ಗಿಡಗಳ ಪೋಷಣೆಗೆ ನಿರ್ಲಕ್ಷ್ಯಕ್ಕೆ ಆಕ್ರೋಶ

175

Get real time updates directly on you device, subscribe now.


ಕುಣಿಗಲ್: ಪುರಸಭೆ ವ್ಯಾಪ್ತಿಯಲ್ಲಿ ಪರಿಸರ ರಕ್ಷಣೆ ಹಾಗೂ ಪಟ್ಟಣದ ಸೌಂದರ್ಯ ವೃದ್ಧಿಗೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕೈಗೊಂಡ ಕಾಮಗಾರಿಯು ಕಾಮಗಾರಿ ಕೈಗೊಂಡ ಒಂದುವರೆ ವರ್ಷದೊಳಗೆ ಮಣ್ಣು ಪಾಲಾಗಿದ್ದು ಈ ಯೋಜನೆ ರೂಪಿಸಿದ ಅಧಿಕಾರಿಗಳಿಂದಲೇ ಕಾಮಗಾರಿ ಹಣ ವಸೂಲು ಮಾಡಬೇಕೆಂದು ತಾಲೂಕು ಕನ್ನಡಸೇನೆ ಅಧ್ಯಕ್ಷ ಶ್ರೀನಿವಾಸ್ ಆಗ್ರಹಿಸಿದ್ದಾರೆ.

ಪುರಸಭೆಯ ವ್ಯಾಪ್ತಿಯಲ್ಲಿ ಪಟ್ಟಣದ ಹೃದಯ ಭಾಗದಲ್ಲಿ ಸುಮಾರು ನಾಲ್ಕು ಕಿ.ಮೀ ಹಳೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ಹೆದ್ದಾರಿ ಅಭಿವೃದ್ಧಿ ವೇಳೆ ರಸ್ತೆ ಮಧ್ಯಭಾಗದಲ್ಲಿ ವಿಭಜಕ ಆಳವಡಿಸಿದ್ದು, ನಗರ ಸೌಂದರ್ಯ ವೃದ್ಧಿಗೆ ಮೂರು ವರ್ಷದ ಕೆಳಗೆ ತಾಲೂಕು ಜೆಡಿಎಸ್ ಅಧ್ಯಕ್ಷ ಜಗದೀಶ್ ಕಣಗಲೆ ಗಿಡಹಾಕಿ ಪೋಷಿಸಿದ ಪರಿಣಾಮ ಇಂದು ಅವು ಸಮೃದ್ದವಾಗಿ ಬೆಳೆದು ಹೂ ಬಿಡುವ ಜೊತೆ ಹಾಕಿದ ಉದ್ದೇಶ ಸಾರ್ಥಕವಾಗಿದೆ. ಆದರೆ ಪುರಸಭೆ ವತಿಯಿಂದ ಒಂದುವರೆ ವರ್ಷದ ಕೆಳಗೆ ಸುಮಾರು ಐದು ಲಕ್ಷ ರೂ. ವೆಚ್ಚದಲ್ಲಿ ನಗರದ ಸೌಂದರ್ಯಕರಣ ವೃದ್ಧಿಗೆ ಎಂದು ಆಕರ್ಷಕ ಮರಗಳನ್ನು ಕಣಗಲೆ ಗಿಡಗಳ ಮಧ್ಯೆ ಹಾಕಲಾಯಿತು.
ಆದರೆ ಕಾಲ ಕ್ರಮೇಣ ಅವುಗಳ ನಿರ್ವಹಣೆ ಮಾಡದೆ ಪುರಸಭೆ ಜನರ ತೆರಿಗೆ ಹಣ ಐದು ಲಕ್ಷ ರೂ. ವೆಚ್ಚ ಮಾಡಿ ಹಾಕಿದ ಅಲಂಕಾರಿಕ ಗಿಡಗಳ ಪೈಕಿ ಬಹುತೇಕ ಮಣ್ಣು ಪಾಲಾದರೆ ಮತ್ತೆ ಕೆಲವು ರಸ್ತೆ ಕಡೆ ಬಾಗಿ ವಾಹನಗಳಿಗೆ ಸಿಕ್ಕು ನಲುಗುತ್ತಿವೆ. ಪುರಸಭೆಯಲ್ಲಿ ಪರಿಸರ ನಿರ್ವಹಣೆಗೆ ಪರಿಸರ ಅಭಿಯಂತರರು ಸೇರಿದಂತೆ ಹಲವಾರು ಸಿಬ್ಬಂದಿಯಿದ್ದರೂ ರಸ್ತೆ ಮಧ್ಯದಲ್ಲಿ ನಗರದ ನಾಗರಿಕರ ತೆರಿಗೆ ಹಣದಿಂದ ಹಾಕಲಾಗಿರುವ ಗಿಡಗಳ ಆರೈಕೆಗೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ಜನರ ಹಣ ಅನಗತ್ಯ ಪೋಲಾಗುವಂತಾಗಿದೆ. ಕಾಮಗಾರಿ ಕೈಗೊಂಡು ಒಂದುವರೆ ವರ್ಷಕ್ಕೆ ಲಕ್ಷಾಂತರ ರೂ. ಪೋಲಾಗಿದೆ. ಇಲಾಖೆಯ ಮೇಲಾಧಿಕಾರಿಗಳು ಇಂತಹ ಅವೈಜ್ಞಾನಿಕ ಕಾಮಗಾರಿಗೆ ಕಾರಣವಾದ ಅಧಿಕಾರಿಗಳಿಂದಲೆ ವೆಚ್ಚವಾದ ಹಣ ವಸೂಲು ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಪುರಸಭೆಯಲ್ಲಿ ನಾಗರಿಕರ ತೆರಿಗೆ ಹಣ ಸದ್ಬಳಕೆ ಆಗುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!