ತಂಬಾಕು ಸೇವನೆಯಿಂದ ಜೀವಕ್ಕೆ ಆಪತ್ತು

ತಂಬಾಕು ತ್ಯಜಿಸಿ ಆರೋಗ್ಯ ಕಾಪಾಡಿಕೊಳ್ಳಿ: ನೂರುನ್ನೀಸ

131

Get real time updates directly on you device, subscribe now.


ತುಮಕೂರು: ತುಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ನಮಗೆ ಆಹಾರ ಬೇಕು ತಂಬಾಕು ಬೇಡ ಎಂಬ ಘೋಷವಾಕ್ಯದೊಂದಿಗೆ ನಗರದಲ್ಲಿ ಜಾಗೃತಿ ಜಾಥಾ ನಡೆಸಲಾಯಿತು.

ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್, ಶಿಕ್ಷಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸಾರ್ವಜನಿಕ ಆರೋಗ್ಯ ರಕ್ಷಣೆ ಉದ್ದೇಶದಿಂದ ನಗರದ ಟೌನ್ ಹಾಲ್ ವೃತ್ತದಿಂದ ಹಮ್ಮಿಕೊಂಡಿದ್ದ ಈ ಜಾಗೃತಿ ಜಾಥಾಗೆ ಕಾನೂನು ಪ್ರಾಧಿಕಾರದ ಪ್ರಧಾನ ಕಾರ್ಯದರ್ಶಿಗಳೂ ಆದ ನ್ಯಾ. ನೂರುನ್ನೀಸ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ನ್ಯಾಯಾಧೀಶರಾದ ನೂರುನ್ನೀಸ, ವಿಶ್ವ ತಂಬಾಕು ದಿನಾಚರಣೆಯಿಂದ ಬಹಳ ವರ್ಷಗಳಿಂದ ಆಚರಿಸುತ್ತಾ ಬಂದಿದ್ದೇವೆ. ತಂಬಾಕು ಸೇವನೆಯಿಂದ ಕ್ಯಾನ್ಸರ್ ನಂತಹ ಮಾರಕ ರೋಗಕ್ಕೆ ತುತ್ತಾಗಿ ತಮ್ಮ ಜೀವನವನ್ನೆ ಹಾಳು ಮಾಡಿಕೊಂಡಿದ್ದಾರೆ. ಹಾಗೆಯೇ ಮಹಿಳೆಯರು ಸಹ ತಂಬಾಕಿನಿಂದ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಜಾಗೃತಿ ಜಾಥಾ ನಡೆಸಲಾಗುತ್ತಿದೆ ಎಂದರು.
ಈ ಕಾರ್ಯಕ್ರಮ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರದೆ ಅಕ್ಕಪಕ್ಕದವರಿಗೆ ಮತ್ತು ನೆರೆಹೊರೆಯ ಮನೆಯವರಿಗೆ ಗುಟ್ಕಾ, ಪಾನ್ ಪರಾಗ್, ಬೀಡಿ, ಸಿಗರೇಟು ಸೇವಿಸುತ್ತಿದ್ದರೆ ಅಂತಹವರಿಗೆ ಇದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸುವ ಕೆಲಸವನ್ನು ಯುವ ಜನರು, ವಿದ್ಯಾರ್ಥಿಗಳು ಮಾಡಬೇಕು ಎಂದು ಸಲಹೆ ನೀಡಿದರು.

ಲಕ್ಷಾಂತರ ಮಂದಿ ತಂಬಾಕು ಸೇವನೆಯಿಂದ ಕ್ಯಾನ್ಸರ್, ಶ್ವಾಸಕೋಶಗಳ ಸಮಸ್ಯೆಗೆ ತುತ್ತಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಪ್ರತಿಯೊಬ್ಬರೂ ತಂಬಾಕು ಸೇವಿಸುವುದನ್ನು ನಿಲ್ಲಿಸಬೇಕು. ಸ್ವಾಸ್ಥ್ಯ ಸಮಾಜ ನಿರ್ಮಿಸಬೇಕು. ಈ ನಿಟ್ಟಿನಲ್ಲಿ ಜಾಥಾ ಕಾರ್ಯಕ್ರಮದ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಡಿಹೆಚ್ಓ ಡಾ.ಮಂಜುನಾಥ್ ಮಾತನಾಡಿ, ಪ್ರತಿ ವರ್ಷ 5 ಲಕ್ಷ ಜನ ತಂಬಾಕು ಸೇವನೆಯಿಂದ ಸಾವನ್ನಪ್ಪುತ್ತಿದ್ದಾರೆ. ಯಾವುದೇ ಒಬ್ಬ ವ್ಯಕ್ತಿ ಮರಣ ಹೊಂದಿದಾಗ ಮನೆಯ ವ್ಯವಸ್ಥೆಯೇ ಅಲ್ಲೋಲ ಕಲ್ಲೋಲವಾಗುತ್ತದೆ. ತುಂಬಾ ಕಷ್ಟಕರ ವಾತಾವರಣ ನಿರ್ಮಾಣವಾಗುತ್ತದೆ. ಹಾಗಾಗಿ ಜನರಲ್ಲಿ ಈ ಕುರಿತು ಅರಿವು ಮೂಡಿಸುವ ಸಲುವಾಗಿ ಮೇ 31 ರಂದು ವಿಶ್ವ ತಂಬಾಕು ರಹಿತ ದಿನ ಆಚರಿಸಲಾಗುತ್ತಿದೆ ಎಂದರು.
ತಂಬಾಕು ಅಂದರೆ ಸಿಗರೇಟು ಒಂದೇ ಅಲ್ಲ, ಗುಟ್ಕಾ, ಪಾನ್ ಮಸಾಲ ಇವುಗಳನ್ನು ತಿನ್ನುವುದರಿಂದ ಬಾಯಿ ಕ್ಯಾನ್ಸರ್, ನಾಲಿಗೆ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್ ಬರುತ್ತಿದೆ. ಆದ್ದರಿಂದ ತಂಬಾಕಿನಿಂದ ಉಂಟಾಗುವ ಅನಾಹುತ ತಡೆಗಟ್ಟಲು ಜಿಲ್ಲಾಡಳಿತ ವತಿಯಿಂದ ಅರಿವು ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

