ನಾಲಾ ಗೇಟ್, ವಾಲ್ ಗಳನ್ನು ಸುಸ್ಥಿತಿಯಲ್ಲಿಡಿ

ಜುಲೈನಲ್ಲಿ ಜಿಲ್ಲೆಗೆ ಹೇಮೆ ನೀರು ಹರಿಯುವ ಸಾಧ್ಯತೆ: ಸುರೇಶ್ ಗೌಡ

408

Get real time updates directly on you device, subscribe now.


ತುಮಕೂರು: ಜುಲೈ ಮೊದಲ ವಾರದಿಂದ ಹೇಮಾವತಿ ಜಲಾಶಯದಿಂದ ಜಿಲ್ಲೆಗೆ ನೀರು ಬಿಡುಗಡೆಯಾಗುವ ಸಾಧ್ಯತೆ ಇರುವುದರಿಂದ ಜೂನ್ 25 ರೊಳಗೆ ಹೇಮಾವತಿ ನಾಲಾವಲಯದ ಅಧಿಕಾರಿಗಳು ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಗೆ ಬರುವ ಎಲ್ಲಾ ಗೇಟ್, ವಾಲ್ ಗಳನ್ನು ಅಗತ್ಯ ರಿಪೇರಿ ಮಾಡಿಸಿ ಸುಸ್ಥಿತಿಯಲ್ಲಿಡುವಂತೆ ಶಾಸಕ ಬಿ.ಸುರೇಶ್ ಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಗರದ ಹೇಮಾವತಿ ನಾಲಾ ವಲಯದ ಮುಖ್ಯ ಇಂಜಿನಿಯರ್ ಎಂ.ವರದಯ್ಯ ಅವರ ನೇತೃತ್ವದಲ್ಲಿ ಹೇಮಾವತಿ ಮತ್ತು ಎತ್ತಿನ ಹೊಳೆ ಯೋಜನೆಗಳ ಇಇ, ಎಇಇ ಹಾಗೂ ಸಿಬ್ಬಂದಿ ಯೊಂದಿಗೆ ಸಭೆ ನಡೆಸಿದ ಅವರು ಅಧಿಕಾರಿಗಳು ಹೆಬ್ಬೂರು, ಗೂಳೂರು, ಬೆಳ್ಳಾವಿ ಏತ ನೀರಾವರಿಗೆ ಸಂಬಂಧಿಸಿದಂತೆ ಪಂಪು, ಮೋಟಾರು ಸುಸ್ಥಿತಿಯಲ್ಲಿಟ್ಟುಕೊಂಡು ನಾಲೆಗೆ ನೀರು ಬಂದ ತಕ್ಷಣ ಮೋಟಾರ್ ರನ್ ಮಾಡಲು ಅಗತ್ಯ ಕ್ರಮ ವಹಿಸಬೇಕೆಂದರು.

ಹೆಬ್ಬೂರು ಗೂಳೂರು ಏತನೀರಾವರಿ ಯೋಜನೆ ಜಾರಿಯಾಗಿ 15 ವರ್ಷ ಕಳೆದರು ಇದುವರೆಗೂ ಜನರಿಗೆ ಸಮರ್ಪಕ ನೀರು ಒದಗಿಸಲು ಸಾಧ್ಯವಾಗಿಲ್ಲ. ಈ ನೀರನ್ನೇ ಆಧಾರವಾಗಿಟ್ಟುಕೊಂಡು ರೂಪಿಸಿದ ಐದಾರು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ನೆನೆಗುದಿಗೆ ಬಿದ್ದಿವೆ. ಹಾಗಾಗಿ ಈ ಬಾರಿ ಸರ್ವ ಸನ್ನದ್ದರಾಗಿ ನಿಗದಿಪಡಿಸಿರುವ ನೀರನ್ನು ಡ್ರಾ ಮಾಡಿ ಎಲ್ಲಾ ಕೆರೆಗಳನ್ನು ತುಂಬಿಸಬೇಕಿದೆ. ಹಾಗಾಗಿ ಈಗಿರುವ ಮೋಟಾರು, ಪಂಪುಗಳ ಜೊತೆಗೆ ಹೆಚ್ಚುವರಿಯಾಗಿ 2 ಮೋಟಾರ್ ಸ್ಟಾಂಡ್ ಬೈ ಇಟ್ಟುಕೊಳ್ಳಲು ಅಗತ್ಯವಿರುವ ಅನುದಾನ ಕಾಯ್ದಿರಿಸಿ ನಿರ್ವಹಣೆ ಡಿಪಿಆರ್ ತಯಾರಿಸುವಂತೆ ಸೂಚನೆ ನೀಡಿದರು.

