ಗುಬ್ಬಿ: ಮಾದಕ ವಸ್ತುಗಳ ಸೇವನೆ ತಡೆಗಟ್ಟಲು ನಾವು ಎಷ್ಟೇ ಹೋರಾಟ ಮಾಡಿದರು ಸಾಧ್ಯವಾಗುವುದಿಲ್ಲ. ಅದರ ಬದಲಿಗೆ ನಮ್ಮ ಕುಟುಂಬ ಸದಸ್ಯರು ದುಶ್ಚಟ ದುರಭ್ಯಾಸಗಳಿಗೆ ಒಳಗಾಗಿದ್ದರೆ ಅವರನ್ನು ಮನಪರಿವರ್ತನೆ ಮಾಡುವುದೇ ಒಳಿತು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ತಿಳಿಸಿದರು.
ತಾಲೂಕಿನ ಹಬ್ಬತನಹಳ್ಳಿ ಗ್ರಾಮದಲ್ಲಿ ಜ್ಞಾನ ಗಂಗಾ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನೆ ಹಾಗೂ ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಒಂದೊಂದು ಕುಟುಂಬಗಳಲ್ಲಿ ಈ ಪರಿವರ್ತನೆ ಯಾದರೆ ಗ್ರಾಮಗಳು ಗ್ರಾಮದಿಂದ ತಾಲೂಕು ಜಿಲ್ಲೆಗಳಲ್ಲಿ ಪರಿವರ್ತನೆ ಮಾಡಲು ಸಾಧ್ಯವಾಗುವುದು ಎಂದು ತಿಳಿಸಿದರು.
ತಾಲೂಕಿನ ಯೋಜನಾಧಿಕಾರಿ ರಾಜೇಶ್ ಮಾತನಾಡಿ ಜ್ಞಾನವಿಕಾಸ ಕಾರ್ಯಕ್ರಮದ ಬಗ್ಗೆ ಮಾತೃಶ್ರೀ ಡಾ.ಹೇಮಾವತಿ ಅಮ್ಮನವರ ಆಶಯಗಳು ಹಾಗೂ ಕನಸುಗಳ ಬಗ್ಗೆ ವಿಜ್ಞಾನ ವಿಕಾಸ ಕೇಂದ್ರಗಳಲ್ಲಿ ತಿಂಗಳುವಾರು ಮಾಡುವಂತಹ ಆರೋಗ್ಯ ಶಿಕ್ಷಣ ಕಾನೂನು ಸರಕಾರಿ ಸೌಲಭ್ಯಗಳು ಸ್ವಾಉದ್ಯೋಗ, ಪೌಷ್ಟಿಕ ಆಹಾರ ವಿಚಾರಗಳಿಗೆ ಪೂರಕವಾಗಿ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಕೊಡಿಸುವುದರ ಜೊತೆಗೆ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಗುವುದು, ಜ್ಞಾನಗಂಗಾ ಎಂಬ ಗಿಡವನ್ನು ಇಂದು ನೆಟ್ಟಿದ್ದು ಆ ಗಿಡವೋ ಉತ್ತಮ ರೀತಿಯಲ್ಲಿ ಬೆಳೆಯುವುದರ ಜೊತೆಗೆ ಉತ್ತಮ ಫಲ ಕೊಡಬೇಕಾದರೆ ಅದರ ಲಾಲನೆ ಪಾಲನೆ ಕೇಂದ್ರದ ಸದಸ್ಯರ ಜವಾಬ್ದಾರಿಯಾಗಿರುತ್ತದೆ. ಪ್ರತಿ ತಿಂಗಳು ನಿಗದಿಪಡಿಸಿದ ಸಮಯ ಸ್ಥಳ ದಿನಾಂಕದಲ್ಲಿ ಸಭೆ ಮಾಡುವುದರ ಮೂಲಕ ಕೇಂದ್ರವನ್ನು ಬಲಪಡಿಸಬೇಕೆಂದರು.
ಸಂಪನ್ಮೂಲ ವ್ಯಕ್ತಿ ಪಾಲನೇತ್ರ ಮಾತನಾಡಿ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಪ್ರತಿ ಕುಟುಂಬದಲ್ಲು ಒಬ್ಬ ಮಹಿಳೆ ತನ್ನ ಕುಟುಂಬದ ಯಾವ ಸದಸ್ಯ ದುಶ್ಚಟಗಳಿಗೆ ಬಲಿಯಾಗಿರುತ್ತಾರೆ. ಅವರನ್ನು ಮನಃಪರಿವರ್ತನೆ ಮಾಡುವುದರ ಮೂಲಕ ದೂರ ಮಾಡಿದರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರದ ಅಧ್ಯಕ್ಷೆ ಶಾರದಮ್ಮ, ಗ್ರಾಮ ಪಂಚಾಯಿತಿ ಸದಸ್ಯೆ ನಾಗರತ್ನ, ಮೇಲ್ವಿಚಾರಕಿ ದೀಪಿಕಾ, ರೇಣುಕಾ ಇನ್ನಿತರರು ಹಾಜರಿದ್ದರು.
Comments are closed.