ಮೋದಿ ಸರ್ಕಾರ ಜಿಲ್ಲೆಗೆ ಹಲವು ಯೋಜನೆ ನೀಡಿದೆ

ಪ್ರಧಾನಿ ಮಂತ್ರಿಯಾಗಿ ನರೇಂದ್ರ ಮೋದಿ 9 ವರ್ಷ ಪೂರೈಕೆ: ಸಂಸದ ಜಿಎಸ್ ಬಿ

224

Get real time updates directly on you device, subscribe now.


ತುಮಕೂರು: ಪ್ರಧಾನಿ ಮಂತ್ರಿಯಾಗಿ ನರೇಂದ್ರ ಮೋದಿ ಶನಿವಾರ 9 ವರ್ಷ ಪೂರೈಸಿದ್ದು, ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮೇಘಾ ಪುಡ್ ಪಾರ್ಕ್, ಹೆಚ್ ಎಎಲ್, ಇಸ್ರೋ ಸೇರಿದಂತೆ ಹಲವಾರು ಮಹತ್ವದ ಕೆಲಸ ಆಗಿವೆ ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೀರಾವರಿ, ಕೃಷಿ, ತೋಟಗಾರಿಕೆ, ಕೈಗಾರಿಕೆ ಸೇರಿದಂತೆ ಎಲ್ಲಾ ವಿಧದಲ್ಲಿಯೂ ಜಿಲ್ಲೆ ಅಭಿವೃದ್ಧಿ ಕಂಡಿದೆ. ಜಿಲ್ಲೆಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವು ಯೋಜನೆ ನೀಡಿದೆ ಎಂದರು.

ಆರ್ಥಿಕ ತಜ್ಞ ನಂಜುಂಡಪ್ಪ ವರದಿ ಅನ್ವಯ ತುಮಕೂರು ಜಿಲ್ಲೆಯ 8 ತಾಲೂಕುಗಳು ಅತಿ ಹಿಂದುಳಿದ ತಾಲೂಕುಗಳಾಗಿದ್ದವು. ಆದರೆ ಕಳೆದ 9 ವರ್ಷಗಳಲ್ಲಿ ಮೋದಿಯ ದೂರದೃಷ್ಟಿ ಯೋಜನೆಗಳ ಫಲವಾಗಿ ಎಲ್ಲಾ ತಾಲೂಕುಗಳು ಮುಂದುವರೆದಿವೆ. ಮಿಷನ್ ಅಮೃತ ಸರೋವರ, ಅಟಲ್ ಭೂ ಜಲ ಯೋಜನೆಯ ಮೂಲಕ ಕೆರೆಗಳಲ್ಲಿದ್ದ ಹೂಳು ಎತ್ತಿ ಎಲ್ಲಾ ಕೆರೆಗಳಿಗೆ ಅಂತರ್ಜಲ ವೃದ್ಧಿಯಾಗುವಂತೆ ಮಾಡಲಾಗಿದೆ. ಇದರ ಜೊತೆಗೆ ಭದ್ರ ಮೇಲ್ದಂಡೆ ಯೋಜನೆಗೆ 5000 ಕ್ಕೂ ಹೆಚ್ಚು ಕೋಟಿ ಅನುದಾನ ನೀಡಲಾಗಿದೆ. ಇದರ ಭಾಗವಾಗಿ ಜಿಲ್ಲೆಯಲ್ಲಿ ಜಲ ಸಂಮೃದ್ದಿ ಹೆಚ್ಚಾಗಿ, ರೈತರು ಕೃಷಿ ಮಾಡಿ ಸಮೃದ್ದಿಯ ಜೀವನ ನಡೆಸುತಿದ್ದಾರೆ ಎಂದು ಜಿ.ಎಸ್.ಬಸವರಾಜು ನುಡಿದರು.

ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಸಿರಿಧಾನ್ಯ ಕೃಷಿಗೆ ಉತ್ತೇಜನ ನೀಡಲು ಪ್ರತಿ ಹೆಕ್ಟೇರ್ ಗೆ 10 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಅಲ್ಲದೆ ತೋಟಗಾರಿಕೆ ಇಲಾಖೆಯ ಒಂದು ಜಿಲ್ಲೆ, ಒಂದು ಉತ್ಪನ್ನದಲ್ಲಿ ತೆಂಗು ಆಯ್ಕೆಯಾಗಿದ್ದು, ಮೌಲ್ಯವರ್ಧಿತ ತೆಂಗಿನ ಉತ್ಪನ್ನಗಳು ಹೇರಳವಾಗಿವೆ. ಕೃಷಿ ಸಂಶೋಧನಾ ಸಂಸ್ಥೆ ಹಿರೇಹಳ್ಳಿಯ ಮೂಲಕ ಕೇಂದ್ರದ ಎಂಡಿಐ ಯೋಜನೆಯಡಿ ಡ್ಯಾಗ್ರನ್ ಪ್ರೂಟ್ ಗೆ ಸಂಬಂಧಿಸಿದ ಸೆಂಟರ್ ಅಫ್ ಎಕ್ಸಲೆನ್ಸ್ ಸ್ಥಾಪಿಸಲು ಅನುಮೋದನೆ ದೊರೆತಿರುವುದು ಸಂತೋಷದ ವಿಚಾರವಾಗಿದೆ ಎಂದರು.
ಜಿಲ್ಲೆಯಲ್ಲಿ ಕಳೆದ 9 ವರ್ಷಗಳಲ್ಲಿ ಕೈಗಾರಿಕೆಗೆ ಹೆಚ್ಚು ಒತ್ತು ನೀಡಲಾಗಿದ್ದು, ಬೆಂಗಳೂರು- ಮುಂಬೈ ಎಕನಾಮಿಕ್ಸ್ ಇಂಡಸ್ಟ್ರೀಯಲ್ ಕಾರಿಡಾರ್ ಗೆ ಕೇಂದ್ರ ಸರಕಾರ ಒಪ್ಪಿದ್ದು, ಮುಂದೊಂದು ದಿನ ವಸಂತನರಸಾಪುರ ಕೈಗಾರಿಕಾ ವಸಾಹತು ಮತ್ತೊಂದು ಗ್ರೇಟರ್ ನೋಯಿಡಾ ಆಗುವ ಎಲ್ಲಾ ಲಕ್ಷಣ ಹೊಂದಿದೆ. ಕಳೆದ ಫೆಬ್ರವರಿಯಲ್ಲಿ ಲೋಕಾರ್ಪಣೆಗೊಂಡ ಹೆಚ್ಎಎಲ್ ಬಹು ಉಪಯೋಗಿ ಲಘು ಹೆಲಿಕ್ಯಾಪ್ಟರ್ ಘಟಕದಿಂದ ತುಮಕೂರು ಜಿಲ್ಲೆ ವಿಶ್ವ ಭೂಪಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ಅಲ್ಲದೆ ಹಳೆಯ ಹೆಚ್ಎಂಟಿ ಜಾಗದಲ್ಲಿ ಇರುವ ಇಸ್ರೋ ಘಟಕದಿಂದ ರಾಕೆಟ್ ಉಡಾವಣೆಗೆ ಬೇಕಾದ ಬಿಡಿ ಭಾಗಗಳ ಉತ್ಪಾದನಾ ಘಟಕ ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ ಎಂದರು.

