ಕುಣಿಗಲ್: ಕಾಂಗ್ರೆಸ್ ಪಕ್ಷ ಚುನಾವಣೆ ಮುನ್ನ ನೀಡಿದ ಗ್ಯಾರಂಟಿ ಈಡೇರಿಸುತ್ತದೆ. ಈ ಬಗ್ಗೆ ಯಾರಿಗೂ ಅನುಮಾನ ಬೇಡ, ಐದು ಗ್ಯಾರಂಟಿ ನೀಡುವ ನಿಟ್ಟಿನಲ್ಲಿ ನೂತನ ಸರ್ಕಾರ ರೂಪುರೇಷೆ ಸಿದ್ಧಪಡಿಸುತ್ತಿದ್ದು ಶೀಘ್ರದಲ್ಲೆ ಈಡೇರಿಸುತ್ತೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.
ಬುಧವಾರ ತಾಲೂಕಿನ ಗಿರಿಗೌಡನಪಾಳ್ಯ ಗ್ರಾಮದ ಸಮೀಪ ಎರಡನೇ ಬಾರಿಗೆ ಶಾಸಕ ಡಾ.ರಂಗನಾಥ್ ಅವರನ್ನು ಅಧಿಕ ಮತಗಳಿಂದ ಗೆಲ್ಲಿಸಿದ ಹಿನ್ನೆಲೆಯಲ್ಲಿ ಮತದಾರರಿಗೆ ಅಭಿನಂದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯದ ಜನತೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮೇಲೆ ನಂಬಿಕೆ ಇಟ್ಟು ಪಕ್ಷ ಬೆಂಬಲಿಸಿ ಅಧಿಕಾರ ನೀಡಿದ್ದಾರೆ. ಸರ್ಕಾರ ರಚನೆಯಾಗಿದೆ, ಗ್ಯಾರಂಟಿ ಅನುಷ್ಠಾನಕ್ಕೆ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಈ ಹೊತ್ತಿನಲ್ಲೆ ಮಾಧ್ಯಮಗಳು ಸೇರಿದಂತೆ ವಿರೋಧ ಪಕ್ಷಗಳು ಕಂಡಿಷನ್ ಹಾಕುತ್ತದೆ ಅದು ಇದೂ ಊಹಾಪೋಹ ಸೃಷ್ಟಿ ಸರಿಯಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ 15 ಲಕ್ಷ ಕೊಡ್ತೇವೆ ಎಂದು ಸುಳ್ಳು ಹೇಳಿಲ್ಲ, ಹೀಗಾಗಿ ಇರುವ ಐದು ಗ್ಯಾರಂಟಿಯನ್ನು ಖಚಿತವಾಗಿ ನೀಡಲಾಗುತ್ತದೆ. ಪಕ್ಷದ ಮೇಲೆ ನಂಬಿಕೆ ಇಟ್ಟು ಶಾಸಕ ಡಾ.ರಂಗನಾಥ್ ಅವರನ್ನು ಎರಡನೇ ಬಾರಿಗೆ ಆಯ್ಕೆ ಮಾಡಿದ್ದು ನಮ್ಮ ಮೇಲೆ ಋಣ ಹೆಚ್ಚಾಗಿದೆ ಎಂದರು.
ತುಮಕೂರು ಜಿಲ್ಲೆಯಲ್ಲೆ ಕುಣಿಗಲ್ ತಾಲೂಕನ್ನು ಮಾದರಿ ತಾಲೂಕನ್ನಾಗಿಸುವ ನಿಟ್ಟಿನಲ್ಲಿ ಈಗಾಗಲೆ ಯೋಜನೆ ಆರಂಇಸಿದ್ದೇವೆ. ಪಟ್ಟಣದಲ್ಲಿ ಇನ್ನೊಂದು ತಿಂಗಳಲ್ಲಿ ನೂರು ಹಾಸಿಗೆಯ ತಾಯಿ ಮಗು ಆಸ್ಪತ್ರೆಯನ್ನು ಇನ್ಫೋಸಿಸ್ ಸಹಯೋಗದಲ್ಲಿ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು. ತಾಲೂಕಿನಲ್ಲಿ ಮೂರು ಸಾವಿರ ಟಿಸಿ ಅಳವಡಿಕೆಗೆ ಸೂಚನೆ ನೀಡಲಾಗಿದೆ. ಕಂದಾಯ ಇಲಾಖೆ, ಗ್ರಾಪಂಗಳಲ್ಲಿನ ಸಮಸ್ಯೆ ಬಗೆಹರಿಸಲು ಸೂಚನೆ ನೀಡಲಾಗಿದೆ. ಮುಂದಿನ ಜಿಪಂ, ತಾಪಂ ಚುನಾವಣೆಗೆ ಕಾರ್ಯಕರ್ತರು, ಮುಖಂಡರು ಸಿದ್ಧರಾಗಬೇಕು, ಕಾಂಗ್ರೆಸ್ ಗ್ಯಾರಂಟಿ ಯೋಜನೆ ಜನತೆಗೆ ತಲುಪಿಸಬೇಕು. ಬೇರೆ ಪಕ್ಷದವರು ಲಾಭಪಡೆಯದಂತೆ ಶ್ರಮಿಸಬೇಕು. ಪಕ್ಷಕ್ಕೆ ದ್ರೋಹ ಮಾಡಿದವರನ್ನು ಕ್ಷಮಿಸುವುದಿಲ್ಲ. ಪಕ್ಷಕ್ಕೆ ಬೆಂಬಲಿಸಿದವರನ್ನು ಮರೆಯುವುದಿಲ್ಲ. ಮುಂದಿನ ದಿನಗಳಲ್ಲಿ ಗ್ರಾಪಂ ಮಟ್ಟದಲ್ಲಿ ಭೇಟಿ ನೀಡಿ ಸಮಸ್ಯೆ ಬಗೆಹರಿಸುತ್ತೇನೆ. ಈ ಸರ್ಕಾರ ಇನ್ನು ಐದು ವರ್ಷ ಸುಭದ್ರವಾಗಿದ್ದು ಜನಪರ ಆಡಳಿತ ನೀಡುತ್ತದೆ ಎಂದರು.
