ತುಮಕೂರು: ಇಲಾಖೆಯಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಸುದೀರ್ಘ 30 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಪಿ.ಓಂಕಾರಪ್ಪ ಇವರ ಕಾರ್ಯತತ್ಪರತೆ, ಶಿಸ್ತು, ಸಾಮಾಜಿಕ ಬದ್ಧತೆಯಿಂದ ಕೂಡಿದ್ದು, ಇಂದಿನ ಪೀಳಿಗೆಯ ಅಧಿಕಾರಿ ನೌಕರರಿಗೆ ಆದರ್ಶರಾಗಿದ್ದಾರೆ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಎಂ.ಎಸ್.ಶ್ರೀಧರ್ ತಿಳಿಸಿದರು.
ಇಲಾಖೆ ವತಿಯಿಂದ ಬೀಳ್ಕೊಡಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಪಿ.ಓಂಕಾರಪ್ಪ ಅವರು ಮೇ 31 ರಂದು ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿರುತ್ತಾರೆ. ಜಿಲ್ಲೆಯಲ್ಲಿ ಸುಮಾರು 15 ವರ್ಷ ಕಾಲ ಸೇವೆ ಸಲ್ಲಿಸಿರುವ ಇವರು ತಿಪಟೂರು ತಾಲೂಕಿನಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾಗಿ ನಂತರದಲ್ಲಿ ಸುಧೀರ್ಘ 10 ವರ್ಷ ಕಾಲ ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾಗಿ ಕಾರ್ಯ ನಿರ್ವಹಿಸಿರುವ ಇವರು ಇಲಾಖೆಯ ಕಾರ್ಯಕ್ರಮ, ಸೇವೆಗಳನ್ನು ಸಮುದಾಯದ ಫಲಾನುಭವಿಗಳಿಗೆ ತಲುಪಿಸಲು ಜನಪ್ರತಿನಿಧಿಗಳು, ಇಲಾಖೆಯ ಅಧಿಕಾರಿಗಳ ಹಾಗೂ ನೌಕರರ ಸಹಕಾರ ಪಡೆದು ಉತ್ತಮ ಅನುಷ್ಠಾನದಲ್ಲಿ ಯಶಸ್ಸು ಕಂಡವರಾಗಿದ್ದಾರೆ.
ಅಂಗನವಾಡಿ ಕೇಂದ್ರಗಳ ಸೇವೆಗಳ ಅನುಷ್ಠಾನಕ್ಕೆ ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು. ಐಸಿಡಿಎಸ್ ಯೋಜನೆ, ಸ್ತ್ರೀಶಕ್ತಿ ಯೋಜನೆ ಆದಿಯಾಗಿ ಇಲಾಖೆಯ ಎಲ್ಲಾ ಕಾರ್ಯಕ್ರಮ, ಸೇವೆಯನ್ನು ಕಾಲಮಿತಿಯಲ್ಲಿ ಅನುಷ್ಠಾನಕ್ಕೆ ಶ್ರಮಿಸಿರುತ್ತಾರೆ ಎಂದು ತಿಳಿಸಿದರು.
ಕ್ಷೇತ್ರ ಮಟ್ಟದ ತಳ ಹಂತದ ಸಿಬ್ಬಂದಿಗೆ ಉತ್ತಮ ಮಾರ್ಗ ದರ್ಶನವನ್ನು ಜಿಲ್ಲಾ ಹಾಗೂ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡುವ ಮೂಲಕ ಇಲಾಖೆಯ ಕಾರ್ಯಕ್ರಮಗಳ ಉತ್ತಮ ಅನುಷ್ಠಾನಕ್ಕೆ ಶ್ರಮಿಸಿದ್ದಾರೆ ಎಂದು ಅವರ ಸೇವೆಯನ್ನು ಸ್ಮರಿಸಿದರು.
ಕಳೆದ ಮೂರುವರೆ ತಿಂಗಳಿಂದ ಜಿಲ್ಲಾ ನಿರೂಪಣಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಇವರು ಇತ್ತೀಚಿಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದು ಇವರ ಸಮಯ ಪಾಲನೆ, ಕ್ರಮ ಬದ್ಧತೆ ಇತರರಿಗೆ ಮಾದರಿ ಎಂದು ಎಂದರು.
ಕಾರ್ಯಕ್ರಮದಲ್ಲಿ ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ಜಿಲ್ಲಾ ನಿರೂಪಣಾಧಿಕಾರಿ ಪಿ.ಓಂಕಾರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ವಿವಿಧ ಹಂತದ ಅಧಿಕಾರಿಯಾಗಿ ಇಲಾಖೆಯ ಸೇವೆಗಳನ್ನು ಸಮುದಾಯದ ಜನರಿಗೆ ತಲುಪಿಸಲು ತಳ ಹಂತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರ ಸೇವೆ ಸ್ಮರಣೀಯ, ಎಲ್ಲರ ಸಹಕಾರದೊಂದಿಗೆ ಸೇವಾ ಇಲಾಖೆಯ ಕಾರ್ಯಕ್ರಮಗಳನ್ನು ಇಲಾಖೆಯ ಫಲಾನುಭವಿಗಳಿಗೆ ತಲುಪಿಸಲು ಈ ಇಲಾಖೆಯಲ್ಲಿ ಸರ್ಕಾರಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ನನ್ನ ಭಾಗ್ಯವೇ ಸರಿ ಎಂದು ಸುಧೀರ್ಘ ಸೇವೆ ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಚೇರಿಯಲ್ಲಿ ಕಾರ್ಯನಿರ್ವಹಿಸಿ ಇದೇ ದಿನ ನಿವೃತ್ತರಾದ ಹಿರಿಯ ವಾಹನ ಚಾಲಕರಾದ ಪುಟ್ಟರಾಜು ಇವರಿಗೂ ಇಲಾಖೆ ವತಿಯಿಂದ ಬೀಳ್ಕೊಡುಗೆ ನೀಡಿ ಸನ್ಮಾನಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಆರ್.ಜಿ.ಪವಿತ್ರ, ಇಲಾಖೆಯ ನಿವೃತ್ತ ಅಧಿಕಾರಿಗಳು, ಪ್ರಾಂಶುಪಾಲ ಡಿ.ಎಸ್ ರೇಣುಕಾ ಕುಮಾರ್, ಜಿಲ್ಲೆಯ ಎಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿಗಳು, ಮೇಲ್ವಿಚಾರಕಿಯರು, ಸಿಬ್ಬಂದಿ ಭಾಗಿಯಾಗಿದ್ದರು.
Comments are closed.