ಹೈನುಗಾರಿಕೆಯಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ

ವಿಶ್ವ ಹಾಲು ದಿನ ಆಚರಣೆ- ರೋಗಿಗಳಿಗೆ ಹಾಲು, ಬಿಸ್ಕೇಟ್ ವಿತರಣೆ

301

Get real time updates directly on you device, subscribe now.


ತುಮಕೂರು: ತುಮಕೂರು ಹಾಲು ಒಕ್ಕೂಟದ ವತಿಯಿಂದ ವಿಶ್ವ ಹಾಲು ದಿನಾಚರಣೆಯ ದಿನದ ಪ್ರಯುಕ್ತ ನಗರದ ಜಿಲ್ಲಾಸ್ಪತ್ರೆ ರೋಗಿಗಳಿಗೆ ಹಾಲು ವಿತರಿಸುವ ಜೊತೆಗೆ ಹಾಲಿನ ಮಹತ್ವ ಸಾರುವಂತಹ ಕೆಲಸ ಮಾಡಲಾಗುತ್ತಿದೆ. ಅಪೌಷ್ಠಿಕ ಮಕ್ಕಳಿಗೆ ಹಾಲು ವಿತರಿಸುವ ಕೆಲಸದೊಂದಿಗೆ ರೈತರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ತುಮುಲ್ ಮಾಡುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾ ಅಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದರು.

ವಿಶ್ವ ಹಾಲು ದಿನಾಚರಣೆ ಅಂಗವಾಗಿ ತುಮಕೂರು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದ ವತಿಯಿಂದ ನಗರದ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ನಂದಿನಿಯ ಸುಹಾಸಿತ, ತೃಪ್ತಿ ಹಾಲು, ಕುಕ್ಕೀಸ್ ಬಿಸ್ಕೆಟ್ ವಿತರಿಸಿ ಮಾತನಾಡಿ, ರೋಗಿಗಳಿಗೆ ಹಾಲನ್ನು ನೀಡುವುದರ ಮೂಲಕ ಅದರ ಮಹತ್ವ ತಿಳಿಸಿದ್ದಾರೆ. ಕೆಎಂಎಫ್ ಮಂಡಳಿಯು ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿಯತ್ತಾ ಸಾಗುವ ನಿಟ್ಟಿನಲ್ಲಿ ಅಧ್ಯಕ್ಷರು ಹಾಗೂ ನಿರ್ದೇಶಕರು ಕೆಲಸ ಮಾಡಲಿ ಎಂದು ಶುಭ ಹಾರೈಸಿದರು.

ಶಾಲಾ ಮಕ್ಕಳಿಗೆ ಹಾಲು ವಿತರಿಸುವ ಕ್ಷೀರಭಾಗ್ಯ ಯೋಜನೆಯಡಿ ಕೆಎಂಎಫ್ ನಿಂದಲೇ ಹಾಲಿನ ಪುಡಿ ಪಡೆದು ಮಕ್ಕಳಿಗೆ ವಿತರಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿಯೂ ಸರ್ಕಾರದ ನಿರ್ದೇಶನದ ಅನುಸಾರ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ತುಮುಲ್ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ ವಿಶ್ವ ಹಾಲು ದಿನಾಚರಣೆ ಅಂಗವಾಗಿ ಒಕ್ಕೂಟದ ವತಿಯಿಂದ ಉಚಿತವಾಗಿ ರೋಗಿಗಳಿಗೆ ಹಾಲು, ಬಿಸ್ಕೆಟ್ ವಿತರಣೆ ಮಾಡಲಾಗಿದೆ ಎಂದರು.

