ಹುಳಿಯಾರು: ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಸಕ್ತ ಸಾಲಿನ ಎಲ್ ಕೆಜಿ ಪ್ರವೇಶ ನೀಡುವ ಸಲುವಾಗಿ ಅರ್ಜಿ ಹಾಕಿದ್ದ ಪೋಷಕರ ಸಭೆಯನ್ನು ಮಂಗಳವಾರ ಕರೆಯಲಾಗಿತ್ತು.
ಈ ಸಭೆಯಲ್ಲಿ ಪ್ರಾಚಾರ್ಯರು ಮಾತನಾಡುವಾಗ ಸರ್ಕಾರಿ ಶಾಲೆಗೆ ಅನುದಾನ ಬರುವುದು ಕಡಿಮೆ, ಬಂದ ಅನುದಾನದಲ್ಲಿ ಪೇಪರ್, ಪೆನ್ನು, ನೀರು ಹೀಗೆ ತರ್ತು ಅಗತ್ಯಕ್ಕೆ ವೆಚ್ಚವಾಗುತ್ತದೆ. ಪರಿಣಾಮ ಕೊಠಡಿಗಳ ದುರಸ್ತಿ, ಬಣ್ಣ, ಡೆಸ್ಕ್ ಇವುಗಳಿಗೆ ಹಣವಿರುವುದಿಲ್ಲ. ಕಳೆದ ವರ್ಷ ಪೋಷಕರೆಲ್ಲರೂ ಸೇರಿ ಡೆಸ್ಕ್ ಮಾಡಿಸಿಕೊಟ್ಟರು. ಅದರಂತೆ ಪೋಷಕರು ತಮ್ಮ ಮಕ್ಕಳು ಓದುತ್ತಿರುವ ಶಾಲೆಗೆ ವಸ್ತು ರೂಪದಲ್ಲಿ ಏನಾದರೂ ನೆರವು ನೀಡಿ ಎಂದು ಕೇಳಿಕೊಂಡರು.
ಇದಕ್ಕೆ ಭಟ್ಟರಹಳ್ಳಿ ರಾಮಚಂದ್ರಯ್ಯ ಎನ್ನುವ ಪೋಷಕರು ಆಕ್ಷೇಪ ವ್ಯಕ್ತಪಡಿಸಿದರು. ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸುತ್ತಿದ್ದಾರೆಂದರೆ ಅವರು ಬಡವರಾಗಿರುತ್ತಾರೆ. ಇಂದಿನ ಬೆಲೆ ಏರಿಕೆಯ ನಡುವೆ ಸಂಸಾರ ನಡೆಸುವುದೇ ಕಷ್ಟವಾಗಿರುವಾಗ ಶಾಲೆಗೆ ಎಲ್ಲಿಂದ ಹಣ ಕೊಡುತ್ತಾರೆ. ಅಷ್ಟಕ್ಕೂ ಪೋಷಕರೇ ಹಣ ಕೊಟ್ಟು ಶಾಲೆ ದುರಸ್ತಿ ಮಾಡಿಸಿದರೆ ಶಿಕ್ಷಣ ಇಲಾಖೆ ಇರುವುದಾದರೂ ಏಕೆ ಎಂದು ಖಾರವಾಗಿ ಪ್ರಶ್ನಿಸಿದರು.
ಸರ್ಕಾರದ ಗಮನಕ್ಕೆ ತಂದು ಅಗತ್ಯ ಅನುದಾನ ಬಿಡುಗಡೆ ಮಾಡಿಸಿಕೊಳ್ಳುವುದು ಅಧಿಕಾರಿಗಳ ಕರ್ತವ್ಯವಾಗಿರುತ್ತದೆ. ಅಧಿಕಾರಿಗಳಿಗೆ ಪಟ್ಟು ಹಿಡಿದು ನಮ್ಮ ಶಾಲೆಗೆ ಇಂತಿಷ್ಟು ಕೆಲಸಗಳು ಆಗಲೇ ಬೇಕು ಎಂದು ಶಾಲಾಭಿವೃದ್ಧಿ ಸಮಿತಿ ಹಾಗೂ ಶಾಲಾ ಮುಖ್ಯಸ್ಥರ ಜವಾಬ್ದಾರಿಯಾಗಿರುತ್ತದೆ. ಕಳೆದ ವರ್ಷ ಶಾಲಾ ಕಟ್ಟಡ ದುರಸ್ತಿಗೆ ಮೇಲಧಿಕಾರಿಗಳಿಗೆ ಪತ್ರ ಬರೆದ ನೀವು ಇದೂವರೆವಿಗೂ ಏನಾಗಿದೆ ಎಂದು ಕೇಳಿಲ್ಲ, ಮತ್ತೊಂದು ಮನವಿ ಸಲ್ಲಿಸಿಲ್ಲ. ಅಧಿಕಾರಿಗಳ ಬಳಿ ನಿಯೋಗ ಕರೆದೊಯ್ದ ಒತ್ತಡ ಹಾಕಿಲ್ಲ ಎಂದು ಆರೋಪಿಸಿದರು.
ನಿಮಗೆ ಮೇಲಧಿಕಾರಿಗಳನ್ನು ಕೇಳಲು ಆಗದಿದ್ದರೆ ಮೇಲಧಿಕಾರಿಗಳನ್ನು ಕರೆಸಿ ಒಂದು ಸಭೆ ಮಾಡಿ, ಪೋಷಕರೇ ಅವನ್ನು ಕೇಳಿ ತರ್ತು ಆಗಬೇಕಿರುವ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳುತ್ತೇವೆ. ಕಳೆದ ಮೂರ್ನಾಲ್ಕು ವರ್ಷ ಕಳೆದರೂ ಎಂಪಿಎಸ್ ಶಾಲೆಯಲ್ಲಿ ಸೋರುವ ಕೊಠಡಿ ದುರಸ್ತಿ ಮಾಡಿಸಿಲ್ಲ ಎಂದರೆ ಏನರ್ಥ ಎಂದು ಪ್ರಶ್ನಿಸಿದರು. ಇದರಿಂದ ವಿಚಲಿತರಾದ ಪ್ರಾಚಾರ್ಯರು ನಾವು ಕೆಲಸ ಮಾಡುತ್ತಿಲ್ಲ ಎನ್ನುವ ಮಾತನ್ನು ಹಿಂಪಡೆಯಿರಿ, ನಾವು ಓಡಾಡಿದ ಫಲವಾಗಿ ಹೊಸ ಕೊಠಡಿಗಳಾಗಿವೆ. ಮುಂದೆಯೂ ಅನುದಾನ ತರುತ್ತೇವೆ. ಆದರೆ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕಲ್ವಾ ಎಂದರಲ್ಲದೆ ಮುಂದಿನ ಬಾರಿ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ಕರೆಯುತ್ತೇವೆ. ನೀವೇ ನಿಮ್ಮ ಅಹವಾಲು ಹೇಳಿಕೊಳ್ಳಿ ಎಂದು ಚರ್ಚೆಗೆ ತೆರೆ ಎಳೆದರು.
Comments are closed.