ಹೇಮಾವತಿ ಯೋಜನೆಯಡಿಯಲ್ಲಿ ಹೆಬ್ಬೂರು- ಗೂಳೂರು ಮತ್ತು ಬೆಳ್ಳಾವಿ ಏತ ನೀರಾವರಿಯ ಪಂಪ್ ಹೌಸ್ಗಳಿಗೆ ವಿದ್ಯುತ್ ಸರಬರಾಜು ಮಾಡುವ ವಿದ್ಯುತ್ ಲೈನ್ ಗಳಲ್ಲಿ ಏನಾದರೂ ತೊಂದರೆಗಳಿದ್ದರೆ ಸಂಬಂಧಪಟ್ಟ ಅಧಿಕಾರಿ ಗಳೊಂದಿಗೆ ಮಾತನಾಡಿ, ಈ ಎರಡು ಯೋಜನೆಗಳ ಮೋಟಾರುಗಳು 24*7 ರನ್ ಮಾಡಲು ಅಗತ್ಯವಿರುವ ನಿರಂತರ ವಿದ್ಯುತ್ ಸರಬರಾಜಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ ಶಾಸಕರು ಬಾಕಿ ಇರುವ ಸುಮಾರು 4.50 ಕೋಟಿ ವಿದ್ಯುತ್ ಬಿಲ್ ಪಾವತಿಗೆ ಕೂಡಲೇ ಕ್ರಮ ಕೈಗೊಳ್ಳಲು ಮುಖ್ಯ ಇಂಜಿನಿಯರ್ ಎಂ.ವರದಯ್ಯ ಅವರಿಗೆ ನಿರ್ದೇಶನ ನೀಡಿದರು.

ಹೇಮಾವತಿ ನಾಲೆಯಿಂದ ಡ್ರಾ ಮಾಡುವ ನೀರು ಸರಾಗವಾಗಿ ಕೆರೆಗಳಿಗೆ ಹರಿಯಲು ಅಗತ್ಯವಿರುವ ಕಾಲುವೆ ದುರಸ್ಥಿ ಮಾಡಿಸಿ ಅಡೆತಡೆಯಿಲ್ಲದೆ ನೀರು ಕೆರೆಗೆ ಹರಿಯಲು ಕ್ರಮ ವಹಿಸಲು ಸೂಚಿಸಿದ ಶಾಸಕರು, ಹೆಬ್ಬೂರು- ಗೂಳೂರು ಮತ್ತು ಬೆಳ್ಳಾವಿ ಏತ ನೀರಾವರಿ ನಿರ್ವಹಣೆಗೆ ಸಂಬಂಧಪಟ್ಟ ಅನುದಾನ ಬಿಡುಡಗೆ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಅವರೊಂದಿಗೆ ಮಾತನಾಡಿ ಅಗತ್ಯವಿರುವ ಅನುದಾನ ಬಿಡುಗಡೆಗೆ ಕ್ರಮ ವಹಿಸುತ್ತೇನೆ. ಈ ಬಾರಿ ಎರಡು ಏತ ನೀರಾವರಿ ಗಳಿಂದ ನಿಗದಿಪಡಿಸಿದ ಕೆರೆಗಳಿಗೆ ನೀರು ತುಂಬಿಸಿ ಯೋಜನೆಯ ಆಶಯ ಪೂರ್ಣಗೊಳಿಸಲು ಅಧಿಕಾರಿಗಳು ಕೈಜೋಡಿಸುವಂತೆ ಶಾಸಕ ಬಿ.ಸುರೇಶಗೌಡ ಸಲಹೆ ನೀಡಿದರು.

