ಶಿರಾ: ಮೌಲ್ಯಧಾರಿತ ಹಾಗೂ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳ ಬದುಕನ್ನು ರೂಪಿಸುವುದರಲ್ಲಿ ಮಹತ್ವದ ಪಾತ್ರ ವಹಿಸಿಕೊಳ್ಳಲಿದೆ. ಬಡವರ ಮಕ್ಕಳಿಗೂ ಈ ಶಿಕ್ಷಣ ದೊರಕಿಸಿಕೊಡುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳನ್ನು ಉನ್ನತೀಕರಣ ಗೊಳಿಸಲಾಗುತ್ತಿದೆ. ಖಾಸಗಿ ಶಾಲೆಗೆ ಸರಿ ಸಮಾನವಾಗಿರುವ ಈ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ ಎಂದು ವಿಧಾನ ಪರಿಷತ್ ಶಾಸಕ ಚಿದಾನಂದ್ ಎಂ ಗೌಡ ಕರೆ ನೀಡಿದರು.
ಬುಧವಾರ ಶಿರಾ ನಗರದ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಪ್ರಸಕ್ತ ವರ್ಷದ ಶೈಕ್ಷಣಿಕ ಸಾಲಿನ ತರಗತಿಗಳು ಪ್ರಾರಂಭದ ಮೊದಲ ದಿನದ ಮಕ್ಕಳನ್ನು ಸ್ವಾಗತಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಈ ಸರ್ಕಾರಿ ಶಾಲೆಯು ಶಿರಾ ನಗರದ ಯಾವುದೇ ಖಾಸಗಿ ಶಾಲೆಗಿಂತ ಕಮ್ಮಿ ಇಲ್ಲ, ಆದ್ದರಿಂದ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿ ಈ ವರ್ಷದಿಂದಲೇ ನನ್ನ ವೈಯಕ್ತಿಕ ಖರ್ಚಿನಲ್ಲಿ ತಾಲೂಕಿನಾದ್ಯಂತ ಎಲ್ಲಾ ಸರ್ಕಾರಿ ಶಾಲೆಗಳಿಗೂ ಸ್ಕೂಲ್ ಬ್ಯಾಗ್ ಹಾಗೂ ಉಚಿತ ನೋಟ್ ಪುಸ್ತಕಗಳನ್ನು ಕೊಡುತ್ತಿದ್ದೇನೆ. ಶಾಲೆಯ ಎಲ್ಲಾ ಶಿಕ್ಷಕರು ನುರಿತ ಶಿಕ್ಷಕರುಗಳಾಗಿದ್ದು ಮಾದರಿ ಶಾಲೆ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ಗುಣಮಟ್ಟ ಶಿಕ್ಷಣ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿರುತ್ತದೆ. ಆದ್ದರಿಂದ ಸರ್ಕಾರಿ ಶಾಲೆಗಳಿಗೆ ನಿಮ್ಮ ಮಕ್ಕಳನ್ನು ಸೇರಿಸಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ಉಪ ಪ್ರಾಂಶುಪಾಲ ನಾಗರಾಜ್ ರಾವ್, ಗೋಪಿ ಕುಂಟೆ ಸುಬ್ರಹ್ಮಣ್ಯ ಸ್ವಾಮಿ, ಶ್ರೀನಿವಾಸ್, ಶ್ರೀಧರ್, ಅಶ್ವತ್ ರೆಡ್ಡಿ, ಮದಲೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಈರಣ್ಣ, ಮುದ್ದರಂಗನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಶಿವಲಿಂಗಯ್ಯ, ಕುಮಾರ್ ಹಾಗೂ ಶಾಲಾ ಶಿಕ್ಷಕರು ಹಾಜರಿದ್ದರು.
Comments are closed.