ದೇಶದಲ್ಲೇ ಹೈನುಗಾರಿಕೆಯಲ್ಲಿ ಗುಜರಾತ್ ಹೊರತು ಪಡಿಸಿದರೆ ಕರ್ನಾಟಕ 2ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ 15 ಹಾಲು ಒಕ್ಕೂಟಗಳು ಕಾರ್ಯ ನಿರ್ವಹಿಸುತ್ತಿವೆ. ತುಮಕೂರು ಹಾಲು ಒಕ್ಕೂಟ ರಾಜ್ಯದ ಒಕ್ಕೂಟಗಳಲ್ಲೇ ಪ್ರತಿಷ್ಠಿತ ಒಕ್ಕೂಟವಾಗಿ ಕೆಲಸ ನಿರ್ವಹಿಸುತ್ತಿದೆ ಎಂದರು.
ಜಿಲ್ಲೆಯಲ್ಲಿ 1338 ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. ಸುಮಾರು 8.50 ಲಕ್ಷ ಲೀಟರ್ ಹಾಲು ಪ್ರತಿನಿತ್ಯ ಶೇಖರಣೆಯಾಗುತ್ತಿದೆ. ರೈತರಿಂದ ಶೇಖರಿಸಿದ ಹಾಲನ್ನು ಸಂಸ್ಕರಣೆ ಮಾಡಿ ವಿವಿಧ ಪ್ರದೇಶಗಳಲ್ಲಿ ಮಾರಾಟ ಮಾಡಿ ಅದರಿಂದ ಬಂದಂತಹ ಹಣದಲ್ಲಿ ರೈತರಿಗೆ ಬಟವಾಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ತಾಯಿ ಎದೆ ಹಾಲು ಹೊರತು ಪಡಿಸಿದರೆ ನಂದಿನಿ ಹಾಲಿಗೆ ಅಷ್ಟೇ ಪ್ರಾಮುಖ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆ ಯಶಸ್ವಿಯಾಗಿದೆ. ರಾಜ್ಯದಲ್ಲೇ ಒಳ್ಳೆಯ ದರ ಕೊಡುವುದರಲ್ಲಿ ತುಮುಲ್ ಮುಂಚೂಣಿಯಲ್ಲಿದೆ ಎಂದರು.
ವಿಶೇಷವಾಗಿ ತುಮಕೂರು ಹಾಲು ಒಕ್ಕೂಟ ತುಮಕೂರು ಜಿಲ್ಲೆಯಲ್ಲಿ 1.45 ಲಕ್ಷ ಲೀಟರ್ ಮಾರಾಟ ಮಾಡುತ್ತಿದೆ. ಹಾಗೆಯೇ ಬೆಂಗಳೂರಿನಲ್ಲಿ 1 ಲಕ್ಷ 81 ಸಾವಿರ ಲೀಟರ್ ಮಾರಾಟ ಮಾಡಲಾಗುತ್ತಿದೆ. ಬೆಂಗಳೂರು ಮತ್ತು ತುಮಕೂರು ಎರಡೂ ಕಡೆಗಳಲ್ಲಿ ಸುಮಾರು 70 ಸಾವಿರ ಕೆಜಿ ಮೊಸರು ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ವೀಣಾ, ತುಮುಲ್ ನಿರ್ದೇಶಕ ರೇಣುಕ ಪ್ರಸಾದ್, ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ಸಿ.ಸುರೇಶ್, ವ್ಯವಸ್ಥಾಪಕರಾದ (ಮಾರುಕಟ್ಟೆ) ಹೆಚ್.ಎಂ. ವಿದ್ಯಾನಂದ್, ಕೆ.ಎಂ.ಗಿರೀಶ್, ಉಪ ವ್ಯವಸ್ಥಾಪಕ ಟಿ.ಕೆ.ರವಿಕಿರಣ್, ಸಹಾಯಕ ವ್ಯವಸ್ಥಾಪಕಿ ಎಂ.ಶಿಲ್ಪ, ಸಹಾಯಕ ವ್ಯವಸ್ಥಾಪಕ ನರಸಿಂಹೇಗೌಡ, ಭರತ್, ಕೆ.ಎಲ್.ದೇವರಾಜು, ಹೆಚ್.ಎಂ.ನಾಗರಾಜು ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!