ಹೆಬ್ಬೂರು- ಗೂಳೂರು ಏತ ನೀರಾವರಿ ಎರಡನೇ ಹಂತದ ಕಾರ್ಯ ಪೂರ್ಣಗೊಂಡಿದ್ದು, ಪೈಪ್ ಲೈನ್ ಗೆ 13 ಹಳ್ಳಿಗಳಲ್ಲಿ ಸುಮಾರು 7 ಎಕರೆಗೂ ಹೆಚ್ಚು ಜಾಗ ಭೂಸ್ವಾಧೀನ ಮಾಡಿಕೊಳ್ಳಬೇಕಿದೆ. ನೇರ ಖರೀದಿ ಅಡಿಯಲ್ಲಿ ಸಂಬಂಧಪಟ್ಟ ಭೂಸ್ವಾಧೀನ ಅಧಿಕಾರಿಗಳು ಮತ್ತು ಭೂಮಿ ಕಳೆದುಕೊಳ್ಳುವ ರೈತರೊಂದಿಗೆ ಮಾತುಕತೆ ನಡಸಲು ಮುಂದಿನ ಮಂಗಳವಾರ ಸಭೆ ನಡೆಸಲು ಕ್ರಮ ಕೈಗೊಳ್ಳುವಂತೆ ಮುಖ್ಯ ಇಂಜಿನಿಯರ್ ಎಂ.ವರದಯ್ಯ ಮತ್ತು ಇಇ ಅವರಿಗೆ ಸೂಚಿಸಿದರು.

ಅರಿಯೂರು ಕೆರೆಯ ಭಾಗದಲ್ಲಿ ಕಲುಷಿತ ಮಾಡದಂತೆ ಪೆನ್ಸಿಂಗ್ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದ ಅವರು ಹೇಮಾವತಿ ಮತ್ತು ಎತ್ತಿನಹೊಳೆ ಯೋಜನೆಯಡಿಯಲ್ಲಿ ಕೈಗೊಂಡಿರುವ ಎಸ್ ಸಿಪಿ ಮತ್ತು ಟಿಎಸ್ಪಿ ಕಾಮಗಾರಿಗಳನ್ನು ನಿಮಯಬದ್ದವಾಗಿ ನಿರ್ವಹಿಸುವಂತೆ ತಾಕೀತು ಮಾಡಿದರು. ಅಲ್ಲದೆ ಎತ್ತಿನಹೊಳೆಯಿಂದ ತುಮಕೂರು ತಾಲೂಕು ಉರ್ಡಿಗೆರೆ ಹೋಬಳಿ ದುರ್ಗದಹಳ್ಳಿ, ತಿಮ್ಮನಾಯಕನ ಹಳ್ಳಿ ಮತ್ತು ಹಾಲುಗೊಂಡನ ಹಳ್ಳಿ ಕೆರೆಗಳಿಗೆ ನೀರು ತುಂಬಿಸಲು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಪಾಯಿಂಟ್ ಗುರುತು ಮಾಡುವಂತೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಹೇಮಾವತಿ ಮುಖ್ಯ ಇಂಜಿನಿಯರ್ ಎಂ.ವರದಯ್ಯ, ಹೇಮಾವತಿ ತುಮಕೂರು ವಿಭಾಗದ ಇಇ ಮುರುಳಿ, ಹೆಬ್ಬೂರು ವಿಭಾಗದ ಇಇ ಕೃಷ್ಣ, ನಾಗವಲ್ಲಿ ವಿಭಾಗದ ಇಇ ವೀರೇಂದ್ರ ಹಾಗೂ ಎಲ್ಲಾ ವಿಭಾಗಗಳ ಎಇಇ ಹಾಗೂ ಸಿಬ್ಬಂದಿ ಇದ್ದರು.

Get real time updates directly on you device, subscribe now.

Comments are closed.

error: Content is protected !!