ತುಮಕೂರು: ಉತ್ತಮ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ಪ್ರತಿದಿನ ಸೈಕಲ್ ಬಳಕೆಯಂತಹ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿವತಿಯಿಂದ ರಾಷ್ಟ್ರೀಯ ಅಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಮತ್ತು 6ನಿಯಂತ್ರಣ ಕಾರ್ಯಕ್ರಮ (ಎನ್.ಪಿ-ಎನ್.ಸಿ.ಡಿ) ದಡಿಯಲ್ಲಿ “ವಿಶ್ವ ಬೈಸಿಕಲ್ ದಿನಾಚಾರಣೆ ಅಂಗವಾಗಿ ಆರೋಗ್ಯಕ್ಕಾಗಿ ಸೈಕಲ್ ” ಎಂಬ ಘೋಷ ವಾಕ್ಯದೊಂದಿಗೆ ಆಯೋಜಿಸಿದ್ದ ಸೈಕಲ್ಥಾನ್ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ದೇಹದ ವ್ಯಾಯಾಮಕ್ಕೆ ಸೈಕಲ್ ತುಳಿಯುವುದಕ್ಕಿಂತ ಮಿಗಿಲಾದ ಚಟುವಟಿಕೆ ಇನ್ನೊಂದಿಲ್ಲ. ದೈಹಿಕ ಮತ್ತು ಮಾನಸಿಕ ಆರೋಗ್ಯದ ದೃಷ್ಟಿಯಿಂದ ಸೈಕ್ಲಿಂಗ್ ಅತ್ಯಂತ ಪರಿಣಾಮಕಾರಿ ವ್ಯಾಯಾಮ ಎನ್ನುವುದು ಹಲವಾರು ಅಧ್ಯಯನಗಳಿಂದ ಸಾಬೀತಾಗಿದೆ. ಪ್ರಸ್ತುತ ದಿನಗಳಲ್ಲಿ ಸೈಕಲ್ಗಳು ಮೂಲೆ ಸೇರಿವೆ, ನಡೆಯಲು ಹಿಂದೇಟು ಹಾಕುತ್ತಿದ್ದೇವೆ. ದ್ವಿಚಕ್ರ ವಾಹನ ಮತ್ತು ನಾಲ್ಕು ಚಕ್ರದ ವಾಹನಗಳನ್ನ ಆತಿ ಹೆಚ್ಚಾಗಿ ಅವಲಂಬಿಸಿದ್ದೇವೆ, ಬೇರೆ ವಾಹನಗಳಂತೆ ಸೈಕಲ್ ಮಾಲಿನ್ಯವುಂಟುಮಾಡುವುದಿಲ್ಲ. ಹಾಗಾಗಿ ಪರಿಸರ ಕಾಳಜಿಗೆ ಉತ್ತಮ ಆಯ್ಕೆಯಾಗಿದೆ, ಸೈಕ್ಲಿಂಗ್ ಹೃದಯ ರಕ್ತನಾಳದ ಫಿಟ್ನೆಸ್, ಸ್ನಾಯು ಬಲ ಸುಧಾರಿಸುತ್ತದೆ. ಆರೋಗ್ಯಕರ ಜೀವನಕ್ಕೆ ಕೊಡುಗೆ ನೀಡುತ್ತದೆ. ನೀವು ಸೈಕಲ್ ತುಳಿಯುವಾಗ, ನಿಮ್ಮ ದೈಹಿಕ ಸಾಮರ್ಥ್ಯ ಹೆಚ್ಚಾಗುತ್ತದೆ. ಪ್ರತಿನಿತ್ಯ ಸೈಕಲ್ ತುಳಿಯುವುದರಿಂದ ನಾವು ಹಲವಾರು ಮಾರಕ ಕಾಯಿಲೆಗಳಿಂದ ದೂರವುಳಿಯಬಹುದಲ್ಲದೆ ಶಾರೀರಿಕ ವಾಗಿಯೂ ಸದೃಢರಾಗಿರಲು ಸಾಧ್ಯ. ಹೀಗಾಗಿ ವಿಧ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರು ದೈನಂದಿನ ಚಟುವಟಿಕೆಗಳಲ್ಲಿ ಸೈಕಲ್ ಬಳಸುವಂತೆ ಅವರು ಕರೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್ ಮಾತನಾಡಿ ಆಧುನಿಕ ಜಗತ್ತಿನಲ್ಲಿ ಬಿಡುವಿಲ್ಲದ ಕೆಲಸ, ದೈಹಿಕ ಕಾರ್ಯಚಟುವಟಿಕೆಗಳ ಉದಾಶೀನತೆಯಿಂದಾಗಿ ಅನೇಕರು ಅನಾರೋಗ್ಯಕ್ಕೆ ಬಲಿಯಾಗುತ್ತಿದ್ದಾರೆ. ದೇಶದಲ್ಲಿ ಅಸಾಂಕ್ರಾಮಿಕ ರೋಗಗಳಿಂದ ಶೇ೭೪ರಷ್ಟು ಮರಣ ಸಂಭವಿಸುತ್ತಿದೆ ನಮ್ಮ ಪೂರ್ವಿಕರು ದೈಹಿಕವಾಗಿ ಶ್ರಮಪಡುತ್ತಿದ್ದರು. ಉತ್ತಮ ಗುಣಮಟ್ಟದ ಆಹಾರವನ್ನು ಸೇವಿಸುತ್ತಿದ್ದರು. ಆದರೆ ಅಂದಿನ ದಿನಗಳಲ್ಲಿ ಇವೆಲ್ಲವೂ ಕಡಿಮೆಯಾಗುತ್ತಿರುವುದರಿಂದ ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳಂತಹ ಅಸಾಂಕ್ರಾಮಿಕ ಕಾಯಿಲೆಗಳು ಎಲ್ಲರನ್ನೂ ಆವರಿಸುತ್ತಿದೆ. ಆರೋಗ್ಯ ಇಲಾಖೆಯಿಂದ ಸೈಕಲ್ ಜಾಥಾ ಸಂಘಟಿಸುವ ಮೂಲಕ ಸೈಕಲ್ ಬಳಕೆಯ ಪ್ರಯೋಜನಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.
ಅಸಾಂಕ್ರಾಮಿಕ ರೋಗಗಳ ಪತ್ತೆ ಮತ್ತು ಚಿಕಿತ್ಸೆಗಾಗಿ ಜಿಲ್ಲೆಯಲ್ಲಿ ಪ್ರತ್ಯೇಕ ೧೪ ಅಸಾಂಕ್ರಾಮಿಕ ಘಟಕಗಳಿವೆ. ಎಲ್ಲಾ ಘಟಕಗಳಲ್ಲಿಯೂ ವೈದ್ಯರು, ಸಿಬ್ಬಂದಿಗಳಿದ್ದಾರೆ. ಈ ಜಿಲ್ಲೆಯ ತಾಲ್ಲೂಕು ಆಸ್ಪತ್ರೆಗಳಲ್ಲಿ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಎನ್.ಸಿ.ಡಿ. ಕ್ಲೀನಿಕ್ ಸ್ಥಾಪಿಸಲಾಗಿದೆ. ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು, ಕ್ಯಾನ್ಸರ್ ಸ್ಕ್ರೀನಿಂಗ್, ಪಾರ್ಶುವಾಯು ರೋಗಗಳ ಪತ್ತೆ ಮತ್ತು ಚಿಕಿತ್ಸೆ ಮಾಡಲಾಗುತ್ತದೆ. ೩೦ ವರ್ಷ ಮೇಲ್ಪಟ್ಟ ಎಲ್ಲರೂ ಎನ್.ಸಿ.ಡಿ ಘಟಕದಲ್ಲಿ ಚಿಕಿತ್ಸೆ ಪಡೆಯಬಹುದಾಗಿದ್ದು, ಆರೋಗ್ಯ ಇಲಾಖೆಯಿಂದ ಸೈಕಲ್ ಜಾಥಾ ಸಂಘಟಿಸುವ ಮೂಲಕ ಜನಸಾಮಾನ್ಯರಿಗೆ ಸೈಕಲ್ ಬಳಕೆಯ ಪ್ರಯೋಜನಗಳನ್ನು ಮನವರಿಕೆ ಮಾಡಲು ಪ್ರಯತ್ನಿಸಲಾಗುತ್ತದೆ ಎಂದು ಕಾರ್ಯಕ್ರಮ ಸಂಘಟಕರಾದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮೋಹನ್ ದಾಸ್ ಹೇಳಿದರು.
