ರಾಷ್ಟ್ರೀಯ ಕುಸ್ತಿಪಟುಗಳ ಹೋರಾಟಕ್ಕೆ ಬೆಂಬಲ

222

Get real time updates directly on you device, subscribe now.


ತುಮಕೂರು: ನಗರದ ಟೌನ್ ಹಾಲ್ ವೃತ್ತದಲ್ಲಿ ರಾಷ್ಟ್ರೀಯ ಮಹಿಳಾ ಕುಸ್ತಿ ಪಟುಗಳ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಮತ್ತು ದೆಹಲಿ ಪೊಲೀಸರ ವರ್ತನೆ ಖಂಡಿಸಿ ಹಾಗೂ ಆರೋಪಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಬಂಧಿಸಲು ಒತ್ತಾಯಿಸಿ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ಪ್ರತಿಭಟನೆಯಲ್ಲಿ ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಪಟು ಟಿ.ಕೆ.ಆನಂದ್ ಭಾಗವಹಿಸಿ ಮಾತನಾಡಿ, ಒಲಂಪಿಕ್ ಕ್ರೀಡೆಯಲ್ಲಿ ಭಾಗವಹಿಸಿ ಪದಕ ಗೆಲ್ಲುವುದು ಅಷ್ಟು ಸುಲಭದ ಮಾತಲ್ಲ, ನಮ್ಮ ದೇಶದ ತ್ರಿವರ್ಣ ಧ್ವಜವನ್ನು ಜಗತ್ತಿನಾದ್ಯಂತ ಮಲ್ಲಯುದ್ಧದಲ್ಲಿ ರಾರಾಜಿಸುವಂತೆ ಸಾಕ್ಷಿ ಮಲ್ಲಿಕ್ ಮತ್ತು ವಿನೇಶ್ ಪೋಗಟ್ ಸಾಧನೆ ಮಾಡಿದ್ದು ಇಂತಹ ಕ್ರೀಡಾಪಟುಗಳ ಮೇಲೆ ದೆಹಲಿ ಪೊಲೀಸರು ನಡೆಸಿರುವ ದೌರ್ಜನ್ಯ ಅಮಾನವೀಯ ಮತ್ತು ಖಂಡನೀಯ. ಜಗತ್ತಿನಾದ್ಯಂತ ಮಹಿಳಾ ಕುಸ್ತಿಪಟುಗಳ ಹೋರಾಟಕ್ಕೆ ಬೆಂಬಲ ವ್ಯಕ್ತವಾಗುತ್ತಿದೆ. ಸಂಸತ್ ಭವನ ಮುಖ್ಯವಾಗಿದೆ ಹೊರತು ಈ ದೇಶದ ಪ್ರಧಾನಿಗೆ ಕ್ರೀಡಾ ಪಟುಗಳ ನ್ಯಾಯಯುತ ಹೋರಾಟ ಮುಖ್ಯವಾಗಲಿಲ್ಲ. ಕೂಡಲೇ ಆರೋಪಿಯನ್ನು ಬಂಧಿಸಿ ಕ್ರೀಡಾಪಟುಗಳಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.