ಶಾಸಕಡಾ.ರಂಗನಾಥ್ ಮಾತನಾಡಿ, ತಾಲೂಕಿನಲ್ಲಿ 40 ವರ್ಷಗಳ ರಾಜಕಾರಣದ ಇತಿಹಾಸವನ್ನು ಈ ಬಾರಿ ಜನತೆ ನಮ್ಮನ್ನು ಬೆಂಬಲಿಸುವ ಮೂಲಕ ಬದಲಿಸಿದ್ದಾರೆ. ಅವರಿಗೆ ಅಭಿನಂದನೆಗಳು, ತಾವು ಕೆಲವೇ ದಿನ ಅಧಿಕಾರದಲ್ಲಿದ್ದಾಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಸಂಸದ ಡಿ.ಕೆ.ಶಿವಕುಮಾರ್ ಮಾರ್ಗದರ್ಶನ ನನಗೆ ಧೈರ್ಯ ತುಂಬಿತ್ತು. ನನ್ನ ಶ್ರೀಮತಿಯವರು ಸಹ ಕ್ಷೇತ್ರದಾ ದ್ಯಂತ ಮಹಿಳಾ ಮತದಾರರಿಗೆ ಪಕ್ಷದ ಸಾಧನೆ ಹೇಳಿದ್ದು ಗೆಲುವಿಗೆ ಪೂರಕವಾಯಿತು. ತಾಲೂಕಿನ ಸಮಗ್ರ ನೀರಾವರಿ ಅನುಷ್ಠಾನದ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಬೆಂಬಲದಿಂದ ಉತ್ತಮ ಕೆಲಸ ಮಾಡಲಾಗುವುದು. ದಿ.ವೈ.ಕೆ.ರಾಮಯ್ಯ, ದಿ.ಹುಚ್ಚಮಾಸ್ತಿಗೌಡರು ಕಂಡ ಕನಸದಾದ ತಾಲೂಕಿನ ಎಲ್ಲಾ ಕೆರೆಗಳಿಗೂ ಹೇಮಾವತಿ ನೀರು ಹರಿಸಲಾಗುವುದು. ಪ್ರಸಕ್ತ ವರ್ಷದಿಂದಲೆ ಚಾಲನೆ ನೀಡಲಾಗುವುದು. ತಾಲೂಕಿನ ಸಮಗ್ರ ಅಭಿವೃದ್ಧಿಗೆ ಜನರ ಸಹಕಾರ ಬೇಕು, ತಾಲೂಕು ಸೇರಿದಂತೆ ರಾಜ್ಯದ ಜನರು ಗ್ಯಾರಂಟಿ ಜಾರಿ ನಿಟ್ಟಿನಲ್ಲಿ ಆತಂಕ ಪಡುವುದು ಬೇಡ. ಹೇಗೆ ಮೋದಿ ದುಡ್ಡು ಎಂಬ ಹೆಸರು ಬಂತೋ ಹಾಗೆಯೇ ಅದಕ್ಕಿಂತ ಹೆಚ್ಚಿನದಾಗಿ ಡಿಕೆ ದುಡ್ಡು ಜನತೆಗೆ ತಲುಪಲಿದ್ದು, ಭಾಗ್ಯಗಳ ಸರದಾರ ಸಿಎಂ ಸಿದ್ದರಾಮಯ್ಯನವರ ಸಹಕಾರದಿಂದ ಎಲ್ಲಾ ಗ್ಯಾರಂಟಿ ಸಿಗುತ್ತವೆ ಎಂದ ಅವರು ಕಾರ್ಯಕರ್ತರು, ಮುಖಂಡರು ತಮ್ಮೊಳಗಿನ ಭಿನ್ನಾಭಿಪ್ರಾಯ ಬದಿಗಿಟ್ಟು ಬಡ ಜನತೆಯೆ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಅವುಗಳ ಬಗೆಹರಿಸುವ ನಿಟ್ಟಿನಲ್ಲಿ ತಮ್ಮನ್ನು ಬಳಸಿಕೊಳ್ಳಬೇಕೆಂದರು.
