ಕೆಐಎಡಿಬಿ ಅಧಿಕಾರಿ ಮನೆ ಮೇಲೆ ದಾಳಿ

170

Get real time updates directly on you device, subscribe now.


ತುಮಕೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಇಲ್ಲಿನ ಆರ್.ಟಿ.ನಗರದಲ್ಲಿರುವ ಕೆಐಎಡಿಬಿ ಅಧಿಕಾರಿಯೊಬ್ಬರ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಆರ್.ಟಿ. ನಗರದ ಸಮೀಪವಿರುವ ಶಂಕರಪುರಂನ ಡಿ ಬ್ಲಾಕ್ ನಲ್ಲಿ ವಾಸವಿರುವ ಪ್ರಸ್ತುತ ಮೈಸೂರಿನ ಕೆಐಎಡಿಬಿ ಕಚೇರಿಯಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಸಿ.ಎನ್.ಮೂರ್ತಿ ಎಂಬುವರ ಮನೆ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಎಸ್ಪಿ ವಲಿಬಾಷಾ ಮಾರ್ಗದರ್ಶನದಲ್ಲಿ ಡಿವೈಎಸ್ಪಿಗಳಾದ ಮಂಜುನಾಥ್ ಮತ್ತು ಹರೀಶ್ ನೇತೃತ್ವದ ತಂಡ ದಾಳಿ ನಡೆಸಿ ದಾಖಲಾತಿಗಳ ತಪಾಸಣೆಯಲ್ಲಿ ತೊಡಗಿದ್ದಾರೆ.

ಬೆಳಗ್ಗೆ 5.15ಕ್ಕೆ ಐದು ವಾಹನಗಳಲ್ಲಿ ದಿಢೀರ್ ದಾಳಿ ನಡೆಸಿರುವ 6 ಮಂದಿ ಲೋಕಾಯುಕ್ತ ಅಧಿಕಾರಿಗಳು ತಂಡ ಹಾಗೂ 15 ಮಂದಿ ಸಿಬ್ಬಂದಿ ಒಳಗೊಂಡ ತಂಡ ಕೆಐಎಡಿಬಿ ಕಾರ್ಯ ನಿರ್ವಾಹಕ ಇಂಜಿನಿಯರ್ ಸಿ.ಎನ್.ಮೂರ್ತಿ ಮನೆ ಹಾಗೂ ಸಮೀಪದಲ್ಲೇ ಇರುವ ಇವರ ಮಾವ ಮತ್ತು ನಾದಿನಿ ಮನೆ ಮೇಲೂ ಏಕಕಾಲದಲ್ಲಿ ದಾಳಿ ನಡೆಸುವ ಮೂಲಕ ಈ ಮೂರು ಮನೆಗಳವರೆಗೂ ಮುಂಜಾನೆಯೇ ಶಾಕ್ ನೀಡಿದ್ದಾರೆ.

ಸುದೀರ್ಘವಾಗಿ ಕಾಗದ ಪತ್ರಗಳು, ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿರುವ ಅಧಿಕಾರಿಗಳು ಈ ಮನೆಗಳಲ್ಲಿರುವ ಚಿನ್ನಾಭರಣ, ಬೆಳ್ಳಿಯ ಆಭರಣ ವಶಕ್ಕೆ ಪಡೆದು ತೂಕ ಮಾಡುವ ಕಾರ್ಯದಲ್ಲಿ ಮುಂದಾಗಿದ್ದಾರೆ.
ಸದರಿ ಅಧಿಕಾರಿ ಸಿ.ಎನ್.ಮೂರ್ತಿ ತಮ್ಮ ಆದಾಯಕ್ಕಿಂತ ಅಧಿಕ ಅಕ್ರಮ ಆಸ್ತಿ ಹೊಂದಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಇದುವರೆವಿಗೂ ಇವರ ಮನೆಯಲ್ಲಿ 8 ಲಕ್ಷಕ್ಕೂ ಅಧಿಕ ನಗದು, 1 ಕೆಜಿಗೂ ಅಧಿಕ ಚಿನ್ನಾಭರಣಗಳು, ಚರಾಸ್ತಿಯ ದಾಖಲಾತಿಗಳು ಲಭ್ಯವಾಗಿವೆ ಎಂದು ಲೋಕಾಯುಕ್ತ ಎಸ್ಪಿ ವಲಿಬಾಷ ತಿಳಿಸಿದ್ದಾರೆ.

ತುಮಕೂರು ನಗರ ಸೇರಿದಂತೆ ಬೇರೆ ಬೇರೆ ಕಡೆ ಸದರಿ ಅಧಿಕಾರಿ ನಿವೇಶನ ಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಕುರಿತು ದಾಖಲಾತಿಗಳ ಪರಿಶೀಲನೆ ನಡೆಯುತ್ತಿದ್ದು, ಸಂಜೆವರೆಗೂ ದಾಖಲಾತಿಗಳ ಪರಿಶೀಲನೆ ಕಾರ್ಯ ಮುಂದುವರೆಯಲಿದೆ ಎಂದು ಹೇಳಿದ್ದಾರೆ.

ಕಳೆದ ಹಲವು ದಿನಗಳಿಂದ ಕೆಐಎಡಿಬಿ ಕಾರ್ಯನಿರ್ವಾಹಕ ಎಂಜಿನಿಯರ್ ನರಸಿಂಹಮೂರ್ತಿ ವಿರುದ್ಧ ಭ್ರಷ್ಟಾಚಾರದ ಆರೋಪ ಹಾಗೂ ಆದಾಯಕ್ಕಿಂತ ಅಧಿಕ ಆಸ್ತಿಪಾಸ್ತಿ ಸಂಪಾದಿಸಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ಲೋಕಾಯುಕ್ತ ಇಲಾಖೆ ಮೂಲಗಳು ತಿಳಿಸಿವೆ.

Get real time updates directly on you device, subscribe now.

Comments are closed.

error: Content is protected !!