ಸ್ಲಂ ಜನಾಂದೋಲನ ಕರ್ನಾಟಕದ ಸಂಚಾಲಕ ಎ.ನರಸಿಂಹ ಮೂರ್ತಿ ಮಾತನಾಡಿ, ಕ್ರೀಡಾಪಟುಗಳ ಭವಿಷ್ಯ ದೇಶದಲ್ಲಿ ಆಪಾಯದಲ್ಲಿದೆ. ಕ್ರೀಡಾಪಟುಗಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಎಸಗಿರುವ ಲೈಂಗಿಕ ಕಿರುಕುಳ ಮರೆಮಾಚಲಾಗುತ್ತಿದೆ. ಬ್ರಿಜ್ ಭೂಷಣ್ ಮೇಲಿನ ಪ್ರಕರಣ ಒಂದೆರೆಡಲ್ಲ ಹಲವಾರು ಪ್ರಕರಣ ಇದ್ದರು ಇದುವರೆಗೂ ಬಂಧಿಸಿಲ್ಲ. ಭಾರತದ ಪ್ರಖ್ಯಾತ ಕುಸ್ತಿಪಟುಗಳು ಬೀದಿಗೆ ಬಂದು ಕುಸ್ತಿ ಫೆಡರೇಷನ್ ಅಧ್ಯಕ್ಷ ಲೈಂಗಿಕ ಕಿರುಕುಳ ನೀಡುವ ಬಗ್ಗೆ ಹೋರಾಟ ಮಾಡುತ್ತಿದ್ದರು. ದೂರು ದಾಖಲಾದರು ಸರ್ಕಾರ ಇನ್ನೂ ಏಕೆ ಬಂಧಿಸಿಲ್ಲ? ಆತ ಅಷ್ಟೊಂದು ಪ್ರಭಾವಿಯೇ ಎಂಬ ಪ್ರಶ್ನೆ ಭಾರತಿಯರಲ್ಲಿ ಕಾಡುತ್ತಿದೆ. ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ, ದೈಹಿಕ ಕಿರುಕುಳ, ಸರ್ವಾಧಿಕಾರದ ಧೋರಣೆ ಮತ್ತು ಹಣಕಾಸಿನ ಅಕ್ರಮ ಸೇರಿದಂತೆ ಗಂಭೀರ ಆರೋಪ ಕೇಳಿ ಬಂದಿವೆ.
ಒಂದು ಪೋಸ್ಕೋ ಪ್ರಕರಣ ದಾಖಲಾಗಿದೆ. ಆದರೂ ಬ್ರಿಜ್ ಭೂಷಣ್ನನ್ನು ಸರ್ಕಾರ ಬಂಧಿಸದೆ ರಾಜಕೀಯ ಲೇಪನ ನೀಡುತ್ತಿರುವುದು ಸರಿಯಲ್ಲ. ಹಲವಾರು ಸಾಕ್ಷಾಧಾರ ಇದ್ದರು ಆರೋಪಿಯನ್ನು ಬಂಧಿಸದ ಈ ವಿಚಾರದ ಬಗ್ಗೆ ಮಾತನಾಡದ ಪ್ರಧಾನಿಗಳ ನಡೆ ಪ್ರಜಾಪ್ರಭುತ್ವದ ವಿರೋಧಿ ನಡೆಯಾಗಿದೆ. ಹಾಗಾಗಿ ದೇಶಾದ್ಯಂತ ಚಳವಳಿ ರೂಪ ಪಡೆಯುತ್ತಿರುವ ಕುಸ್ತಿಪಟುಗಳ ಹೋರಾಟ ಬೆಂಬಲಿಸಬೇಕಿರುವುದು ಪ್ರಜ್ಞಾವಂತ ನಾಗರಿಕರ ಕರ್ತವ್ಯವಾಗಿದ್ದು, ಸ್ಲಂ ಗಳಲ್ಲಿರುವ ಶ್ರಮ ಜೀವಿಗಳು ಈ ಹೋರಾಟ ಬೆಂಬಲಿಸಿರುವುದು ವಿಶೇಷವಾಗಿದೆ ಎಂದರು.

ಸಮಿತಿಯ ಪದಾಧಿಕಾರಿಗಳಾದ ದೀಪಿಕಾ ಮತ್ತು ಅರುಣ್ ಮಾತನಾಡಿ ಮಹಿಳಾ ಕ್ರೀಡಾಪಟುಗಳು ನಡೆಸುತ್ತಿರುವ ಈ ಘನತೆಯ ಹೋರಾಟ ಹತ್ತಿಕ್ಕದೆ ಜಂತರ್ ಮಂತರ್ ನಲ್ಲಿ ಹೋರಾಟ ಮಾಡಲು ಅವಕಾಶ ನೀಡಬೇಕು. ದೇಶಾದ್ಯಂತ ಹೋರಾಟದಲ್ಲಿ ಭಾಗವಹಿಸಲು ತೆರಳುವವರನ್ನು ತಡೆಯುತ್ತಿರುವುದು ಸರಿಯಾದ ಕ್ರಮವಲ್ಲ. ದೇಶದ ಪತಾಕೆಯನ್ನುಅಂತಾರಾಷ್ಟ್ರೀಯ ಮಟ್ಟದಲ್ಲಿ ತಂದು ಕೊಟ್ಟಿರುವ ಕ್ರೀಡಾ ಪಟುಗಳ ಹೋರಾಟವನ್ನು ನ್ಯಾಯಯುತವಾಗಿ ಈಡೇರಿಸಬೇಕಿರುವುದು ಕೇಂದ್ರ ಸರ್ಕಾರದ ಕರ್ತವ್ಯವಾಗಿದೆ ಎಂದರು.

ಪ್ರತಿಭಟನೆಯ ನೇತೃತ್ವವನ್ನು ಸಮಿತಿಯ ಪದಾಧಿಕಾರಿಗಳಾದ ಶಂಕ್ರಯ್ಯ, ಕಣ್ಣನ್, ಜಾಬೀರ್ಖಾನ್, ಶಾರದಮ್ಮ, ಗುಲ್ನಾಜ್, ತಿರುಮಲಯ್ಯ, ಮಂಗಳಮ್ಮ, ಶಾಬುದ್ದೀನ್, ಧನಂಜಯ್, ಗಣೇಶ್, ವೆಂಕಟೇಶ್, ಕಾಶಿರಾಜ್, ಪೂರ್ಣಿಮಾ, ಹನುಮಕ್ಕ, ಕೃಷ್ಣಮೂರ್ತಿ, ಮುಬಾರಕ್ ವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!