ತುಮಕೂರು- ದಾವಣಗೆರೆ, ತುಮಕೂರು ರಾಯದುರ್ಗ ರೈಲ್ವೆ ಲೈನ್ ಗಳ ಜೊತೆಗೆ, ತುಮಕೂರು, ಕುಣಿಗಲ್, ಮದ್ದೂರು, ಚಾಮರಾಜನಗರ ಹೊಸ ರೈಲು ಮಾರ್ಗದ ಸರ್ವೆ ಕಾರ್ಯಸಹ ನಡೆದಿದೆ. ಚಳ್ಳಕೆರೆ, ಹಿರಿಯೂರು, ಚಿ.ನಾ.ಹಳ್ಳಿ, ತುರುವೇಕೆರೆ, ಚನ್ನರಾಯ ಪಟ್ಟಣ ಹೊಸ ರೈಲು ಮಾರ್ಗಕ್ಕೆ ಒಪ್ಪಿಗೆ ದೊರೆತಿದೆ. ತುಮಕೂರು ಜಿಲ್ಲೆಗೆ ಜಲಜೀವನ್ ಮೀಷನ್ ಯೋಜನೆ, 100 ಹಾಸಿಗೆಗಳ ಇಎಸ್ಐ ಆಸ್ಪತ್ರೆಯ ಮಂಜೂರಾತಿ, ಈ ಎಲ್ಲಾ ಯೋಜನೆಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಸಹಕಾರವಿದೆ ಎಂದರು.

ಗ್ಯಾರಂಟಿಗಳು ಜನರಿಗೆ ಉಪಯೋಗವಾಗಲ್ಲ
ರಾಜ್ಯದ ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳಿಂದ ಜನ ಸಾಮಾನ್ಯರಿಗೆ ಯಾವುದೇ ಉಪಯೋಗವಾಗದು. ಇದು ಕೇವಲ ಕಣ್ಣೊರೆಸೋ ತಂತ್ರ, ಇದರಿಂದ ಆರ್ಥಿಕ ಹೊರೆ ಹೆಚ್ಚಾಗಲಿದೆ. ಕೆಲಸಕ್ಕೆ ಜನರಿಲ್ಲದಂತಾಗುತ್ತದೆ. ನಿರುದ್ಯೋಗ ಭತ್ಯೆಯಿಂದ ಯುವ ಜನರಿಗೆ ಉದ್ಯೋಗ ಹುಡುಕುವ ಕಾತುರತೆ ಇಲ್ಲದಂತಾಗಿದೆ. ಹಣಕ್ಕಾಗಿ ಯಾರ ತಲೆ ಬೋಳಿಸುತ್ತಾರೆ ನೋಡಬೇಕಿದೆ ಎಂದು ಸಂಸದ ಜಿ.ಎಸ್.ಬಸವರಾಜು ವ್ಯಂಗವಾಡಿದರು.

ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಮುಂದಿನ ಬಾರಿ ಸೋಮಣ್ಣ ಅಭ್ಯರ್ಥಿಯಾಗುತ್ತಾರೆ ಎಂದು ಹೇಳಿಲ್ಲ. ಪತ್ರಿಕೆಯೊಂದರಲ್ಲಿ ಬಂದ ವರದಿಯನ್ನಷ್ಟೇ ಉಲ್ಲೇಖಿಸಿದ್ದೇನೆ. ನನ್ನ ನಂತರ ಯಾರು ಎಂದು ಹೇಳುವ ಹಕ್ಕು ನನಗಿಲ್ಲ. ಅದು ಪಕ್ಷದ ಹೈಕಮಾಂಡ್ ತೀರ್ಮಾನ, ನನ್ನ ಅಭಿಪ್ರಾಯ ಕೇಳಿದರೆ ಹೇಳುತ್ತೇನೆ ಎಂದು ಮುಂದಿನ ಎಂಪಿ ಅಭ್ಯರ್ಥಿ ವಿ.ಎಸ್.ಸೋಮಣ್ಣ ಎಂಬ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಚ್.ಎಸ್.ರವಿಶಂಕರ್, ಮುಖಂಡರಾದ ಎಸ್.ಪಿ.ಚಿದಾನಂದ್, ಮಾಧ್ಯಮ ಪ್ರಮುಖ ಟಿ.ಆರ್.ಸದಾಶಿವಯ್ಯ, ಸಹ ಪ್ರಮುಖ ಜೈ.ಜಗದೀಶ್ ಇದ್ದರು.

Get real time updates directly on you device, subscribe now.

Comments are closed.

error: Content is protected !!