ಸನಾತನ ಸಂಸ್ಕೃತಿಯಲ್ಲಿ ರುದ್ರಭೂಮಿಗೆ ವಿಶೇಷ ಸ್ಥಾನ

ತುಮಕೂರಲ್ಲಿ ವೀರಶೈವ- ಲಿಂಗಾಯಿತ ರುದ್ರಭೂಮಿ ಲೋಕಾರ್ಪಣೆ

510

Get real time updates directly on you device, subscribe now.


ತುಮಕೂರು: ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿ ವತಿಯಿಂದ ನಗರದ ಗಂಗಸಂದ್ರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ವೀರಶೈವ- ಲಿಂಗಾಯಿತ ರುದ್ರಭೂಮಿ ಲೋಕಾರ್ಪಣೆ ಹಾಗೂ ಶ್ರೀಸಿದ್ದೇಶ್ವರಸ್ವಾಮಿ ದೇವಾಲಯದ ಪ್ರತಿಷ್ಠಾಪನಾ ಕಾರ್ಯಕ್ರಮ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಅಟವಿ ಸುಕ್ಷೇತ್ರದ ಅಟವಿ ಶಿವಲಿಂಗ ಸ್ವಾಮೀಜಿ, ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹಾಗೂ ಮಾಕನಹಳ್ಳಿ ಜಂಗಮ ಮಠದ ಗಂಗಾಧರ ಸ್ವಾಮೀಜಿ, ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮಿಗಳ ಸಾನಿಧ್ಯದಲ್ಲಿ ನೆರವೇರಿತು.

ಕಾರ್ಯಕ್ರಮಕ್ಕೆ ಸಂಸದ ಜಿ.ಎಸ್.ಬಸವರಾಜು ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು ಸಮಾಜ ಒಗ್ಗಟ್ಟಾಗಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. ನಮ್ಮಲ್ಲಿ ನಾವೇ ಭಿನ್ನಮತ ಮೂಡಿಸಿಕೊಂಡರೆ ಏನನ್ನು ಸಾಧಿಸು ಸಾಧ್ಯವಿಲ್ಲ. ಸ್ವಲ್ಪ ಯಾಮಾರಿದರೂ ಇದದ್ದನ್ನು ಕಿತ್ತುಗೊಂಡು ಬಿಡುತ್ತಾರೆ. ಇದು ನಾನು ನಿಮಗೆ ನೀಡುತ್ತಿರುವ ಎಚ್ಚರಿಕೆ. ನನ್ನ ಕಾಲ ಮುಗಿಯಿತು. ಈಗಾಗಲೇ ಪಕ್ಷದ ಹೈಕಮಾಂಡ್ ಗೆ ಮುಂದಿನ ಬಾರಿ ನಾನು ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಹೇಳಿದ್ದೇನೆ. ಮುಂದೆ ಯಾರೇ ಬರಲಿ ಅವರ ಸಹಾಯ ಪಡೆದು, ಸಮಾಜವನ್ನು ಅಭಿವೃದ್ಧಿಯ ಕಡೆಗೆ ತೆಗೆದುಕೊಂಡು ಹೋಗಿ ಎಂದು ಕಿವಿ ಮಾತು ಹೇಳಿದರು.