ತಾಲೂಕಿನ ವಿವಿಧೆಡೆಯಿಂದ ಸಾವಿರಾರು ಕಾರ್ಯಕರ್ತರು ಕಾರ್ಯಕ್ರಮಕ್ಕೆ ಆಗಮಿಸಿ ಪಾಲ್ಗೊಂಡಿದ್ದರು. ಇವರಿಗೆ ಸಸ್ಯಹಾರಿ, ಮಾಂಸಹಾರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಕೆಪಿಸಿಸಿ ಸದಸ್ಯ ಬೇಗೂರು ನಾರಾಯಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಂಗಣ್ಣಗೌಡ, ವೆಂಕಟರಾಮು, ಪ್ರಮುಖರಾದ ಇಪ್ಪಾಡಿ ವಿಶ್ವನಾಥ, ವಿಜಯ್, ಶಂಕರ್, ಲೋಹಿತ್, ಜೆಸಿಬಿ ರಾಜಣ್ಣ, ಎಸ್.ಆರ್.ಚಿಕ್ಕಣ್ಣ, ಹೊನ್ನೇಗೌಡ, ಪಾಪಣ್ಣ, ಬಿ.ಕೆ.ರಾಮಣ್ಣ, ಬೋಜಯ್ಯ, ಲೀಲಾವತಿ, ಸುಮತಿ, ರುದ್ರಯ್ಯ, ಬಾ.ನ.ರವಿ, ಕೆ.ಕೃಷ್ಣ, ರೆಹಮನ್ ಶರೀಫ್, ನಾಗೇಂದ್ರ, ಅರುಣಕುಮಾರ್, ರಂಗಸ್ವಾಮಿ, ಸಮೀವುಲ್ಲಾ, ಮಂಜುಳಮ್ಮ, ಎಸ್ವಿಬಿ ಸುರೇಶ ಇತರರು ಇದ್ದರು.
ಬಸ್ ಚಾರ್ಜ್ ಫ್ರೀ ಹೆಂಗಸಿರಿಗಾದ್ರೆ, ಕರೆಂಟ್ ಫ್ರೀ ಗಂಡಸರಿಗೆ
ಕುಣಿಗಲ್: ಸಭೆಯಲ್ಲಿ ಸಂಸದರು ಭಾಷಣ ಮಾಡುವಾಗ ಗ್ರಾಮಸ್ಥನೊಬ್ಬ ಮಧ್ಯಪ್ರವೇಶಿಸಿ, ಹಳ್ಳಿಯಲ್ಲಿ ಕುಡಿಯೋ ನೀರಿಗೂ ಮೀಟರ್ ಹಾಕಿದ್ದಾರೆ. ಸರಿಯಲ್ಲ ತೆಗಿಸಿ ಎಂದು ಸಂಸದರಿಗೆ ಅವಲತ್ತುಕೊಂಡರೆ ಮತ್ತೋರ್ವ ಎಲ್ಲಾ ಯೋಜನೆಗಳನ್ನು ನೀವು ಮಹಿಳೆಯರಿಗೆ ನೀಡಿದರೆ ನಾವು ಗಂಡಸರು ನಿಮಗೆ ಮತ ಹಾಕಿಲ್ಲವ, ನಾವೇನು ನಿಮಗೆ ಕಣ್ಣಿಗೆ ಕಾಣಲ್ವ ಎಂದರು.
ಇದಕ್ಕೆ ನಗುತ್ತಲೆ ಉತ್ತರಿಸಿದ ಸಂಸದ ಡಿ.ಕೆ.ಸುರೇಶ್, ಹಳ್ಳಿಯಲ್ಲಿ ಕುಡಿಯೊ ನೀರಿಗೂ ಮೀಟರ್ ಹಾಕಿರೋದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಾವೇನು ಮಾಡೊಣ ಎಂದರೆ, ಗಂಡಸರಿಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ಯೋಜನೆ ನೀಡಿದೆ. ನಿಮಗೆ ಗೊತ್ತಾಗುತ್ತಿಲ್ಲ. ಬಸ್ ಚಾರ್ಜ್ ಫ್ರೀ ಹೆಂಗಸಿರಿಗಾದ್ರೆ, ಕರೆಂಟ್ ಚಾರ್ಜ್ ಫ್ರೀ ಗಂಡಸರಿಗೆ ಅರ್ಥ ಮಾಡಿಕೊಳ್ಳಿ ಎಂದಾಗ ಸಭೆ ನಗೆ ಗಡಲಿನಲ್ಲಿ ಮುಳುಗಿತು.
Comments are closed.