ಸ್ಯೆಕಲ್ಥಾನ್ ಮೂಲಕ ಸಾರ್ವಜನಿಕರ ಅರಿವು: ಈ ಜಾಗೃತಿ ಕಾರ್ಯಕ್ರಮವು ಜಿಲ್ಲಾ ಪಂಚಾಯತ್ ಕಚೇರಿಯಿಂದ ಪ್ರಾರಂಭಗೊಂಡು ಅಮಾನಿಕೆರೆ ರಸ್ತೆ ಮಾರ್ಗವಾಗಿ ತೆರಳಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಛೇರಿ ಬಳಿ ಮುಕ್ತಾಯಗೊಂಡಿತು. ಈ ಸಂಧರ್ಭದಲ್ಲಿ “ವಿಶ್ವ ಬೈಸಿಕಲ್ ದಿನಾಚಾರಣೆ ಅಂಗವಾಗಿ ಅಸಾಂಕ್ರಾಮಿಕ ರೋಗಗಳ ಪ್ರಮುಖ ಅಪಾಯಕಾರಿ ಅಂಶಗಳಾದ ಅಹಿತಕರ ಆಹಾರಪದ್ಧತಿ, ದೈಹಿಕ ಶ್ರಮ ಇಲ್ಲದಿರುವುದು, ಮದ್ಯಪಾನ ಹಾಗೂ ತಂಬಾಕು ಸೇವನೆ ಮತ್ತು ಅನಿಯಮಿತ ಹಾಗೂ ಅನಾರೋಗ್ಯಕರ ಜೀವನಶೈಲಿ ಮತ್ತು ವಾಯು ಮಾಲಿನ್ಯದ ದುಷ್ಪರಿನಾಮಗಳ ಕುರಿತು ಸೈಕಲಥಾನ್ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ವಿವಿಧ ಅಧಿಕಾರಿಗಳು, ಸಿಬ್ಬಂದಿಗಳ, ಶಾಲಾ-ಕಾಲೇಜು ವಿಧ್ಯಾರ್ಥಿಗಳು, ಮೊದಲಾದವರು ಸ್ಯೆಕಲ್ ಥಾನ್ ಪಾಲ್ಗೊಂಡಿದ್ದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರವಿಶಂಕರ್, ಬಿಷಪ್ ಸರ್ಜೆಂಟ್ ಶಾಲೆಯ ಉಪನ್ಯಾಸಕ ಅನಿಲ್, ಜಿಲ್ಲಾ ಎನ್ ಸಿಡಿ ಕಾರ್ಯಕ್ರಮ ಸಂಯೋಜಕ ನಾಗರಾಜ್ ಪಾಟೀಲ್, ಜಿಲ್ಲಾ ಆರ್ಥಿಕ ಸಲಹೆಗಾರ ರಾಕೇಶ್ ಪಿ, ಜಿಲ್ಲಾ ಸಂಯೋಜಕರು ತಂಬಾಕು ನಿಯಂತ್ರಣ ಘಟಕದ ರವಿಪ್ರಕಾಶ, ಸಮಾಜ ಕಾರ್ಯಕರ್ತ ಹರೀಶ್, ಎನ್ ಟಸಿಪಿ ವಿಭಾಗದ ಜಯಣ್ಣ, ಜಿಲ್ಲಾ ಆಸ್ಪತ್ರೆಯ ಎನ್ ಸಿಡಿ ವಿಭಾಗ ಅಪ್ಪ ಸಮಾಲೋಚಕ ಗುರುಪ್ರಸಾದ್, ಜಿಲ್ಲಾ ಆಸ್ಪತ್ರೆ ಭೌತ ಚಿಕಿತ್ಸಕ ನರೇಶ್, ಎನ್ ಸಿಸಿ ಅಧಿಕಾರಿ ಬಣಪ್ಪರಡ್ಡಿ, ಡಾ. ಗವಾಯಿ ಪಟೇಲ್, ಸೇರಿದಂತೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.
Comments are closed.