ಜಿಲ್ಲಾ ಸರ್ವಲೆನ್ಸ್ ಮತ್ತು ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ.ಮೋಹನ್ ದಾಸ್ ಮಾತನಾಡಿ, ಪ್ರತಿ ವರ್ಷ ಮೇ 31ಕ್ಕೆ ಒಂದೊಂದು ಘೋಷವಾಕ್ಯದೊಂದಿಗೆ ತಂಬಾಕು ರಹಿತ ದಿನ ಆಚರಿಸಲಾಗುತ್ತಿದ್ದು, ಈ ವರ್ಷ ನಮಗೆ ಆಹಾರ ಬೇಕು ತಂಬಾಕು ಬೇಡ ಎಂಬ ಧ್ಯೇಯವಾಕ್ಯದಡಿ ತಂಬಾಕು ರಹಿತ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.

ತಂಬಾಕು ಸೇವನೆಯಿಂದ ದೇಹದ ಮೇಲೆ ಯಾವ ರೀತಿ ದುಷ್ಪರಿಣಾಮ ಆಗುತ್ತದೆ. ಯಾವ ರೀತಿಯ ಮಾರಕ ರೋಗಗಳಿಗೆ ತುತ್ತಾಗುತ್ತೇವೆ ಎಂಬುದನ್ನು ಈ ಜಾಥಾ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.
ತಂಬಾಕು ಬೆಳೆಯುವುದರಿಂದ ನೆಲ ಜಲ, ನೀರು ಗಾಳಿ, ಪರಿಸರಕ್ಕೆ ಹಾನಿಯಾಗುತ್ತಿದೆ. ತಂಬಾಕು ಬೆಳೆದ ನಂತರ ಅದರ ಎಲೆಗಳನ್ನು ಕಾರ್ಖಾನೆಗಳಿಗೆ ಸಾಗಿಸುವುದರಿಂದ ಹಿಡಿದು ಕಾರ್ಖಾನೆಯಲ್ಲಿ ತಯಾರಾಗುವ ತಂಬಾಕು ಉತ್ಪನ್ನದಿಂದಾಗಿ ಜಲ, ವಾಯು ಮಾಲಿನ್ಯ ಉಂಟಾಗುತ್ತದೆ. ಹೀಗಾಗಿ ಇದರಿಂದ ಸಂಪೂರ್ಣ ಪರಿಸರ ಮಾಲಿನ್ಯವಾಗುತ್ತಿದೆ ಎಂದರು.

ತಂಬಾಕು ಸೇವನೆ ಮಾಡಿದ ಸಂದರ್ಭದಲ್ಲಿ ವಾಯು ಮಾಲಿನ್ಯ, ಪರಿಸರಕ್ಕೆ ಹಾನಿಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಂಬಾಕು ತ್ಯಜಿಸುವಂತಹ ಕಾರ್ಯ ಮಾಡಬೇಕು, ಈ ಮೂಲಕ ಪರಿಸರ ಉಳಿಸಿ ಬೆಳೆಸಬೇಕು ಎಂದು ಹೇಳಿದರು.
ಹದಿಹರೆಯದವರು ದುಶ್ಚಟಗಳಿಗೆ ಬಲಿಯಾಗುವುದು ಸರ್ವೆ ಸಾಮಾನ್ಯವಾಗಿದೆ. ಆದ್ದರಿಂದ ಪೋಷಕರು ಮಕ್ಕಳಿಗೆ ತಂಬಾಕು ಸಿಗದಂತೆ ನೋಡಿಕೊಳ್ಳುವ ಜೊತೆಗೆ ತಂಬಾಕಿನಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆಯೂ ಜಾಗೃತಿ ಮೂಡಿಸಬೇಕು ಎಂದು ಸಲಹೆ ಮಾಡಿದರು.

ಟೌನ್ಹಾಲ್ ವೃತ್ತದಿಂದ ಹೊರಟ ಜಾಥಾವು ಟೌನ್ ಹಾಲ್ ಮುಖೇನ ಅಶೋಕ ರಸ್ತೆಯಲ್ಲಿ ಸಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಗೆ ತಲುಪಿತು.
ಜಾಥಾದಲ್ಲಿ ಡಿಡಿಪಿಐ ಸಿ.ನಂಜಯ್ಯ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಲಕ್ಷ್ಮೀಕಾಂತ್, ಜಿಲ್ಲಾ ಸಲಹೆಗಾರರಾದ ಎಂ.ಆರ್. ರವಿಪ್ರಕಾಶ್, ಹರೀಶ್, ರುಕ್ಮಿಣಿ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!