ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ: ನ್ಯಾ.ಗೀತಾ

157

Get real time updates directly on you device, subscribe now.


ತುಮಕೂರು: ಮುಂದಿನ ಪೀಳಿಗೆಗಾಗಿ ಪರಿಸರ ಸಂರಕ್ಷಣೆ ಮಾಡುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಪ್ಲಾಸ್ಟಿಕ್ ಬಳಕೆಯನ್ನು ಎಲ್ಲರೂ ತ್ಯಜಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಗೀತಾ ಕೆ.ಬಿ. ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಚೇರಿ ಹಾಗೂ ತುಮಕೂರು ವಿಶ್ವವಿದ್ಯಾಲಯ ಸಹಯೋಗದಲ್ಲಿ ತುಮಕೂರು ವಿವಿಯ ವಿಜ್ಞಾನ ಕಾಲೇಜಿನ ಸರ್ ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ಲಾಸ್ಟಿಕ್ ಮಾಲಿನ್ಯವನ್ನು ಹಿಮ್ಮೆಟ್ಟೋಣ ಎಂಬುದು ಈ ವರ್ಷದ ಧ್ಯೇಯವಾಗಿದ್ದು, ಪ್ಲಾಸ್ಟಿಕ್ ತ್ಯಾಜ್ಯಗಳು ಜಲಚರ ಹಾಗೂ ಮೂಕ ಪ್ರಾಣಿಗಳಿಗೆ ಮಾರಕವಾಗಿವೆ. ನಾವು ಆಹಾರ ತಿಂದು ಬಿಸಾಡುವ ಪ್ಲಾಸ್ಟಿಕ್ ಚೀಲಗಳಲ್ಲಿ ಸ್ವಲ್ಪ ಆಹಾರವು ಸಾಮಾನ್ಯವಾಗಿ ಉಳಿದಿರುತ್ತದೆ. ಇಂತಹ ಆಹಾರ ತಿನ್ನುವ ಮೂಕ ಪ್ರಾಣಿಗಳು ಆಹಾರದ ಜೊತೆಗೆ ಪ್ಲಾಸ್ಟಿಕ್ ಸೇವಿಸುತ್ತವೆ. ಪ್ಲಾಸ್ಟಿಕ್ 250 ವರ್ಷಗಳು ಮಾರ್ಪಾಡಾಗುವುದಿಲ್ಲ. ಪುನರ್ ಬಳಕೆಯಂತ ಪ್ಲಾಸ್ಟಿಕ್ ವಸ್ತುಗಳನ್ನು ಮರುಬಳಕೆ ಮಾಡಬೇಕು. ಪ್ಲಾಸ್ಟಿಕ್ ನಿಂದ ಹಲವಾರು ಹಾನಿಗಳುಂಟಾಗುತ್ತಿದ್ದು, ಒಂದು ಬಾರಿ ಬಳಸುವಂತಹ ಪ್ಲಾಸ್ಟಿಕ್ ಗಳನ್ನು ಎಲ್ಲರೂ ತ್ಯಜಿಸಬೇಕೆಂದು ಕರೆ ನೀಡಿದರು.

ಗಿಡ ಮರಗಳನ್ನು ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇಂದು ದೃಢ ಸಂಕಲ್ಪ ಮಾಡಿ ಕನಿಷ್ಠ ಒಂದು ಕುಟುಂಬದಿಂದ ಒಂದು ಗಿಡ ನೆಟ್ಟು ಬೆಳೆಸಬೇಕು. ಎಲ್ಲಾ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಪರಿಸರ ರಕ್ಷಣೆಗೆ ಸಮಯ ಮೀಸಲಿಟ್ಟು ಮಾದರಿಯಾಗಬೇಕು. ಅಭಿವೃದ್ಧಿ ಹೆಸರಿನಲ್ಲಿ ಗಿಡಮರ ಕಡಿಯಲಾಗುತ್ತಿದೆ. ನಮ್ಮ ಅಭಿವೃದ್ಧಿ ಚಿಂತನೆ, ಬದುಕಿನ ಶೈಲಿ, ಹವ್ಯಾಸ ಬದಲಾಗಬೇಕು. ನಾವು ಪರಿಸರ ಪ್ರಿಯರಾಗಿ ಬದುಕಿದರೆ ಮಾತ್ರ ಮುಂದಿನ ಭವಿಷ್ಯ ಸುಂದರವಾಗಿರುತ್ತದೆ ಎಂದು ಹೇಳಿದರು.

ತುಮಕೂರು ವಿವಿ ಕುಲಪತಿ ಶಿವಲಿಂಗ ಸ್ವಾಮಿ ಮಾತನಾಡಿ, ತುಮಕೂರು ಜಿಲ್ಲೆಯು ಹಲವಾರು ಪರಿಸರ ತಾಣ ಹೊಂದಿದ್ದು, ಪ್ರವಾಸಿಗರು ಈ ತಾಣಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಎಸೆಯಬಾರದು. ಪರಿಸರವನ್ನು ವಿರೂಪಗೊಳಿಸಬಾರದು. ಮುಂದಿನ ಪೀಳಿಗೆಗಾಗಿ ಪರಿಸರವು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ವಿದ್ಯಾರ್ಥಿಗಳು ಪರಿಸರ ಸಂರಕ್ಷಿಸುವ ಬಗ್ಗೆ ಕಾಳಜಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ತುಮಕೂರು ವಿವಿಯ ಆವರಣಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಟ್ಟು, ನೀರೆರೆಯಲಾಯಿತು. ವೇದಿಕೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ನೂರುನ್ನೀಸ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ, ಕುಲಸಚಿವೆ ನಾಹಿದಾ ಜಂ ಜಂ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ.ಹೆಚ್, ನ್ಯಾಯಾಧೀಶರಾದ ರಾಮಲಿಂಗೇಗೌಡ, ರೂಪ.ಕೆ. ಸೇರಿದಂತೆ ವಿವಿಧ ನ್ಯಾಯಾಧೀಶರು, ನ್ಯಾಯವಾದಿಗಳು, ತುಮಕೂರು ವಿವಿಯ ವಿದ್ಯಾರ್ಥಿ, ಸಿಬ್ಬಂದಿ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!