ಭಾರತೀಯ ಸನಾತನ ಸಂಸ್ಕೃತಿಯಲ್ಲಿ ರುದ್ರಭೂಮಿಗಳಿಗೆ ವಿಶೇಷ ಸ್ಥಾನವಿದೆ. ಎಲ್ಲರೂ ಕೊನೆಗೆ ಒಂದು ದಿನ ಹೋಗಲೇಬೇಕು. ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿಯ ಅಧ್ಯಕ್ಷ ಟಿ.ಬಿ.ಶೇಖರ್, ಉಪಾಧ್ಯಕ್ಷ ಚಂದ್ರಮೌಳಿ ಅವರು ರುದ್ರಭೂಮಿ ಪ್ರಸ್ತಾಪ ಮಾಡಿದ್ದರ ಹಿನ್ನೆಲೆಯಲ್ಲಿ ಗಂಗಸಂದ್ರದ ಶಿಂಷಾ ನದಿಯ ದಡದಲ್ಲಿ ಸುಮಾರು 5 ಎಕರೆ ಜಾಗದಲ್ಲಿ ತಲೆ ಎತ್ತಿರುವ ವೀರಶೈವ- ಲಿಂಗಾಯಿತ ರುದ್ರಭೂಮಿ ನಿರ್ಮಾಣಗೊಂಡಿದೆ. ವೀರಶೈವರಿಗಲ್ಲದೆ ಬೇರೆ ಸಮುದಾಯಗಳಿಗೂ ಇದರ ಅಕ್ಕ ಪಕ್ಕದಲ್ಲಿ ಭೂಮಿ ನೀಡಲಾಗಿದೆ. ಇದರ ಸದ್ಬಳಕೆಯಾಗಬೇಕು ಎಂದು ಸಲಹೆ ನೀಡಿದರು.

ಗಡಿನಾಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ಮಾತನಾಡಿ, ಇಂದು ಲೋಕಾರ್ಪಣೆಗೊಂಡಿರುವ ವೀರಶೈವ- ಲಿಂಗಾಯಿತ ರುದ್ರಭೂಮಿಯ ಮಂಜೂರಾತಿಯ ಹಿಂದೆ ಸಂಸದ ಜಿ.ಎಸ್.ಬಸವ ರಾಜು ಅವರು ಶ್ರಮವಿದೆ. ತುಮಕೂರು ಜಿಲ್ಲೆಯ ಹಲವು ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಸಂಸದರ ನಿರಂತರ ಪ್ರಯತ್ನವಿದೆ. ಹುಟ್ಟಿದವನಿಗೆ ಸಾವು ನಿಶ್ಚಿತ, ಹುಟ್ಟು ಸಾವಿನ ನಡುವೆ ನಾಲ್ಕು ಜನರಿಗೆ ಅನುಕೂಲವಾಗುವಂತಹ ಕೆಲಸ ಮಾಡಿ ಜೀವನವನ್ನು ಸಾರ್ಥಕ ಪಡಿಸಿಕೊಳ್ಳೋಣ ಎಂದು ಸಲಹೆ ನೀಡಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿಯ ಅಧ್ಯಕ್ಷ ಟಿ.ಬಿ.ಶೇಖರ್, ಊರು ಬೆಳೆದು ಜನಸಂಖ್ಯೆ ಹೆಚ್ಚಾದಂತೆ ಈಗಿರುವ ರುದ್ರಭೂಮಿ ಕಿರಿದಾದ ಹಿನ್ನೆಲೆಯಲ್ಲಿ ಊರಿನ ಹೊರವಲಯದಲ್ಲಿ ದೊಡ್ಡದಾದ ರುದ್ರಭೂಮಿಯ ಅಗತ್ಯವಿತ್ತು. ಹಾಗಾಗಿ ಗಂಗಸಂದ್ರದಲ್ಲಿ ಸಂಸದ ಜಿ.ಎಸ್.ಬಸವರಾಜು, ಮಾಜಿ ಸಚಿವ ಸೊಗಡು ಶಿವಣ್ಣ ಅವರ ಸಹಕಾರದಿಂದ ಈ ಭೂಮಿ ಪಡೆದು ವೀರಶೈವ ರುದ್ರಭೂಮಿಗೆ ಚಾಲನೆ ನೀಡಲಾಯಿತು. ಸಂಸದರು, ಶಾಸಕರ ನಿಧಿ ಹಾಗೂ ಸಾರ್ವಜನಿಕರ ದೇಣಿಯಿಂದ ಇಂದು ಸುಸಜ್ಜಿತ ರುದ್ರಭೂಮಿ ತಲೆ ಎತ್ತಿದೆ. ಇಲ್ಲಿಗೆ ಬಂದವರಿಗೆ ಒಂದು ಆಹ್ಲಾದಕರ ವಾತಾವರಣ ನಿರ್ಮಾಣಕ್ಕೆ ರುದ್ರವನ, ಶ್ರೀಸಿದ್ದೇಶ್ವರ ಸ್ವಾಮಿ ದೇವಾಲಯ ಇದೆ ಎಂದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ತುಮಕೂರಿನಲ್ಲಿ 1902ರಲ್ಲಿ ವೀರಶೈವ- ಲಿಂಗಾಯಿತರ ರುದ್ರಭೂಮಿ ಇತ್ತು, 1957ರಲ್ಲಿ ಬನಶಂಕರಿಯಲ್ಲಿ ಒಂದು ರುದ್ರಭೂಮಿ ಆರಂಭವಾಯಿತು, ಪ್ರಸ್ತುತ ಗಂಗಸಂದ್ರದಲ್ಲಿ ರುದ್ರಭೂಮಿ ಆರಂಭಗೊಂಡಿದೆ. ಇದು ವೀರಶೈವ ಸಮಾಜದ ದೂರದೃಷ್ಟಿಯ ಫಲ, ಇದು ಸ್ಮಶಾನವಲ್ಲ, ಜೋರ್ತಿಲಿಂಗ, ಭಾರತೀಯರಲ್ಲಿ ರುದ್ರಭೂಮಿ ಎಂದರೆ ಪೈಶಾಚಿಕ ಶಕ್ತಿಗಳು ಇರುವ ಜಾಗ ಎಂಬಕಲ್ಪನೆ ಇದೆ. ಆದರೆ ವಿದೇಶಿಯರಲ್ಲಿ ಆ ಭಾವನೆ ಇಲ್ಲ, ಅಲ್ಲಿ ರುದ್ರಭೂಮಿಗಳನ್ನು ರುದ್ರವನಗಳಾಗಿ ಅಭಿವೃದ್ಧಿ ಪಡಿಸಿ, ಆಹ್ಲಾದಕರ ವಾತಾವರಣ ನಿರ್ಮಾಣ ಮಾಡಿರುತ್ತಾರೆ. ಅದೇ ಪರಿಕಲ್ಪನೆಯಲ್ಲಿ ಇದನ್ನು ನಿರ್ಮಿಸಲಾಗಿದೆ. ಪ್ರತಿಯೊಬ್ಬರು ಇಲ್ಲಿಗೆ ಬರಲೇಬೇಕು, ಯಾವುದೆ ಗೊಂದಲವಿಲ್ಲದೆ ಇದನ್ನು ಬಳಕೆ ಮಾಡುವಂತಹ ವಾತಾವರಣ ನಿರ್ಮಾಣವಾಗಲಿದೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ವಿವಿಧ ಧಾರ್ಮಿಕ ವಿಧಿ ವಿಧಾನಗಳು, ಪೂಜಾ ಕೈಂಕರ್ಯ ನೆರವೇರಿದವು, ವೇದಿಕೆಯಲ್ಲಿ ಶಾಸಕ ಜಿ.ಬಿ.ಜೋತಿಗಣೇಶ್, ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಟಿ.ಬಿ.ಶೇಖರ್, ಉಪಾಧ್ಯಕ್ಷ ಚಂದ್ರಮೌಳಿ, ಮುಖಂಡರಾದ ಸಿ.ವಿ.ಮಹದೇವಯ್ಯ, ಕೆ.ಜೆ.ರುದ್ರಪ್ಪ, ಮೋಹನ್ ಕುಮಾರ್ ಪಟೇಲ್, ಎಸ್.ಎಂ.ರಾಜು, ವೀಣಾ, ಕೋರಿ ಮಂಜುನಾಥ್, ಭಸ್ಮಾಂಗಿ ರುದ್ರಯ್ಯ, ಓಹಿಲೇಶ್ವರ್, ಪಾಲಿಕೆ ಸದಸ್ಯರಾದ ಮಂಜುಳ ಆದರ್ಶ, ಮಹೇಶ್, ದೀಪಶ್ರೀ ಮಹೇಶ್ ಸೇರಿದಂತೆ ಸಮಾಜದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ನಿದೇರ್ಶಕರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!