ಓದುಗರಿಗೆ ಗ್ರಂಥಾಲಯ ದೇಗುಲವಿದ್ದಂತೆ: ಜಿಎಸ್ ಬಿ

128

Get real time updates directly on you device, subscribe now.


ತುಮಕೂರು: ಸಂಸದರಾದ ಜಿ.ಎಸ್.ಬಸವರಾಜು ಅವರು ಜಿಲ್ಲಾ ಗ್ರಂಥಾಲಯಕ್ಕೆ ಅನಿರೀಕ್ಷಿತವಾಗಿ ಭೇಟಿ ನೀಡಿ, ನೂರಾರು ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಧ್ಯಯನ ಮಾಡುತ್ತಿರುವುದನ್ನು ವೀಕ್ಷಿಸಿ ಗ್ರಂಥಾಲಯ ಸದ್ಬಳಕೆಯಾಗುತ್ತಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಓದುಗರಿಗೆ ಗ್ರಂಥಾಲಯವು ದೇವಾಲಯವಾಗಿದ್ದು, ಗ್ರಂಥಾಲಯವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಇದು ನಮ್ಮ ಆಸ್ತಿ ಎಂಬ ಭಾವನೆ ಇರಬೇಕು. ದೇಶವನ್ನು ಉನ್ನತ ಮಟ್ಟದಲ್ಲಿ ಬದಲಾವಣೆ ಮಾಡುವ ಶಕ್ತಿ ಇದ್ದರೆ ಅದು ವಿದ್ಯಾರ್ಥಿಗಳಿಗೆ ಮಾತ್ರ, ಬಡತನದಲ್ಲಿಯೇ ಬೆಳೆದ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರು ಗ್ರಂಥಾಲಯದ ಪುಸ್ತಕಗಳನ್ನು ಓದಿಯೇ ಉನ್ನತ ವಿದ್ಯಾಭ್ಯಾಸ ಪಡೆದು ಸಂವಿಧಾನ ಶಿಲ್ಪಿಯಾದರು. ಅದೇ ರೀತಿ ವಿದ್ಯಾರ್ಥಿಗಳು ಜೀವನದಲ್ಲಿ ಬರುವ ಕಷ್ಟವನ್ನು ಧೈರ್ಯದಿಂದ ಎದುರಿಸಿ ಮುನ್ನುಗ್ಗಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯು ಗ್ರಂಥಾಲಯವನ್ನು ಸದುಪಯೋಗಪಡಿಸಿಕೊಂಡು ಅಭಿವೃದ್ಧಿಯಾದರೆ ಆ ಮೂಲಕ ದೇಶವೇ ಅಭಿವೃದ್ಧಿಯಾದಂತೆ ಎಂದು ಅಭಿಪ್ರಾಯಪಟ್ಟರು.

ರಾಜ್ಯ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ಮಾತನಾಡಿ, ಸಂಸದರು ಅರಣ್ಯ ಹಾಗೂ ಜಲಮೂಲಗಳ ಅಭಿವೃದ್ಧಿಗೆ ವಿಶೇಷ ಒತ್ತನ್ನು ನೀಡಿದ್ದಾರೆ. ದೇಶದಲ್ಲೇ ಮೊದಲ ಬಾರಿಗೆ ಜಲಗ್ರಾಮ ಎಂಬ ಯೋಜನೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ನಂತರ ಇದು ದೇಶದ ಯೋಜನೆಯಾಗಿ ಜಾರಿಗೆ ಬಂದಿದ್ದು, ಇದೇ ರೀತಿ ಗ್ರಾಮ ಒನ್ ರಾಜ್ಯದಲ್ಲಿ ಜಾರಿಯಾಗಲು ಸಂಸದರೇ ಮೂಲ ಕಾರಣಕರ್ತರಾಗಿದ್ದಾರೆ. ಜಿಲ್ಲೆಯ ಪ್ರತಿ ಗ್ರಾಮದಲ್ಲಿ ಜೀವವೈವಿಧ್ಯತೆಯ ವನಗಳನ್ನು ಅಭಿವೃದ್ಧಿಪಡಿಸಲು ಸಂಸದರು ಕ್ರಮವಹಿಸಿದ್ದಾರೆ. ಇದು ಊರಿಗೊಂದು ಪವಿತ್ರ ವನ ಯೋಜನೆ ರೂಪದಲ್ಲಿ ರಾಜ್ಯ ಸರ್ಕಾರದಿಂದ ಜಾರಿಯಾಗಿದೆ. ಜಿಲ್ಲೆಯು ಉನ್ನತ ಮಟ್ಟದ ಶಾಲಾ ಕಾಲೇಜುಗಳನ್ನು ಹೊಂದಿದ್ದು, ಅದಕ್ಕನುಗುಣವಾಗಿ ಜಿಲ್ಲಾ ಗ್ರಂಥಾಲಯದಲ್ಲಿ ಅತ್ಯುನ್ನತ ಮಟ್ಟದ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಉನ್ನತ ಮಟ್ಟದ ಆದರ್ಶಗಳನ್ನಿಟ್ಟುಕೊಂಡು ಅಧ್ಯಯನ ಮಾಡುವಂತೆ ಸಲಹೆ ನೀಡಿದರು.

ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ರಂಗಸ್ವಾಮಿ ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ತುಮಕೂರು ದೇಶದಲ್ಲಿ 6ನೇ ಸ್ಥಾನ ಹಾಗೂ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದೆ ಯೋಜನೆಗಳನ್ನು ಸಮರ್ಪಕವಾವಿ ಅನುಸ್ಠಾನಮಾಡಲಾಗುತ್ತಿದೆ ಎಂದರು.
ದಾನಿಗಳಾದ ಕಲ್ಕಿ ರಮೇಶ್ ಮಾತನಾಡಿ, ಜಿಲ್ಲೆಯಲ್ಲಿ ಅಧ್ಯಯನಕ್ಕಾಗಿ ದೂರದ ಊರಗಳಿಂದ ವಿಧ್ಯಾರ್ಥಿಗಳು ಬರುತ್ತಾರೆ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಗ್ರಂಥಾಲಯದಲ್ಲಿ ಉಚಿತ ಊಟದ ವ್ಯವಸ್ಥೆ ಆರಂಭಿಸಲಾಗುತ್ತದೆ ಇಂತಹ ಸಮಾಜೋಪಯೋಗಿ ಕಾರ್ಯಗಳನ್ನು ನಿರ್ವಹಿಸಲು ಅವಕಾಶ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.

ಓದುಗರೊಂದಿಗೆ ಸಂವಾದ: ಗ್ರಂಥಾಲಯ ಸಭಾಂಗಣದಲ್ಲಿ ಸಂಸದರು ಓದುಗರೊಂದಿಗೆ ಸಂವಾದ ನಡೆಸಿ ಸ್ಮಾರ್ಟ್ ಸಿಟಿ ವತಿಯಿಂದ ನೂತನವಾಗಿ 29 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಜಿಲ್ಲಾ ಗ್ರಂಥಾಲಯದ ವ್ಯವಸ್ಥೆ ಕುರಿತು ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಹಲವು ಮನವಿ ಸ್ವೀಕರಿಸಿ, ಪ್ರಶ್ನೆಗಳಿಗೆ ಉತ್ತರಿಸಿದರು. ಮಲ್ಲಸಂದ್ರದ ನಾಗರಾಜು ಎಂಬ ವಿದ್ಯಾರ್ಥಿಯು ಮಾತನಾಡಿ, ಈ ಗ್ರಂಥಾಲಯದಲ್ಲಿ ಗುಮಾಸ್ತ ಹುದ್ದೆಯಿಂದ ಕೆಎಎಸ್, ಐಎಎಸ್ ಉದ್ಯೋಗಾಕಾಂಕ್ಷಿಗಳು ಅಧ್ಯಯನ ಮಾಡುತ್ತಿದ್ದು, ಪ್ರತಿ ವಾರದ ಅಂತ್ಯದಲ್ಲಿ ಅನುಭವಿ ಉಪನ್ಯಾಸಕರಿಂದ ಬೋಧನೆ ಮಾಡಿದರೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು. ಸಂಸದರು ಮಾತನಾಡಿ, ನುರಿತ ಉಪನ್ಯಾಸಕರಿಂದ ಉಚಿತ ಬೋಧನ ವ್ಯವಸ್ಥೆ ಮಾಡಲಾಗುವುದು ಹಾಗೂ ಈಗಾಗಲೇ ಹಲವು ವಿದ್ಯಾರ್ಥಿಗಳು ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡುವಂತೆ ನನಗೆ ಮನವಿ ಸಲ್ಲಿಸಿದ್ದು, ಇನ್ನು ಕೆಲವೇ ದಿನಗಳಲ್ಲಿ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಗ್ರಂಥಾಲಯದಲ್ಲಿ ಉಚಿತ ಊಟದ ವ್ಯವಸ್ಥೆ ಆರಂಭಿಸಲಾಗುತ್ತದೆ. ವಿದ್ಯಾರ್ಥಿಗಳ ಅಧ್ಯಯನಕ್ಕೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು. ಗ್ರಂಥಾಲಯದ ಸದುಪಯೋಗ ಪಡಿಸಿಕೊಂಡು ಜಿಲ್ಲೆಯಿಂದ ಉತ್ತಮ ಪ್ರತಿಭೆಗಳಾಗಿ ಹೊರಹೊಮ್ಮಿ ದೇಶಕ್ಕೆ ಕೊಡುಗೆ ನೀಡುವಂತೆ ಕರೆ ನೀಡಿದರು.
ಜಿಲ್ಲಾ ಗ್ರಂಥಪಾಲಕರಾದ ನಾಗರಾಜು, ನಗರ ಗ್ರಂಥಪಾಲಕರಾದ ಬಸವರಾಜು, ವಿಧ್ಯಾರ್ಥಿಗಳು ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!