ಇಟ್ಟಿಗೆಹಳ್ಳಿ ಶಾಲೆಗೆ ಕನ್ನಡ ಶಿಕ್ಷಕರ ನೇಮಕಕ್ಕೆ ಆಗ್ರಹ

465

Get real time updates directly on you device, subscribe now.


ತುರುವೇಕೆರೆ: ಗ್ರಾಮದ ಸರಕಾರಿ ಉರ್ದು ಪ್ರಾಥಮಿಕ ಪಾಠಶಾಲೆಗೆ ಕನ್ನಡ ಶಿಕ್ಷಕರನ್ನು ನೇಮಕ ಮಾಡುವಂತೆ ಆಗ್ರಹಿಸಿ ತಾಲೂಕಿನ ಇಟ್ಟಿಗೆಹಳ್ಳಿ ಗ್ರಾಮದ ಪೋಷಕರು ಬಿಇಓ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ಸೈಯ್ಯದ್ ಪೀರ್ ಮಾತನಾಡಿ, ನಮ್ಮ ಗ್ರಾಮದಲ್ಲಿರುವ ಸರಕಾರಿ ಉರ್ದು ಪ್ರಾಥಮಿಕ ಪಾಠಶಾಲೆಯಲ್ಲಿ ಸುಮಾರು 30 ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಳೆದ 4 ವರ್ಷಗಳಿಂದಲೂ ನಮ್ಮ ಗ್ರಾಮದ ಮಕ್ಕಳು ಶಿಕ್ಷಕರ ಕೊರತೆಯಿಂದ ಕನ್ನಡ ಕಲಿಕೆಯಿಂದ ವಂಚಿತರಾಗಿದ್ದಾರೆ. ನಮ್ಮ ಮಕ್ಕಳು ನಾಡಭಾಷೆ ಕನ್ನಡ ಕಲಿಯುವ ಅಗತ್ಯವಿದ್ದು ಕೂಡಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕನ್ನಡ ಶಿಕ್ಷಕರನ್ನು ನೇಮಿಸಬೇಕು. ಇಲ್ಲವಾದಲ್ಲಿ ಪೋಷಕರು ಬಿಇಓ ಕಚೇರಿ ಎದುರು ಅಹೋರಾತ್ರಿ ಧರಣಿ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

ಮಾಯಸಂದ್ರ ಹೋಬಳಿ ಘಟಕದ ಮಾಜಿ ಅಧ್ಯಕ್ಷ ಎನ್.ಆರ್.ಜಯರಾಮ್ ಮಾತನಾಡಿ, ಮಕ್ಕಳು ನಾಡಭಾಷೆ ಕನ್ನಡ ಕಲಿಯಬೇಕೆಂಬ ಇಟ್ಟಿಗೆಹಳ್ಳಿ ಗ್ರಾಮದ ಮುಸ್ಲಿಂ ಬಂಧುಗಳು ಕಳಕಳಿ ಇತರರಿಗೆ ಮಾದರಿಯಾಗಿದೆ. ಶಿಕ್ಷಣ ಇಲಾಖಾಧಿಕಾರಿಗಳು ಇಟ್ಟಿಗೆಹಳ್ಳಿ ಉರ್ದು ಶಾಲೆಗೆ ಕೂಡಲೇ ಕನ್ನಡ ಶಿಕ್ಷಕರನ್ನು ನೇಮಿಸಬೇಕು. ಈ ಮೂಲಕ ಕನ್ನಡ ಭಾಷೆಯನ್ನ ಮಕ್ಕಳು ಕಲಿಯಲು ಅವಕಾಶ ಕಲ್ಪಿಸಿ ಕನ್ನಡ ಅಸ್ಮಿತೆಗಾಗಿ ಮುಂದಾಗಬೇಕೆಂದು ಒತ್ತಾಯಿಸಿದರು.

ಪೋಷಕರ ಮನವಿ ಆಲಿಸಿ ಮಾತನಾಡಿದ ಬಿಇಓ ಪದ್ಮನಾಭ ಮಾಯಸಂದ್ರ ಹೋಬಳಿ ಸೇರಿದಂತೆ ಹಲವು ಕಡೆ ಕನ್ನಡ ಶಿಕ್ಷಕರ ಕೊರತೆ ಇದೆ. ಸರಕಾರ ಅತಿಥಿ ಶಿಕ್ಷಕರ ನೇಮಕಾತಿಗೆ ಹಸಿರು ನಿಶಾನೆ ನೀಡಿದೆ. ಇಟ್ಟಿಗೆಹಳ್ಳಿ ಉರ್ದು ಶಾಲೆಗೆ ಕೆಲ ದಿನಗಳಲ್ಲಿ ಕನ್ನಡ ಶಿಕ್ಷಕರನ್ನು ನೇಮಕ ಮಾಡಿಕೊಡುವ ಭರವಸೆ ನೀಡಿದರು.

ಕನ್ನಡ ಶಿಕ್ಷಕರನ್ನು ನೇಮಿಸುವ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೀಡಿದ ಭರವಸೆಗೆ ಇಟ್ಟಿಗೆಹಳ್ಳಿ ಪೋಷಕರು ಸಮ್ಮತಿಸಿ ಪ್ರತಿಭಟನೆ ವಾಪಸ್ ಪಡೆದರು. ತುರ್ತಾಗಿ ಕನ್ನಡ ಶಿಕ್ಷಕರ ನೇಮಕ ಮಾಡುವಂತೆ ಆಗ್ರಹ ಪೂರ್ವಕ ಮನವಿಯನ್ನು ಕಚೇರಿ ವ್ಯವಸ್ಥಾಪಕ ಮೋಹನ್ ಕುಮಾರ್ ಅವರ ಮೂಲಕ ಸರಕಾರಕ್ಕೆ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಗ್ರಾಪಂ ಸದಸ್ಯ ಕಿಜರ್ ಪಾಷ, ರಿಯಾಜ್ ಪಾಷ, ನಗೀನಾತಾಜ್, ಫರ್ಜಾನಾ ಭಾನು, ಕೌಸರ್, ಮಕ್ಬುಲ್, ಅಲ್ತಾಪ್, ಇಮ್ರಾನ್, ತೆಂಗು ಬೆಳೆಗಾರ ಸಂಘದ ಕೊಪ್ಪ ನಾಗೇಶ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!