪಚಾರಿಕ ಸಚಿವ ಸಂಪುಟ ಸಭೆಯಲ್ಲಿ ಅಧಿಕಾರಿಗಳಿಗೂ ಸೂಚನೆ ಕೊಟ್ಟಿದ್ದೇವೆ. ಜೂ.1 ರಂದು ಮತ್ತೆ ಸಚಿವ ಸಂಪುಟ ಸಭೆ ನಡೆಯಲಿದ್ದು, ರೂಪುರೇಷೆಗಳು ತಯಾರಾಗುತ್ತಿವೆ. ಅದರ ಪ್ರಕಾರ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ಹೇಳಿದರು.

ನಾನು ಅರಣ್ಯ ಮತ್ತು ಪರಿಸರ ಇಲಾಖೆ ಸಚಿವನಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಪ್ರಾಮಾಣಿಕತೆಯಿಂದ ಈ ರಾಜ್ಯದ ಜನರ ಸೇವೆ ಮಾಡುವ ಸಂಕಲ್ಪ ಮಾಡಿದ್ದೇನೆ. ನಿನ್ನೆ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆ ನೀಡಿದ್ದೇನೆ ಎಂದರು.
ಅರಣ್ಯ ಪ್ರದೇಶಗಳಲ್ಲಿ ಅಧಿಕಾರಿಗಳ ಅಥವಾ ವ್ಯವಸ್ಥೆಯ ತಪ್ಪಿನಿಂದಾಗಿ ಬಡ ಜನರು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಕೆಲವೆಡೆ ಜನವಸತಿ ಪ್ರದೇಶಗಳಿವೆ. ಆ ಜಾಗಗಳನ್ನು ಸರ್ವೆ ಮಾಡಿದಾಗ ಅರಣ್ಯ ಪ್ರದೇಶ ಎಂದು ಬರುತ್ತಿದೆ. ಅದನ್ನು ಸರಿಪಡಿಸುವ ಕೆಲಸ ಮಾಡಬೇಕಾಗುತ್ತದೆ ಎಂದರು.

ಒಂದು ವೇಳೆ ಯಾರಾದರೂ ಸ್ವಾರ್ಥಕ್ಕಾಗಿ ಅತಿಕ್ರಮಣ ಮಾಡಿರುವುದು ಕಂಡು ಬಂದರೆ ಅದನ್ನು ತೆರವು ಮಾಡುವ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು.
ನಿಖರವಾಗಿ ಇಷ್ಟೇ ಅರಣ್ಯ ಪ್ರದೇಶದ ಒತ್ತುವರಿಯಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಇಲ್ಲಿಯವರೆಗೂ ಅರಣ್ಯ ಮತ್ತು ಕಂದಾಯ ಇಲಾಖೆಯಿಂದ ಸಮೀಕ್ಷೆಯೂ ನಡೆದಿಲ್ಲ. ಈ ಎರಡೂ ಇಲಾಖೆಗಳಿಂದ ಜಂಟಿ ಸಮೀಕ್ಷೆ ನಡೆಯಬೇಕಾಗಿದೆ ಎಂದರು.
ಮುಂಬರುವ ದಿನಗಳಲ್ಲಿ ನಾವೆಲ್ಲಾ ಸೇರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾಗಾಂಧಿ, ರಾಹುಲ್ ಗಾಂಧಿಯವರ ಮಾರ್ಗದರ್ಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ರಾಜ್ಯವನ್ನು ಪ್ರಗತಿಪಥದತ್ತ ಕೊಂಡೊಯ್ಯುತ್ತೇವೆ ಎಂದು ಅವರು ತಿಳಿಸಿದರು.

ನಮ್ಮ ಸರ್ಕಾರ ಎಲ್ಲ ಅಕ್ರಮಗಳಿಗೆ ತಡೆ ಹಾಕಲಿದೆ. ಅಕ್ರಮಗಳನ್ನು ಮಾಡಿದವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ಸಹ ಹಾಕಲಾಗುವುದು ಎಂದು ಅವರು ಹೇಳಿದರು.
ನಮ್ಮೆಲ್ಲರ ಆರಾಧ್ಯ ದೈವ ನಡೆದಾಡುವ ದೇವರು, ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆ ದರ್ಶನ, ಮಠಾಧ್ಯಕ್ಷರ ಆಶೀರ್ವಾದ ಪಡೆಯಲು ಶ್ರೀಮಠಕ್ಕೆ ಆಗಮಿಸಿದ್ದೇನೆ. ಮಠದ ಮೇಲೆ ಯಾವತ್ತಿಗೂ ನಮ್ಮ ಪರಿವಾರ, ಕುಟುಂಬ ನಮ್ಮ ತಂದೆ ಭೀಮಣ್ಣ ಖಂಡ್ರೆಯವರು ಇದ್ದಾಗಿನಿಂದಲೂ ಶ್ರೀಮಠದ ಮೇಲೆ ಅಪಾರವಾದ ಭಕ್ತಿ, ನಂಬಿಕೆ ಇಟ್ಟುಕೊಂಡಿದ್ದು, ನಾವೆಲ್ಲಾ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಶ್ರಮ ವಹಿಸಿ ಕೆಲಸ ಮಾಡುತ್ತಿದ್ದೇವೆ. ಇಲ್ಲಿಗೆ ಬಂದರೆ ಶಾಂತಿ, ಸಮಾಧಾನ ಸಿಗುತ್ತದೆ ಎಂದರು.
ಪೂಜ್ಯರಿಂದ ಪ್ರೇರಣೆ ಪಡೆದುಕೊಂಡು ಸರ್ವಜನಾಂಗದ ಶಾಂತಿಯ ತೋಟ ಎನ್ನುವಂತಹ ರೀತಿಯಲ್ಲಿ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ಬಸವಣ್ಣನವರ ಸರ್ವರಿಗೂ ಸಮಬಾಳು, ಸಮಪಾಲು ಎಂಬ ರೀತಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷನಾಗಿ 5 ವರ್ಷ ಪಕ್ಷ ಸಂಘಟನೆ ಮಾಡಿದ್ದೇನೆ. ಪಕ್ಷ ಅಧಿಕಾರಕ್ಕೆ ಬಂದಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ಶಶಿಹುಲಿಕುಂಟೆ ಮಠ್, ಮುರುಳೀಧರ ಹಾಲಪ್ಪ, ಸಾಗರನಹಳ್ಳಿ ನಟರಾಜು, ಟಿ.ಬಿ. ಶೇಖರ್, ಚಂದ್ರಮೌಳಿ, ಡಿಎಫ್ಓ ಅನುಪಮ ಹೆಚ್., ಎಸಿಎಫ್ ಗಳಾದ ಬಿ.ಎನ್. ನಾಗರಾಜು, ಮಹೇಶ್ ವಿ. ಮಾಲಗತ್ತಿ, ಸುಬ್ಬರಾವ್, ಆರ್ಎಫ್ಓಗಳಾದ ಪವಿತ್ರ ವಿ., ರವಿ ಸಿ., ಸುರೇಶ್ ಹೆಚ್.ಎಂ., ರಾಕೇಶ್ ಟಿ.ಎಂ., ಕಾಂಗ್ರೆಸ್ ಮುಖಂಡೆ ಗೀತಾ ರುದ್ರೇಶ್, ಟೂಡಾ ಮಾಜಿ ಸದಸ್ಯೆ ಗೀತಮ್ಮ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!